TikTok Layoff: ಟಿಕ್​​ಟಾಕ್ ಭಾರತ ಘಟಕದ ಎಲ್ಲ ಉದ್ಯೋಗಿಗಳ ವಜಾ; ವರದಿ

ಬೈಟ್​​​ಡ್ಯಾನ್ಸ್ ಒಡೆತನದ ಟಿಕ್​ಟಾಕ್ ಭಾರತ ಘಟಕದ 40 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ವಜಾಗೊಳ್ಳುವ ಉದ್ಯೋಗಿಗಳಿಗೆ 9 ತಿಂಗಳ ವೇತನವನ್ನು ಪರಿಹಾರವನ್ನಾಗಿ ನೀಡಲಾಗುವುದು ಎಂಬುದಾಗಿ ಕಂಪನಿ ತಿಳಿಸಿದೆ ಎಂದು ವರದಿಯಾಗಿದೆ.

TikTok Layoff: ಟಿಕ್​​ಟಾಕ್ ಭಾರತ ಘಟಕದ ಎಲ್ಲ ಉದ್ಯೋಗಿಗಳ ವಜಾ; ವರದಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 10, 2023 | 10:55 AM

ನವದೆಹಲಿ: ಚೀನಾದ ವಿಡಿಯೋ ಆ್ಯಪ್ ಟಿಕ್​ಟಾಕ್ (TikTok) ಭಾರತ ಘಟಕದ ಎಲ್ಲ ಉದ್ಯೋಗಿಗಳನ್ನು ವಜಾಗೊಳಿಸಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಬೈಟ್​​​ಡ್ಯಾನ್ಸ್ (ByteDance) ಒಡೆತನದ ಟಿಕ್​ಟಾಕ್ ಭಾರತ ಘಟಕದ 40 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ವಜಾಗೊಳ್ಳುವ ಉದ್ಯೋಗಿಗಳಿಗೆ 9 ತಿಂಗಳ ವೇತನವನ್ನು ಪರಿಹಾರವನ್ನಾಗಿ ನೀಡಲಾಗುವುದು ಎಂಬುದಾಗಿ ಕಂಪನಿ ತಿಳಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಫೆಬ್ರವರಿ 28ರಂದು ಕೊನೆಯ ಉದ್ಯೋಗದ ದಿನವಾಗಿರಲಿದೆ. ಚೀನಾ ಆ್ಯಪ್​​ಗಳ ಬಗ್ಗೆ ಭಾರತ ಸರ್ಕಾರದ ಕಠಿಣ ನಿಲುವಿನ ಕಾರಣ ಸದ್ಯಕ್ಕಂತೂ ಭಾರತದಲ್ಲಿ ಕಾರ್ಯಾಚರಣೆ ಪುನರಾರಂಭಿಸುವ ಯೋಚನೆ ಇಲ್ಲ. ಹೀಗಾಗಿ ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ಉದ್ಯೋಗಿಗಳಿಗೆ ಟಿಕ್​​ಟಾಕ್ ತಿಳಿಸಿದೆ.

ಟಿಕ್​ಟಾಕ್​​ಗೆ ನಿಷೇಧ ಹೇರಿದ ಬಳಿಕ ಅದರಲ್ಲಿ ಕಾರ್ಯನಿರ್ವಹಿಸುವ ಭಾರತದ ಉದ್ಯೋಗಿಗಳು ಬ್ರೆಜಿಲ್ ಮತ್ತು ದುಬೈಯಲ್ಲಿ ಇದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರತಾ ಕಾರಣಗಳನ್ನು ನೀಡಿ ಟಿಕ್​ಟಾಕ್ ಸೇರಿದಂತೆ ಸುಮಾರು 300 ಚೀನಾ ಆ್ಯಪ್​ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. 2020ರಲ್ಲಿ ಟಿಕ್​ಟಾಕ್ ಅನ್ನು ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಆ್ಯಪ್​ಗೆ ಭಾರತದಲ್ಲಿ 200 ದಶಲಕ್ಷ ಬಳಕೆದಾರರಿದ್ದರು.

ಇದನ್ನೂ ಓದಿ: Yahoo Layoff: ಯಾಹೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಚೀನಾದ ಟಿಕ್​ಟಾಕ್​ ಅಮೆರಿಕದಲ್ಲಿಯೂ ನಿಷೇಧದ ಭೀತಿ ಎದುರಿಸುತ್ತಿದೆ. ಖಾಸಗಿತನದ ಕಾರಣಗಳನ್ನು ನೀಡಿ ಅಮೆರಿಕದ ಸರ್ಕಾರಿ ಡಿವೈಸ್​​ಗಳಲ್ಲಿ ಮತ್ತು ಕೆಲವು ಕಾಲೇಜು ಕ್ಯಾಂಪಸ್​​​ಗಳಲ್ಲಿ ಈಗಾಗಲೇ ಟಿಕ್​ಟಾಕ್​ ಅನ್ನು ನಿಷೇಧಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಚೀನಾ ಆ್ಯಪ್​​ಗಳ ನಿಷೇಧ ಸಂಬಂಧ ಚರ್ಚೆಯಾಗಿತ್ತು. ನಂತರ ಜೋ ಬೈಡನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರ್ಕಾರಿ ಸಂಸ್ಥೆಗಳ ಡಿವೈಸ್​​​ಗಳಲ್ಲಿ ಟಿಕ್​ಟಾಕ್ ನಿಷೇಧ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದರು.

ಮುಂದುವರಿದ ಉದ್ಯೋಗ ಕಡಿತ

ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮುಂದುವರಿದಿದ್ದು, ಟಿಕ್​ಟಾಕ್​ ಕೂಡ ಆ ಸಾಲಿಗೆ ಸೇರಿದೆ. ಈ ಮಧ್ಯೆ, ಟೆಕ್ ಕಂಪನಿ ಯಾಹೂ ಕೂಡ ಶೇ 20ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಪರಿಣಾಮವಾಗಿ ಯಾಹೂವಿನ ತಂತ್ರಜ್ಞಾನ ಘಟಕದ 1,600ಕ್ಕೂ ಹೆಚ್ಚು ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ. 7,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಅಮೆರಿಕದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ ಗುರುವಾರ ಘೋಷಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ