Yahoo Layoff: ಯಾಹೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಟೆಕ್ ಕಂಪನಿ ಯಾಹೂ ಕೂಡ ಶೇ 20ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ತಂತ್ರಜ್ಞಾನ ಘಟಕದ ಪುನರ್​​ರಚನೆ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಪನಿ ತಿಳಿಸಿದೆ

Yahoo Layoff: ಯಾಹೂ ಉದ್ಯೋಗ ಕಡಿತ; ವಜಾಗೊಳ್ಳಲಿದ್ದಾರೆ 1,600ಕ್ಕೂ ಹೆಚ್ಚು ಉದ್ಯೋಗಿಗಳು
ಯಾಹೂImage Credit source: Reuters
Follow us
Ganapathi Sharma
|

Updated on:Feb 10, 2023 | 10:19 AM

ನವದೆಹಲಿ: ವಾಲ್ಟ್ ಡಿಸ್ನಿ 7,000 ಮಂದಿ ಉದ್ಯೋಗಿಗಳ ವಜಾ ಘೋಷಿಸಿದ ಬೆನ್ನಲ್ಲೇ ಟೆಕ್ ಕಂಪನಿ ಯಾಹೂ (Yahoo) ಕೂಡ ಶೇ 20ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ (Layoff). ತಂತ್ರಜ್ಞಾನ ಘಟಕದ ಪುನರ್​​ರಚನೆ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಪನಿ ತಿಳಿಸಿದೆ ಎಂದು ಕಂಪನಿಯ ಮೂಲಗಳನ್ನು ಉಲ್ಲೇಖಿಸಿ ‘ಆ್ಯಕ್ಷಿಯೋಸ್’ ಮಾಧ್ಯಮ ವರದಿ ಮಾಡಿದೆ. ಈ ಉದ್ಯೋಗ ಕಡಿತವು ಯಾಹೂವಿನ ತಂತ್ರಜ್ಞಾನ ಘಟಕದ ಶೇ 5ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. 1,600ಕ್ಕೂ ಹೆಚ್ಚು ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮತ್ತೆ ಮುಂದುವರಿದಿದೆ. 7,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಅಮೆರಿಕದ ಮನರಂಜನಾ ಮಾಧ್ಯಮ ವಾಲ್ಟ್ ಡಿಸ್ನಿ ಗುರುವಾರ ಘೋಷಿಸಿತ್ತು.

ಗ್ರಾಹಕರು ವೆಚ್ಚ ಕಡಿಮೆ ಮಾಡಿರುವುದು ಸ್ಟ್ರೀಮಿಂಗ್ ಚಂದಾದಾರಿಕೆ ಮೇಲೆ ಪರಿಣಾಮ ಬೀರಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಮೊದಲ ಬಾರಿಗೆ ಚಂದಾದಾರರ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ವಾಲ್ಟ್ ಡಿಸ್ನಿ ತಿಳಿಸಿತ್ತು. ಮೂರು ತಿಂಗಳ ಹಿಂದಿನ ಅಂಕಿಸಂಖ್ಯೆಗೆ ಹೋಲಿಸಿದರೆ ಡಿಸೆಂಬರ್ 31ರ ವೇಳೆಗೆ ಡಿಸ್ನಿ ಪ್ಲಸ್​​ ಚಂದಾದಾರರ ಸಂಖ್ಯೆ 168.1 ದಶಲಕ್ಷಕ್ಕೆ ಇಳಿಕೆಯಾಗಿತ್ತು. ಆದಾಗ್ಯೂ ಡಿಸ್ನಿಯ ಷೇರು ಮೌಲ್ಯ ಶೇ 8ರ ವೃದ್ಧಿಯೊಂದಿಗೆ ವಹಿವಾಟು ನಡೆಸುತ್ತಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Disney Layoff: ವಾಲ್ಟ್ ಡಿಸ್ನಿಯಿಂದ 7000 ಉದ್ಯೋಗಿಗಳ ವಜಾ

ಅಮೆರಿಕದ ಅನೇಕ ತಂತ್ರಜ್ಞಾನ ಕಂಪನಿಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ಅತಿದೊಡ್ಡ ಟೆಕ್ ಕಂಪನಿ ಗೂಗಲ್​ ಜನವರಿಯಲ್ಲಿ 12,000 ಉದ್ಯೋಗಿಗಳ ವಜಾ ಘೋಷಿಸಿತ್ತು. ಅಮೆಜಾನ್, ಮೆಟಾ, ಟ್ವಿಟರ್, ಪಿಂಟ್​ರೆಸ್ಟ್, ಫಿಲಿಪ್ಸ್, ಐಬಿಎಂ ಸೇರಿದಂತೆ ಹತ್ತಾರು ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲೂ ವಿಪ್ರೋ, ಇನ್ಫೋಸಿಸ್, ಬೈಜೂಸ್ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಲಾಭದಲ್ಲಿ ಕುಸಿತ, ಸಂಭಾವ್ಯ ಆರ್ಥಿಕ ಹಿಂಜರಿತಕ್ಕೆ ಸಿದ್ಧರಾಗುವ ಪ್ರಕ್ರಿಯೆಯ ಭಾಗವಾಗಿ ಮತ್ತು ವೆಚ್ಚ ಕಡಿತದ ಉದ್ದೇಶದೊಂದಿಗೆ ಕಂಪನಿಗಳು ಉದ್ಯೋಗಿಗಳ ವಜಾಗೊಳಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Fri, 10 February 23