
ವಾಷಿಂಗ್ಟನ್, ಅಕ್ಟೋಬರ್ 30: ಚೀನಾ ಮೇಲೆ ಅಮೆರಿಕ ವಿಧಿಸುತ್ತಿರುವ ಶೇ. 57ರಷ್ಟು ಟ್ಯಾರಿಫ್ ಅನ್ನು ಶೇ. 47ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸೌತ್ ಕೊರಿಯಾದ ಬುಸನ್ ನಗರದಲ್ಲಿ (Busan, South Korea) ನಡೆಯುತ್ತಿರುವ ಎಪಿಇಸಿ ಶೃಂಗಸಭೆಗೆ ಮುನ್ನ ಚೀನಾ ಮುಖ್ಯಸ್ಥ ಶಿ ಜಿನ್ಪಿಂಗ್ (Xi Jinping) ಅವರನ್ನು ಡೊನಾಲ್ಡ್ ಟ್ರಂಪ್ ಭೇಟಿ ಮಾಡಿ ಟ್ರೇಡ್ ಡೀಲ್ ಮಾತುಕತೆ ಅಂತಿಮಗೊಳಿಸಿರುವುದು ತಿಳಿದುಬಂದಿದೆ. ಈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಚೀನಾ ಮೇಲಿನ ಟ್ಯಾರಿಫ್ ಅನ್ನು ಶೇ. 10ರಷ್ಟು ಇಳಿಸುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಚೀನಾ ಅಧ್ಯಕ್ಷರ ಭೇಟಿಯನ್ನು ಅದ್ಭುತ ಎಂದು ಯಥಾಪ್ರಕಾರ ಹೊಗಳಿಸಿದ ಡೊನಾಲ್ಡ್ ಟ್ರಂಪ್, ತಮ್ಮಿಬ್ಬರ ದೇಶಗಳ ಮಧ್ಯೆ ವ್ಯಾಪಾರ ಮತ್ತು ಸಹಕಾರ ಕ್ಷೇತ್ರದಲ್ಲಿ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ಅಧ್ಯಕ್ಷ ಷಿ ಭೇಟಿಗೂ ಮುನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಸೂಚಿಸಿದ್ದ ಟ್ರಂಪ್
‘ಹಲವು ಮುಖ್ಯ ಅಂಶಗಳ ವಿಚಾರದಲ್ಲಿ ನಿರ್ಣಯಕ್ಕೆ ಬಂದಿದ್ದೇವೆ. ಶೀಘ್ರದಲ್ಲೇ ಈ ವಿಚಾರಗಳನ್ನು ತಮಗೆ ತಿಳಿಸಲಿದ್ದೇವೆ’ ಎಂದು ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.
ಚೀನಾದ ಫೆಂಟಾನಿಲ್ ಸಂಬಂಧಿತ ಸರಕುಗಳ (Fentanyl related imports) ಆಮದು ಮೇಲೆ ಅಮೆರಿಕದ ಟ್ಯಾರಿಫ್ ಅನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗುತ್ತದೆ. ಇದರಿಂದ ಒಟ್ಟಾರೆ ಟ್ಯಾರಿಫ್ ದರ ಶೇ. 47ಕ್ಕೆ ಇಳಿಯುತ್ತದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ, ಚೀನಾ ಜೊತೆ ಅಮೆರಿಕ ವಿರಳ ಭೂ ಖನಿಜಗಳಿಗಾಗಿ (Rare Earth Minerals) ಒಂದು ವರ್ಷದ ಡೀಲ್ ಮಾಡಿಕೊಂಡಿದೆ. ಸೋಯಾಬೀನ್ ಸೇರಿದಂತೆ ಅಮೆರಿಕ ಕೃಷಿ ಉತ್ಪನ್ನಗಳನ್ನು ಖರೀದಿಸಲು ಚೀನಾ ಒಪ್ಪಿದೆ. ಅಕ್ರಮ ಫೆಂಟಾನಿಲ್ ವ್ಯಾಪಾರವನ್ನು ನಿಯಂತ್ರಿಸಲು ಚೀನಾ ಕ್ರಮ ತೆಗೆದುಕೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇದನ್ನೂ ಓದಿ: 2030ರ ನವೀಕರಣ ಇಂಧನದ ಗುರಿಯನ್ನು 9 ವರ್ಷ ಮುಂಚೆಯೇ ಮುಟ್ಟಿದ ಏಕೈಕ ಜಿ20 ದೇಶ ಭಾರತ
ಈ ಬಗ್ಗೆ ಚೀನಾ ಅಧ್ಯಕ್ಷ ಶಿ ಜಿನ್ಪಿಂಗ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕ ಸರ್ಕಾರದಿಂದಲೂ ಕೂಡ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟವಾಗಿಲ್ಲ. ಇದೇ ವೇಳೆ, ಏಪ್ರಿಲ್ ತಿಂಗಳಲ್ಲಿ ಟ್ರಂಪ್ ಚೀನಾಗೆ ಭೇಟಿ ಕೊಡಲಿದ್ದಾರೆ. ಅದಾದ ಬಳಿಕ ಶಿ ಜಿನ್ಪಿಂಗ್ ಅವರು ಅಮೆರಿಕಕ್ಕೆ ಹೋಗಲಿದ್ದಾರೆ. ಈ ವೇಳೆ ಟ್ರೇಡ್ ಮಾತುಕತೆ ಮುಂದುವರಿಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ