Nirmala Sitharaman: ವಿಶ್ವ ಬ್ಯಾಂಕ್ ಅಧ್ಯಕ್ಷರನ್ನು ಭೇಟಿಯಾಗಿ ವಿವಿಧ ವಿಚಾರ ಚರ್ಚಿಸಿದ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಪ್ರವಾಸದಲ್ಲಿ ಇದ್ದು, ಈ ವೇಳೆ ವಿಶ್ವ ಬ್ಯಾಂಕ್ ಮುಖ್ಯಸ್ಥರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಕೊರೊನಾ ಬಿಕ್ಕಟ್ಟಿನ ನಂತರದ ಆರ್ಥಿಕ ಚೇತರಿಕೆ, ಕೊವಿಡ್-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಪ್ರಮುಖ ಪಾತ್ರ ಮತ್ತು ಮುಂಬರುವ ಹವಾಮಾನ ಬದಲಾವಣೆ ಸಮಾವೇಶದ ಸಿದ್ಧತೆಗಳ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಬ್ಯಾಂಕ್ ಅಧ್ಯಕ್ಷರಾದ ಡೇವಿಡ್ ಮಾಲ್ಪಾಸ್ ಅವರನ್ನು ಭೇಟಿಯಾಗಿ, ಚರ್ಚಿಸಿದರು. ನಿರ್ಮಲಾ ಸೀತಾರಾಮನ್ ಶುಕ್ರವಾರ ವಾಷಿಂಗ್ಟನ್ ಡಿಸಿಯಲ್ಲಿ ಇರುವ ವಿಶ್ವ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಮಾಲ್ಪಾಸ್ ಅವರನ್ನು ಭೇಟಿ ಮಾಡಿದರು. ”ಎರಡೂ ಕಡೆಯಿಂದ #COVID #ಲಸಿಕೆ, #ಆರ್ಥಿಕ ಚೇತರಿಕೆ, #CoP26ಗೆ ಸಿದ್ಧತೆಗಳು, #WBGಯ ಭಾರತಕ್ಕೆ ಸಾಲ ನೀಡುವ ಅವಕಾಶವನ್ನು ಹೆಚ್ಚಿಸಲು ಉಪಕ್ರಮ, IDA20 ಮರುಪೂರಣ, @WorldBankನೊಂದಿಗಿನ ಜ್ಞಾನ ಪಾಲುದಾರಿಕೆ,” ಬಗ್ಗೆ ಟ್ವೀಟ್‌ಗಳನ್ನು ಮಾಡಲಾಗಿದೆ.
ಜಾಗತಿಕ ಕೊವಿಡ್ -19ಗೆ ಸಂಬಂಧಿಸಿದಂತೆ ಭಾರತ ವಹಿಸಿದ ಪ್ರಮುಖ ಪಾತ್ರವನ್ನು ಒಳಗೊಂಡಂತೆ ಕೊವಿಡ್ -19 ಎರಡನೇ ಅಲೆ ಹರಡುವುದನ್ನು ತಡೆಯಲು ಭಾರತ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಿರ್ಮಲಾ ಸೀತಾರಾಮನ್ ಅವರು ಭೇಟಿಯ ವೇಳೆ ಹಂಚಿಕೊಂಡರು ಎಂದು ಸಚಿವಾಲಯ ತಿಳಿಸಿದೆ. ಅಭಿವೃದ್ಧಿಗೆ ಹಣಕಾಸಿನ ಲಭ್ಯತೆಯನ್ನು ಹೆಚ್ಚಿಸಲು ಭಾರತಕ್ಕೆ ಸಾಲ ನೀಡುವ ಪ್ರಮಾಣವನ್ನು ಹೆಚ್ಚಿಸಿದ ವಿಶ್ವ ಬ್ಯಾಂಕ್ ಸಮೂಹದ ಕ್ರಮಕ್ಕಾಗಿ ನಿರ್ಮಲಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲ್ಯಾಬ್‌ನಿಂದ ಫೀಲ್ಡ್‌ಗೆ ವರ್ಗಾಯಿಸಬೇಕಾದ ತಂತ್ರಜ್ಞಾನಗಳು ಮತ್ತು ಕಡಿಮೆ ಇಂಗಾಲದ ಬೆಳವಣಿಗೆಯ ಉದ್ದೇಶಿತ ಜಾಗತಿಕ ಸಂಶೋಧನೆ ಅಗತ್ಯ ಇರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಸಚಿವರು ಉಲ್ಲೇಖಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು “ಲೈಟ್ ಹೌಸ್ ಇಂಡಿಯಾ, #ಟೆಕ್ನಾಲಜಿ ಮತ್ತು #ಹಣಕಾಸು ವಲಯದ ಸುಧಾರಣೆಗಳು ಮತ್ತು #WBGಯೊಂದಿಗಿನ ಜ್ಞಾನದ ಪಾಲುದಾರಿಕೆಯನ್ನು ಬಲಪಡಿಸಲು #ಮೂಲಸೌಕರ್ಯ ವಲಯದ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವುದು ಸೇರಿದಂತೆ ಮೂರು ಸಲಹೆಗಳನ್ನು ಪ್ರಮುಖವಾಗಿ ಗಮನ ಸೆಳೆದಿದ್ದಾರೆ,” ಎಂದು ಅದು ಹೇಳಿದೆ. ಇದಕ್ಕೂ ಮುನ್ನ ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಭಾರತವು ಕೊವಿಡ್ -19 ಬಿಕ್ಕಟ್ಟನ್ನು ಅತ್ಯಂತ ದೃಢವಾಗಿ ಮತ್ತು ಧೈರ್ಯದಿಂದ ಎದುರಿಸಿದ್ದು ಮಾತ್ರವಲ್ಲದೆ ಜಾಗತಿಕವಾಗಿ ಕೊರೊನಾ ಬಿಕ್ಕಟ್ಟಿನ ಹೋರಾಟದಲ್ಲಿ ಕೈ ಜೋಡಿಸಿದೆ,” ಎಂದಿದ್ದಾರೆ.
ಸರ್ಕಾರವು ಕೈಗೊಂಡ ಕ್ರಮಗಳು ದೇಶದ ನಿರಂತರ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿದೆ ಎಂದಿರುವ ಸಚಿವೆ, ಭಾರತ ಸರ್ಕಾರವು ಆರ್ಥಿಕ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರ ಜತೆಗೆ, ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಪರಿವರ್ತಿಸಲು ಮತ್ತು ಪ್ರಬಲವಾಗಿ ಹೊರಹೊಮ್ಮಲು ಗಮನಾರ್ಹವಾದ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ ಎಂದಿದ್ದಾರೆ. ಗ್ಲಾಸ್ಗೊದಲ್ಲಿ ನಡೆಯಲಿರುವ ಮುಂಬರುವ ಹವಾಮಾನ ಬದಲಾವಣೆ ಸಮಾವೇಶದ ಸಿದ್ಧತೆಗಳ ಬಗ್ಗೆ ಸಚಿವೆ ಚರ್ಚಿಸಿದ್ದಾರೆ. ಅಲ್ಲಿಂದ ಅವರು ಭಾರತಕ್ಕೆ ಹಿಂತಿರುಗುವ ಮೊದಲು ಉದ್ಯಮ ಸಮುದಾಯದೊಂದಿಗೆ ಸಂವಾದ ನಡೆಸಲು ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಒಂದು ವಾರದ ಪ್ರವಾಸವನ್ನು ಬೋಸ್ಟನ್‌ನಿಂದ ಆರಂಭಿಸಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ನಲ್ಲಿನ ಸಭೆಗಳ ಜೊತೆಗೆ ನಿರ್ಮಲಾ ಸೀತಾರಾಮನ್ 25ಕ್ಕೂ ಹೆಚ್ಚು ದ್ವಿಪಕ್ಷೀಯ ಚರ್ಚೆಗಳನ್ನು ನಿಗದಿ ಮಾಡಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ