SpiceJet: ಸ್ಪೈಸ್ಜೆಟ್ ವಿಮಾನ ಯಾನ ಪರವಾನಗಿ ಡಿಜಿಸಿಎಯಿಂದ 30 ದಿನಗಳ ಕಾಲ ತಾತ್ಕಾಲಿಕ ಅಮಾನತು
ಅಪಾಯಕಾರಿ ವಸ್ತುಗಳ ಸಾಗಣೆ ಮಾಡದಂತೆ ತಾತ್ಕಾಲಿಕವಾಗಿ 30 ದಿನಗಳ ಕಾಲ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಅಪಾಯಕಾರಿ ವಸ್ತುಗಳನ್ನು ಸಾಗಾಣಿಕೆ ಮಾಡಿ, ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಸ್ಪೈಸ್ಜೆಟ್ ಪರವಾನಗಿಯನ್ನು ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ಡಿಜಿಸಿಎ ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಮೂಲಗಳ ಪ್ರಕಾರ, ‘ಅಪಾಯಕಾರಿ ಸರಕುಗಳ’ ಸಾಗಾಣಿಕೆ ಮಾಡಿದ್ದಕ್ಕಾಗಿ ಸ್ಪೈಸ್ ಜೆಟ್ ಪರವಾನಗಿಯನ್ನು ವಾಯುಯಾನ ನಿಯಂತ್ರಕ ಡಿಜಿಸಿಎಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಅಮಾನತು 30 ದಿನಗಳ ಅವಧಿಯಾಗಿದ್ದು, ಈ ಸಮಯದಲ್ಲಿ ಸ್ಪೈಸ್ ಜೆಟ್ ತನ್ನ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳು ಸೇರಿದಂತೆ ಅಪಾಯಕಾರಿ ಸರಕುಗಳನ್ನು ಸಾಗಿಸಲು ಅನುಮತಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಸಂಪರ್ಕಿಸಲು ಪ್ರಯತ್ನಿಸಿದಾಗ, ಸ್ಪೈಸ್ ಜೆಟ್ ವಕ್ತಾರರು ನೇರವಾಗಿ ಅಮಾನತು ಕುರಿತು ಉಲ್ಲೇಖಿಸಿಲ್ಲ. ವಿಮಾನಯಾನ ಸಂಸ್ಥೆಯು ತಿಳಿಸಿದಂತೆ, “ಸಣ್ಣ ಸಮಸ್ಯೆಯಿದೆ” ಎಂದು ಪ್ಯಾಕೇಜ್ ಅನ್ನು “ಅಪಾಯಕಾರಿ ಅಲ್ಲದ ಸರಕುಗಳು” ಎಂದು ಘೋಷಿಸಲಾಗಿದೆ. ರವಾನೆ ಮಾಡಿದವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಡೈರೆಕ್ಟೊರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ನಿಯಮಗಳ ಪ್ರಕಾರ, ಅಪಾಯಕಾರಿ ಸರಕುಗಳು ಅಂದರೆ ಆರೋಗ್ಯ, ಸುರಕ್ಷತೆ, ಆಸ್ತಿ ಅಥವಾ ಪರಿಸರಕ್ಕೆ ಅಪಾಯವನ್ನುಂಟು ಮಾಡುವಂತಹ ವಸ್ತುಗಳು ಅಥವಾ ಅಂಶಗಳು. “ಡಿಜಿಸಿಎಯಿಂದ 30 ದಿನಗಳವರೆಗೆ ಅಪಾಯಕಾರಿ ಸರಕುಗಳ ಸ್ಪೈಸ್ ಜೆಟ್ ಪರವಾನಗಿಯನ್ನು ಅಮಾನತುಗೊಳಿಸಿದೆ. ಅಂತಹ ಸರಕುಗಳ ನಿರ್ವಹಣೆಯಲ್ಲಿ ಒಳಗೊಂಡಿರುವ ನಿಯಮಾವಳಿಗಳನ್ನು ಉಲ್ಲಂಘಿಸಿದೆ,” ಎಂದು ಒಂದು ಮೂಲಗಳು ತಿಳಿಸಿವೆ.
ಇದರ ಪರಿಣಾಮವಾಗಿ, ಏರ್‌ಲೈನ್ ತನ್ನ ನೆಟ್‌ವರ್ಕ್‌ನಲ್ಲಿ ಅಂತಹ ಸರಕುಗಳನ್ನು ಸಾಗಿಸುವುದನ್ನು “ನಿರ್ಬಂಧಿಸಲಾಗಿದೆ” ಎಂದು ಅವರು ಹೇಳಿದರು. ನಾಗರಿಕ ವಿಮಾನಯಾನ ಮಹಾನಿರ್ದೇಶಕ ಅರುಣ್ ಕುಮಾರ್ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. “ಸಾಗಣೆದಾರರಿಂದ ಪ್ಯಾಕೇಜ್ ಅನ್ನು ‘ಅಪಾಯಕಾರಿಯಲ್ಲದ ಸರಕುಗಳು’ ಎಂದು ಘೋಷಿಸುವುದರಲ್ಲಿ ಒಂದು ಸಣ್ಣ ಸಮಸ್ಯೆಯಿತ್ತು ಮತ್ತು ಲೋಪಗಳು ಸಾಗಣೆದಾರರ ಕಡೆಯಿಂದ ಆಗಿದ್ದವು. ಡಿಜಿಸಿಎ ಸಲಹೆಯಂತೆ ಸ್ಪೈಸ್ ಜೆಟ್ನಿಂದ ಇಂಥದ್ದನ್ನು ತಡೆಗಟ್ಟುವ ಮತ್ತು ಸರಿಪಡಿಸುವ ಕ್ರಮಗಳನ್ನು ಕೈಗೊಂಡಿದೆ,” ಎಂದು ಸಂಸ್ಥೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Domestic flights ಅಕ್ಟೋಬರ್ 18ರಿಂದ ದೇಶೀಯ ವಿಮಾನಗಳಲ್ಲಿ ಶೇ 100 ಸಾಮರ್ಥ್ಯಕ್ಕೆ ಅನುಮತಿ