ನವದೆಹಲಿ, ಫೆಬ್ರುವರಿ 12: ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಒಂದು ಕಾರಣವಾಗಿರುವ ಯುಪಿಐ ಈಗ ಬೇರೆ ಬೇರೆ ದೇಶಗಳಲ್ಲಿ ಬಳಕೆಯಾಗತೊಡಗಿದೆ. ಸಿಂಗಾಪುರದಲ್ಲಿ ಚಲಾವಣೆಯಲ್ಲಿರುವ ಯುಪಿಐ ಸೇವೆ ಈಗ ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳಲ್ಲೂ ಲಭ್ಯ ಇದೆ. ಇಂದು ಸೋಮವಾರ ಈ ಎರಡು ದೇಶಗಳಲ್ಲಿ ಯುಪಿಐ ಮತ್ತು ರುಪೇ ಕಾರ್ಡ್ (RuPay card) ಸೇವೆ ಚಾಲನೆಗೊಂಡಿದೆ. ಇದರೊಂದಿಗೆ ಆ ದೇಶಗಳಿಗೆ ಪ್ರವಾಸ ಹೋಗುವ ಭಾರತೀಯರಿಗೆ, ಹಾಗೂ ಭಾರತಕ್ಕೆ ಪ್ರವಾಸ ಬರುವ ಆ ದೇಶದ ಜನರಿಗೆ ಹಣಕಾಸು ವಹಿವಾಟು ಮಾಡುವುದು ಸುಲಭವಾಗಲಿದೆ.
ಶ್ರೀಲಂಕಾದಲ್ಲಿ ಡಿಜಿಟಲ್ ವಹಿವಾಟಿಗೆ ಲಂಕಾ ಪೇ (Lanka Pay) ಪ್ಲಾಟ್ಫಾರ್ಮ್ ಇದೆ. ಈಗ ಯುಪಿಐ ಅನ್ನು ಲಂಕಾ ಪೇ ಜೊತೆ ಜೋಡಿಸಲಾಗಿದೆ. ಇದರೊಂದಿಗೆ ಶ್ರೀಲಂಕಾಗೆ ಹೋಗುವ ಭಾರತೀಯರು ಲಂಕಾ ಪೇ ಆ್ಯಪ್ನಲ್ಲಿ ಯುಪಿಐ ಮೂಲಕ ಹಣದ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.
ಇನ್ನು ರುಪೇ ಕಾರ್ಡ್ ಜಾಗತಿಕವಾಗಿ ಮಾನ್ಯತೆ ಪಡೆಯುತ್ತಿದೆ. ಶ್ರೀಲಂಕಾ ಮತ್ತು ಮಾರಿಷಸ್ನಲ್ಲೂ ಈಗ ರುಪೇ ಕಾರ್ಡ್ ಬಳಸಿ ವಹಿವಾಟು ನಡೆಸಬಹುದು. ಇದು ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.
ಇದನ್ನೂ ಓದಿ: ಚೀನಾ ಕಂಪನಿಗಳನ್ನು ಹೀಗೆ ಗುರಿ ಮಾಡಿದರೆ ಸರಬರಾಜುದಾರರು ಭಾರತಕ್ಕೆ ಬರಲು ಭಯಬೀಳಬಹುದು: ಶಿಯೋಮಿ ಕಳವಳ
‘ಮಾರಿಷಸ್ನಲ್ಲಿ ರುಪೇ ಕಾರ್ಡ್ ಸೇವೆ ವಿಸ್ತರಿಸುವುದರಿಂದ ಅಲ್ಲಿನ ಬ್ಯಾಂಕುಗಳು ರುಪೇ ಚೌಕಟ್ಟಿನಲ್ಲಿ ಕಾರ್ಡ್ಗಳನ್ನು ನೀಡಬಹುದು. ಇದರಿಂದ ಭಾರತ ಮತ್ತು ಮಾರಿಷಸ್ನಲ್ಲಿ ಇಂಥ ರುಪೇ ಕಾರ್ಡ್ ಬಳಕೆ ಸಾಧ್ಯವಾಗುತ್ತದೆ,’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
2022ರ ಫೆಬ್ರುವರಿಯಲ್ಲಿ ಸಿಂಗಾಪುರದ ಪೇನೌ ಜೊತೆ ಯುಪಿಐ ಅನ್ನು ಜೋಡಿಸಲಾಗಿತ್ತು. ಈ ಮೂಲಕ ಸಿಂಗಾಪುರದಲ್ಲಿರುವ ಭಾರತೀಯರು ತಮ್ಮ ತವರೂರಿಗೆ ಹಣ ಕಳುಹಿಸುವುದು ಬಹಳ ಸುಲಭವಾಗಿದೆ.
ಇದನ್ನೂ ಓದಿ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 20ರಷ್ಟು ಏರಿಕೆ; ಐಟಿಆರ್ ಸಲ್ಲಿಸುವವರ ಸಂಖ್ಯೆ 10 ವರ್ಷದಲ್ಲಿ ದ್ವಿಗುಣ
ಶ್ರೀಲಂಕಾ ಮತ್ತು ಮಾರಿಷಸ್ ದೇಶಗಳ ಜೊತೆ ಭಾರತದ ಬಹುಸ್ತರಗಳ ಸಂಬಂಧ ಹೆಚ್ಚು ಗಾಢವಾಗುತ್ತಿದೆ. ಆರ್ಥಿಕ ಸಂಬಂಧವೂ ಗಟ್ಟಿಯಾಗುತ್ತಿದೆ. ‘ಫಿನ್ಟೆಕ್ ಕ್ರಿಯಾಶೀಲತೆ ಮತ್ತು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಭಾರತ ಮುಂಚೂಣಿಗೆ ಬಂದಿದೆ. ಭಾರತದ ಸಹಭಾಗಿ ದೇಶಗಳ ಜೊತೆ ನಮ್ಮ ಅಭಿವೃದ್ಧಿ ಅನುಭವಗಳನ್ನು ಹಂಚಿಕೊಳ್ಳಲು ಪ್ರಧಾನಿ ಹೆಚ್ಚು ಒತ್ತು ಕೊಡುತ್ತಿದ್ದಾರೆ,’ ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ