
ನವದೆಹಲಿ, ಮೇ 14: ಅಮೆರಿಕದ ಹಣದುಬ್ಬರ (US Inflation) ಏಪ್ರಿಲ್ ತಿಂಗಳಲ್ಲಿ ಶೇ. 2.3ರಷ್ಟಿದೆ. ವಿವಿಧ ಆರ್ಥಿಕ ತಜ್ಞರು ಮಾಡಿದ್ದ ಅಂದಾಜಿಗಿಂತ ತುಸು ಕಡಿಮೆ ಮಟ್ಟದಲ್ಲಿದೆ. ಹಿಂದಿನ ತಿಂಗಳಲ್ಲಿ (ಮಾರ್ಚ್) ಹಣದುಬ್ಬರ ಶೇ. 2.4 ಇತ್ತು. ಈಗ 10 ಮೂಲಾಂಕಗಳಷ್ಟು ಇಳಿಕೆ ಆಗಿದೆ. ನಾಲ್ಕು ವರ್ಷದಲ್ಲೇ ಇದು ಅತ್ಯಂತ ಕಡಿಮೆ ಹಣದುಬ್ಬರ ದರ ಎನಿಸಿದೆ.
ಅಮೆರಿಕದಲ್ಲಿ ಏಪ್ರಿಲ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆ ಸೂಚ್ಯಂಕ ತುಸು ಏರಿಕೆಯಾಗಿದೆ. ಆದರೆ, ಇಂಧನ ಸೂಚ್ಯಂಕ ಕಡಿಮೆ ಆಗಿರುವುದು ಒಟ್ಟಾರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಕೋರ್ ಇನ್ಫ್ಲೇಷನ್ ಅಥವಾ ಮುಖ್ಯ ವಸ್ತುಗಳ ಹಣದುಬ್ಬರ ದರ ಶೇ. 2.8ರಲ್ಲೇ ಮುಂದುವರಿದಿದೆ.
ಇದನ್ನೂ ಓದಿ: ಭಾರತದ ರೀಟೇಲ್ ಹಣದುಬ್ಬರ ಏಪ್ರಿಲ್ನಲ್ಲಿ ಶೇ. 3.16; ಇದು 6 ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ದರ
ಅಮೆರಿಕದಲ್ಲಿ ಹಣದುಬ್ಬರವನ್ನು ಶೇ. 2ಕ್ಕೆ ಕಟ್ಟಿ ನಿಲ್ಲಿಸುವ ಗುರಿ ಇದೆ. ಇದರಲ್ಲಿ ಹೆಚ್ಚೂಕಡಿಮೆ ಯಶಸ್ವಿಯಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಕ್ರಮಕ್ಕೆ ವಿರಾಮ ನೀಡಿರುವುದು, ಮತ್ತು ಈಗ ಹಣದುಬ್ಬರ ಸತತವಾಗಿ ಕೆಳಮಟ್ಟದಲ್ಲಿರುವುದು ಅಮೆರಿಕದಲ್ಲಿ ಬಡ್ಡಿದರ ಇಳಿಕೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಬಡ್ಡಿದರ ಇಳಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಫೆಡರಲ್ ರಿಸರ್ವ್ ಈಗ ದರ ಇಳಿಸಬೇಕಾಗಬಹುದು ಎನ್ನಲಾಗುತ್ತಿದೆ.
ಏಪ್ರಿಲ್ ತಿಂಗಳಲ್ಲಿ ಭಾರತದ ಹಣದುಬ್ಬರ ದರ ಶೇ. 3.16ರಷ್ಟಿದೆ. ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿ ನಿಲ್ಲಿಸುವುದು ಆರ್ಬಿಐನ ಗುರಿಯಾಗಿದೆ. ಸತತ ಮೂರನೇ ತಿಂಗಳು ಈ ಮಟ್ಟಕ್ಕಿಂತ ಹಣದುಬ್ಬರ ಮೇಲೇರದಂತೆ ನೋಡಿಕೊಳ್ಳಲಾಗಿದೆ. ಆಹಾರವಸ್ತುಗಳ ಬೆಲೆ, ಅದರಲ್ಲೂ ತರಕಾರಿಗಳ ಬೆಲೆ ಏರಿಕೆ ಗಣನೀಯವಾಗಿ ತಗ್ಗಿರುವುದು ಹಣದುಬ್ಬರ ಇಳಿಕೆಗೆ ಕಾರಣ.
ಇದನ್ನೂ ಓದಿ: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ
ಪಾಕಿಸ್ತಾನದಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರ ಶೇ. 0.30ಕ್ಕೆ ಇಳಿದಿದೆ. ಮಾರ್ಚ್ ತಿಂಗಳಲ್ಲಿ ಶೇ. 0.70ರಷ್ಟಿತ್ತು. ಇದು ಪಾಕಿಸ್ತಾನದ ಸಾರ್ವಕಾಲಿಕ ಕನಿಷ್ಠ ಹಣದುಬ್ಬರ ದರ ಎನ್ನಲಾಗಿದೆ. ಇತ್ತೀಚಿನ ವರ್ಷಗಳಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 20-40ರಷ್ಟಿತ್ತು. ಬಹಳ ಅಲ್ಪ ಸಮಯದಲ್ಲಿ ಪಾಕಿಸ್ತಾನವು ಹಣದುಬ್ಬರಕ್ಕೆ ಕಡಿವಾಣ ಹಾಕಲು ಸಫಲವಾಗಿದೆ. ಆರ್ಥಿಕ ನೀತಿಗಳಲ್ಲಿ ಸುಧಾರಣೆ, ಹಣಕಾಸು ಶಿಸ್ತು ಕಾಯ್ದುಕೊಂಡಿದ್ದು ಇತ್ಯಾದಿ ವಿವಿಧ ಅಂಶಗಳು ಈ ಯಶಸ್ಸಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ