ಭಾರತದ ರೀಟೇಲ್ ಹಣದುಬ್ಬರ ಏಪ್ರಿಲ್ನಲ್ಲಿ ಶೇ. 3.16; ಇದು 6 ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ದರ
India inflation rate in April 2025 decrease to 3.16%: ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ದರ ಏಪ್ರಿಲ್ನಲ್ಲಿ ಶೇ. 3.16ಕ್ಕೆ ಇಳಿದಿದೆ. 2019ರ ಜುಲೈನಲ್ಲಿ ಹಣದುಬ್ಬರವು ಶೇ. 3.15ರಷ್ಟಿತ್ತು. ಅದಾದ ಬಳಿಕ ಅತ್ಯಂತ ಕನಿಷ್ಠ ಬೆಲೆ ಏರಿಕೆ ಮಟ್ಟವನ್ನು ಏಪ್ರಿಲ್ನಲ್ಲಿ ಸಾಧಿಸಲಾಗಿದೆ. 2025ರ ಮಾರ್ಚ್ನಲ್ಲಿ ಹಣದುಬ್ಬರ ಶೇ. 3.34 ಇತ್ತು. 2024ರ ಏಪ್ರಿಲ್ನಲ್ಲಿ ಶೇ. 4.83 ಇತ್ತು.

ನವದೆಹಲಿ, ಮೇ 13: ಆಪರೇಷನ್ ಸಿಂದೂರದ (Operation Sindoor) ಯಶಸ್ವಿ ಬಳಿಕ ಭಾರತಕ್ಕೆ ಮತ್ತೊಂದು ಸಿಹಿ ಸುದ್ದಿ ಇದೆ. ಏಪ್ರಿಲ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ (Retail Inflation) ದರ ಶೇ. 3.16ಕ್ಕೆ ಇಳಿಕೆ ಆಗಿದೆ. ಆರ್ಬಿಐ ನಿಗದಿ ಮಾಡಿಕೊಂಡ ಮಟ್ಟಕ್ಕಿಂತ ಕಡಿಮೆ ಹಣದುಬ್ಬರ ದರ ಇದು. ಸತತ ಮೂರನೇ ತಿಂಗಳು ಹಣದುಬ್ಬರವು ಈ ಮಟ್ಟಕ್ಕಿಂತ ಕೆಳಗೆ ಇದೆ. ವಿವಿಧ ಆರ್ಥಿಕ ತಜ್ಞರು (economists poll) ಮಾಡಿದ ಅಂದಾಜಿಗಿಂತಲೂ ಹಣದುಬ್ಬರ ದರ ಕಡಿಮೆ ಇದೆ. ಹಿಂದಿನ ತಿಂಗಳು ಮತ್ತು ಹಿಂದಿನ ವರ್ಷಕ್ಕೆ ಹೋಲಿಸಿದರೂ ಏಪ್ರಿಲ್ನಲ್ಲಿ ಬೆಲೆ ಏರಿಕೆ ಮಟ್ಟ ಕಡಿಮೆಗೊಂಡಿದೆ.
2025ರ ಮಾರ್ಚ್ ತಿಂಗಳಲ್ಲಿ ಹಣದುಬ್ಬರ ಶೇ 3.34ರಷ್ಟಿತ್ತು. ಹಿಂದಿನ ವರ್ಷವಾದ 2024ರ ಏಪ್ರಿಲ್ ತಿಂಗಳಲ್ಲಿ ಇದು ಶೇ. 4.83 ರಷ್ಟಿತ್ತು. 2019ರ ಜುಲೈನಲ್ಲಿ ಹಣದುಬ್ಬರ ಶೇ. 3.15ರಷ್ಟಿತ್ತು. ಈಗ ಅದು ಶೇ. 3.16ಕ್ಕೆ ಬಂದಿದೆ. ಅಂದರೆ, ಆರು ವರ್ಷದಲ್ಲೇ ಅತ್ಯಂತ ಕಡಿಮೆ ಹಣದುಬ್ಬರ ಮಟ್ಟವನ್ನು ಏಪ್ರಿಲ್ನಲ್ಲಿ ತಲುಪಲಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಕಡಿಮೆಯಾಗಲು ಆಹಾರ ಬೆಲೆಯಲ್ಲಿ ಇಳಿಕೆ ಕಾರಣ.
ಇದನ್ನೂ ಓದಿ: 2,000 ಕೋಟಿ ರೂಗೆ ತನ್ನ ಪೇಟಿಎಂ ಷೇರು ಮಾರಲಿರುವ ಚೀನಾದ ಆ್ಯಂಟ್ ಗ್ರೂಪ್
ಮಾರ್ಚ್ನಲ್ಲಿ ಶೇ. 2.69ರಷ್ಟಿದ್ದ ಆಹಾರ ಹಣದುಬ್ಬರ ಏಪ್ರಿಲ್ನಲ್ಲಿ ಶೇ. 1.78ಕ್ಕೆ ಇಳಿದಿದೆ. ಗ್ರಾಹಕ ಬೆಲೆ ಅನುಸೂಚಿಯ ಗುಂಪಿನಲ್ಲಿ ಆಹಾರ ಹಣದುಬ್ಬರದ ಪಾಲು ಅರ್ಧದಷ್ಟಿದೆ. ಅಂದರೆ ಒಟ್ಟಾರೆ ಹಣದುಬ್ಬರದಲ್ಲಿ ಆಹಾರ ಬೆಲೆಗಳ ಪಾತ್ರ ಅರ್ಧದಷ್ಟಾಗುತ್ತದೆ. ಹೀಗಾಗಿ, ರೀಟೇಲ್ ಹಣದುಬ್ಬರವು ಮಾರ್ಚ್ಗಿಂತಲೂ ತುಸು ಇಳಿಕೆ ಆಗಿರುವುದು.
ಆಹಾರವಸ್ತುಗಳಲ್ಲಿ ತರಕಾರಿ ಬೆಲೆ ಇಳಿಕೆಯೇ ಹೆಚ್ಚು
ಒಟ್ಟಾರೆ ಆಹಾರ ಹಣದುಬ್ಬರ ಶೇ. 1.78 ಮಾತ್ರವೇ ಇರುವುದು. ಇದರಲ್ಲಿ ತರಕಾರಿ ವಸ್ತುಗಳ ಬೆಲೆ ಇಳಿಕೆ ಪ್ರಮಾಣ ಹೆಚ್ಚಾಗಿದೆ. ಮಾರ್ಚ್ನಲ್ಲಿ ಶೇ. 7.04ರಷ್ಟು ಇಳಿಕೆ ಆಗಿದ್ದ ತರಕಾರಿಗಳ ಬೆಲೆ ಏಪ್ರಿಲ್ನಲ್ಲಿ ಶೇ. 11ರಷ್ಟು ತಗ್ಗಿದೆ.
ಇದನ್ನೂ ಓದಿ: ಅಮೆರಿಕ-ಚೀನಾ ಟ್ಯಾರಿಫ್ ಯುದ್ಧಕ್ಕೆ 90 ದಿನ ವಿರಾಮ; ಆಮದು ಸುಂಕ ಶೇ. 115ರಷ್ಟು ಇಳಿಕೆ; ರಾಜಿ ಮಾಡಿಕೊಂಡ ಬಲಾಢ್ಯ ದೇಶಗಳು
ಆರ್ಬಿಐನಿಂದ ಮತ್ತಷ್ಟು ರಿಪೋ ದರ ಕಡಿತ ಸಾಧ್ಯತೆ
ಹಣದುಬ್ಬರವು ಸತತವಾಗಿ ಕೆಳಗಿನ ಸ್ತರದಲ್ಲಿ ಇರುವುದು ಬಡ್ಡಿದರ ಇಳಿಕೆಗೆ ಎಡೆ ಮಾಡಿಕೊಡುವ ನಿರೀಕ್ಷೆ ಇದೆ. ಮುಂದಿನ ತಿಂಗಳು ನಡೆಯಲಿರುವ ಆರ್ಬಿಐ ಎಂಪಿಸಿ ಸಭೆಯಲ್ಲಿ ರಿಪೋ ದರ ಅಥವಾ ಬಡ್ಡಿದರವನ್ನು ಮತ್ತೊಮ್ಮೆ ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ, ಬ್ಯಾಂಕ್ ಸಾಲ ದರಗಳು ಕಡಿಮೆಗೊಳ್ಳಲಿವೆ. ಜನರ ಅನುಭೋಗ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕತೆಗೆ ಮತ್ತಷ್ಟು ಚುರುಕು ಸಿಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ