
ನವದೆಹಲಿ, ನವೆಂಬರ್ 20: ನೀವು ಫ್ರೈ ಮಾಡಲು ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಚೆಲ್ಲುವ ಅಗತ್ಯ ಇಲ್ಲ. ಈ ಎಣ್ಣೆಯು ಸುಸ್ಥಿರ ವಿಮಾನ ಇಂಧನವಾಗಿ (Sustainable Aviation Fuel — SAF) ಬಳಕೆ ಮಾಡಲು ಸಾಧ್ಯ. ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ವಿಶ್ವದ ಹಲವು ರಾಷ್ಟ್ರಗಳಲ್ಲಿ ಪ್ರಯತ್ನಗಳಾಗುತ್ತಿವೆ. ಇದೇ ವೇಳೆ, ಭಾರತದಲ್ಲಿ ಈಗಾಗಲೇ ಇದರ ಕಮರ್ಷಿಯಲ್ ಉತ್ಪಾದನೆ ಆರಂಭವಾಗಿದೆ. ಇಂಡಿಯನ್ ಆಯಿಲ್ನ ಪಾಣಿಪತ್ ರಿಫೈನರಿ ಘಟಕದಲ್ಲಿ ಎಸ್‌ಎಎಫ್ ಇಂಧನದ ಮೊದಲ ಬ್ಯಾಚ್ ಅನ್ನು ತಯಾರಿಸಲಾಗಿದೆ. ಈ ಹಸಿರು ಜೆಟ್ ಇಂಧನವನ್ನು ಏರ್ ಇಂಡಿಯಾ ಸಂಸ್ಥೆಗೆ ಪೂರೈಸಲಿದೆ.
ಎಸ್‌ಎಎಫ್ ಪೂರೈಕೆಗಾಗಿ ಇಂಡಿಯನ್ ಆಯಿಲ್ ಜೊತೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಇಂಡಿಯನ್ ಆಯಿಲ್ನ ಪಾನಿಪತ್ ಘಟಕದಲ್ಲಿ ಒಂದು ವರ್ಷದಲ್ಲಿ 30,000 ಟನ್ಗಳಷ್ಟು ಸುಸ್ಥಿರ ವಿಮಾನ ಇಂಧನ ತಯಾರಿಸುವ ಸಾಮರ್ಥ್ಯ ಇದೆ.
ಸುಸ್ಥಿರ ವಿಮಾನ ಇಂಧನ (Sustainable Aviation Fuel — SAF) ಎಂಬುದು ಪಳೆಯುಳಿಕೆ ಕಚ್ಚಾ ತೈಲದ (Fossil fuel) ಬದಲಿಗೆ ನವೀಕರಿಸಬಹುದಾದ ಮತ್ತು ತ್ಯಾಜ್ಯ ಆಧಾರಿತ ಮೂಲಗಳಿಂದ ತಯಾರಿಸಲಾಗುವ ಪರಿಸರ ಸ್ನೇಹಿ ವಿಮಾನ ಇಂಧನವಾಗಿದೆ. ಬಳಸಿದ ಅಡುಗೆ ಎಣ್ಣೆ (Used Cooking Oil — UCO), ಕೃಷಿ ತ್ಯಾಜ್ಯಗಳು, ಬಯೋಮಾಸ್, ಪುರಸಭೆಯ ತ್ಯಾಜ್ಯಗಳು ಮತ್ತು ಇಂಗಾಲ ಸೆರೆಹಿಡಿಯುವ ತಂತ್ರಜ್ಞಾನಗಳ ಮೂಲಕ ಇದನ್ನು ಉತ್ಪಾದಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್ಗಳು
ಇದರ ಪ್ರಮುಖ ವಿಶೇಷವೆಂದರೆ, ಇದು ‘ಡ್ರಾಪ್-ಇನ್’ (Drop-in) ಇಂಧನವಾಗಿದೆ. ಅಂದರೆ, ಪ್ರಸ್ತುತ ಬಳಕೆಯಲ್ಲಿರುವ ವಿಮಾನಗಳ ಎಂಜಿನ್‌ಗಳಲ್ಲಿ ಅಥವಾ ವಿಮಾನ ನಿಲ್ದಾಣಗಳ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡದೆಯೇ, ಸಾಂಪ್ರದಾಯಿಕ ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ಜೊತೆ ಬೆರೆಸಿ ಇದನ್ನು ಬಳಸಬಹುದು. ಭಾರತದಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ ಎಸ್‌ಎಎಫ್ ಉತ್ಪಾದನೆಯಾಗಿರುವುದು, ತ್ಯಾಜ್ಯ ಎಣ್ಣೆಯ ಅಕ್ರಮ ಮರುಬಳಕೆಯನ್ನು ತಡೆಗಟ್ಟಿ ಅದನ್ನು ಹಸಿರು ಇಂಧನವನ್ನಾಗಿ ಪರಿವರ್ತಿಸುವ ದಿಸೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಭಾರತದಲ್ಲಿ ಪ್ರಸ್ತುತ ರೆಗ್ಯುಲರ್ ಜೆಟ್ ಫುಯೆಲ್ ಅಥವಾ ಏವಿಯೇಶನ್ ಟರ್ಬೈನ್ ಫುಯೆಲ್ಗೆ ಶೇ. 1ರಷ್ಟು ಅಡುಗೆ ಎಣ್ಣೆ ಅಥವಾ ಇತರ ತ್ಯಾಜ್ಯ ಎಣ್ಣೆಯನ್ನು ಮಿಶ್ರಣ ಮಾಡಲು ಗುರಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಎಸ್ಎಎಫ್ನ ಉತ್ಪಾದನೆ ಹೆಚ್ಚಾದಂತೆ ಹೆಚ್ಚು ಬ್ಲೆಂಡಿಂಗ್ ಟಾರ್ಗೆಟ್ ಇಡಬಹುದು. ತಜ್ಞರ ಪ್ರಕಾರ, ಎಟಿಎಫ್ಗೆ ಶೇ. 50ರಷ್ಟು ಬ್ಲೆಂಡಿಂಗ್ ಮಾಡಬಹುದು.
ಸದ್ಯ, ಸುಸ್ಥಿರ ವಿಮಾನ ಇಂಧನ ತಯಾರಿಕೆಗೆ ಆಗುವ ವೆಚ್ಚವು ರೆಗ್ಯುಲರ್ ಇಂಧನಕ್ಕಿಂತ ಎರಡು ಮೂರು ಪಟ್ಟು ಹೆಚ್ಚು. ಇದರ ಉತ್ಪಾದನೆ ಪ್ರಮಾಣ ಹೆಚ್ಚಿದಂತೆ ವೆಚ್ಚ ಕಡಿಮೆಗೊಳ್ಳುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ