
ನವದೆಹಲಿ, ಜುಲೈ 1: ಎರಡು ದಶಕಗಳ ಹಳೆಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಸುಧಾರಿತ ರೂಪವಾದ ವಿಬಿ ಜಿ ರಾಮ್ ಜಿ ಕಾಯ್ದೆ ಇವತ್ತಿನಿಂದ (ಜುಲೈ 1) ಅಧಿಕೃತವಾಗಿ ಜಾರಿಗೆ ಬರುತ್ತಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭಾರತ ಸರ್ಕಾರವು ಅತ್ಯಂತ ದೊಡ್ಡ ಬದಲಾವಣೆಗಳನ್ನು ತಂದಿದೆ. ಸುಮಾರು 20 ವರ್ಷಗಳ ಇತಿಹಾಸ ಹೊಂದಿರುವ ಮನರೇಗಾ (MGNREGA) ಯೋಜನೆಯ ಜಾಗಕ್ಕೆ ಈಗ ಜಿ ರಾಮ್ ಜಿ (VB- G RAM G – Viksit Bharat- Guarantee for Rozgar and Ajeevika Mission -Gramin) ಕಾಯ್ದೆ ಜಾರಿಗೆ ಬಂದಿದೆ.
ಇದನ್ನೂ ಓದಿ: ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ
ಕೇಂದ್ರ ಸರ್ಕಾರವು ಈ ಬದಲಾವಣೆಯಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ ಎನ್ನುತ್ತಿದ್ದರೆ, ವಿರೋಧ ಪಕ್ಷಗಳು ಮತ್ತು ಕೆಲವು ರಾಜ್ಯಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಕಾನೂನಿನ ಪ್ರಕಾರ ರಾಜ್ಯ ಸರ್ಕಾರಗಳು ವೆಚ್ಚದ ಹೆಚ್ಚಿನ ಪಾಲನ್ನು ಭರಿಸಬೇಕಾಗಬಹುದು, ಇದು ರಾಜ್ಯಗಳ ಆರ್ಥಿಕತೆಯ ಮೇಲೆ ಹೊರೆಯಾಗಬಹುದು ಎಂಬುದು ವಿರೋಧ ಪಕ್ಷಗಳ ವಾದವಾಗಿದೆ. ಅಲ್ಲದೆ, ಮುಂಗಾರು ಮಳೆಯ ಸಮಯದಲ್ಲಿ ಈ ಬದಲಾವಣೆ ತಂದಿರುವುದರಿಂದ ಆರಂಭದಲ್ಲಿ ಯೋಜನೆಗಳ ಅನುಮೋದನೆ ವಿಳಂಬವಾಗಬಹುದು ಎಂಬ ಆತಂಕವೂ ಇದೆ.
ಗ್ರಾಮೀಣ ಕಾರ್ಮಿಕರಿಗೆ ಈಗ 125 ದಿನಗಳ ಕೆಲಸದ ಗ್ಯಾರಂಟಿ ಸಿಗಲಿದೆ, ಆದರೆ ಕೆಲಸ ಸಿಗುವ ಮತ್ತು ಯೋಜನೆಗಳು ರೂಪಿತವಾಗುವ ವಿಧಾನ ಸಂಪೂರ್ಣ ಡಿಜಿಟಲ್ ಹಾಗೂ ವ್ಯವಸ್ಥಿತವಾಗಿ ಬದಲಾಗಲಿದೆ. ಹಿಂದಿನ ಮನ್ರೇಗಾ ಯೋಜನೆಯಲ್ಲಿ ಕೆಲಸದ ಖಾತ್ರಿ ಎಂಬ ಕಾರಣಕ್ಕೆ ಅನಗತ್ಯ ಕೆಲಸಗಳನ್ನು ಸೃಷ್ಟಿಸುವಂತಿತ್ತು ಎನ್ನುವ ಆರೋಪ ಇದೆ. ಆದರೆ, ಹೊಸ ಕಾಯ್ದೆಯು ಅಗತ್ಯ ಕೆಲಸಗಳನ್ನು ಆಧರಿಸಿ ಉದ್ಯೋಗಗಳನ್ನು ಹಂಚಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Wed, 1 July 26