ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ
Nayara slashes petrol price by Rs 5 per litre: ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ವಿವಿಧ ಇಂಧನ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. ಖಾಸಗಿ ನಯಾರ ಎನರ್ಜಿ ಕಂಪನಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸಿದೆ. ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು ಎಟಿಎಫ್ ಇಂಧನದ ಬೆಲೆ ತಗ್ಗಿಸಿವೆ. ಕಮರ್ಷಿಯಲ್ ಎಲ್ಪಿಜಿ ಬೆಲೆಗಳೂ ಇಳಿದಿವೆ.

ಮುಖ್ಯಾಂಶಗಳು
- ತೈಲ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ವಿವಿಧ ಇಂಧನ ಬೆಲೆಗಳನ್ನು ಕಡಿಮೆ ಮಾಡಲಾಗಿದೆ.
- ಖಾಸಗಿ ನಯಾರ ಎನರ್ಜಿ ಕಂಪನಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇಳಿಸಿದೆ.
- ಎಟಿಎಫ್ ಇಂಧನ, ಕಮರ್ಷಿಯಲ್ ಎಲ್ಪಿಜಿ ಬೆಲೆಗಳೂ ಇಳಿದಿವೆ.
ನವದೆಹಲಿ, ಜುಲೈ 1: ಕಮರ್ಷಿಯಲ್ ಗ್ಯಾಸ್ ಬೆಲೆ (Commercial LPG price) ಇಳಿಕೆ ಬೆನ್ನಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಜೆಟ್ ಇಂಧನದ ಬೆಲೆಗಳನ್ನೂ ತಗ್ಗಿಸಿವೆ. ಖಾಸಗಿ ತೈಲ ಕಂಪನಿಯಾದ ನಯಾರ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಿದೆ. ಪಿಟಿಐ ವರದಿ ಪ್ರಕಾರ, ವಿಮಾನಗಳಿಗೆ ಇಂಧನವಾಗಿ ಬಳಸಲಾಗುವ ಈ ಎಟಿಎಫ್ನ (Jet Fuel/ ATF) ದರವನ್ನು ಲೀಟರ್ಗೆ 5 ರೂನಷ್ಟು ಕಡಿಮೆ ಮಾಡಲಾಗಿದೆ. ಈ ಬೆಲೆ ಇಳಿಕೆಯೊಂದಿಗೆ ಜೆಟ್ ಇಂಧನದ ಬೆಲೆ ಲೀಟರ್ಗೆ 110 ರೂ ಆಗಿದೆ. ನಯಾರ ಎನರ್ಜಿ ಸಂಸ್ಥೆಯು (Nayara Energy) ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 5 ರೂ, ಹಾಗೂ ಡೀಸಲ್ ಬೆಲೆಯನ್ನು 3 ರೂ ಇಳಿಸಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಇಳಿದಿರುವ ಹಿನ್ನೆಲೆಯಲ್ಲಿ ಇದನ್ನು ಕಡಿಮೆ ಮಾಡಲಾಗಿದೆ.
ನಯಾರ ಎನರ್ಜಿ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಪೆಟ್ರೋಲಿಯಂ ದರಗಳನ್ನು ಹೆಚ್ಚಿಸಿತ್ತು. ಈಗ ಹಿಂದಿನ ದರಕ್ಕೆ ಮರಳಿದೆ. ಜಿಯೋ ಬಿಪಿ ಇತ್ಯಾದಿ ಇತರ ಖಾಸಗಿ ಪೆಟ್ರೊಲಿಯಂ ಕಂಪನಿಗಳು ಸದ್ಯಕ್ಕೆ ಬೆಲೆ ಇಳಿಸಿಲ್ಲ. ಮಾರುಕಟ್ಟೆಯ ಹೆಚ್ಚಿನ ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಕೂಡ ಪೆಟ್ರೋಲ್ ಡೀಸಲ್ ಬೆಲೆಯನ್ನು ಇಳಿಸಿಲ್ಲ.
ನಯಾರಾದಲ್ಲಿ ಸರ್ಕಾರಿ ಬಂಕ್ಗಳಿಗಿಂತಲೂ ಕಡಿಮೆ ಬೆಲೆ
ನಯಾರಾ ಎನರ್ಜಿಯಿಂದ ದರ ಪರಿಷ್ಕರಣೆ ನಂತರ ಬೆಂಗಳೂರಿನಲ್ಲಿ ಅದರ ಔಟ್ಲೆಟ್ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 105.93 ರೂಗೆ ಇಳಿದಿದೆ. ಇಂಡಿಯನ್ ಆಯಿಲ್, ಎಚ್ಪಿ, ಬಿಪಿ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ರೀಟೇಲ್ ಬೆಲೆ 110.89 ರೂ ಇದೆ.
ಇದನ್ನೂ ಓದಿ: ಪೆಟ್ರೋಕೆಮಿಕಲ್ ಉದ್ಯಮ ನಿರಾಳ; ಪ್ರಮುಖ ಕಚ್ಛಾವಸ್ತುಗಳ ಆಮದಿಗೆ ಜುಲೈ 15ರವರೆಗೆ ಕಸ್ಟಮ್ಸ್ ಡ್ಯೂಟಿ ವಿನಾಯಿತಿ
ವಿಮಾನ ಪ್ರಯಾಣ ದರ ಕಡಿಮೆ ಆಗುತ್ತಾ?
ಜೆಟ್ ಇಂಧನದ ಬೆಲೆ ಇಳಿಕೆ ಬಳಿಕ ವಿಮಾನ ಪ್ರಯಾಣಕ್ಕೆ ಟಿಕೆಟ್ ದರ ಕೂಡ ಇಳಿಕೆ ಆಗುತ್ತದಾ ಎನ್ನುವ ನಿರೀಕ್ಷೆ ಹುಟ್ಟಿದೆ. ಇಂಧನ ಬೆಲೆ ಇಳಿದರೆ ಟಿಕೆಟ್ ಬೆಲೆಯನ್ನೂ ಇಳಿಸಬೇಕೆಂಬ ಕಡ್ಡಾಯ ನಿಯಮವೇನಿಲ್ಲ. ತೈಲ ಬೆಲೆ ಹೆಚ್ಚಿದ್ದಾಗ ಎಟಿಎಫ್ ಬೆಲೆಯೂ ಅಧಿಕವಿತ್ತು. ಆ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವೈಮಾನಿಕ ಸಂಸ್ಥೆಗಳು ತಮ್ಮ ನಷ್ಟದ ಹೊರೆಯಿಂದ ಚೇತರಿಸಿಕೊಳ್ಳಲು ಈ ಸಂದರ್ಭವನ್ನು ಬಳಸಿಕೊಳ್ಳಬಹುದು. ಒಂದು ವಿಮಾನವು ಸಾಮಾನ್ಯವಾಗಿ ಒಂದು ಕಿಲೋಮೀಟರ್ಗೆ 12 ಲೀಟರ್ ಇಂಧನವನ್ನು ವ್ಯಯಿಸುತ್ತದೆ. ವಿಮಾನವು ಪ್ರಯಾಣಿಕರನ್ನು ಭರ್ತಿಯಾಗಿ ತುಂಬಿಸಿಕೊಂಡರೆ ಪ್ರತೀ ವ್ಯಕ್ತಿಯ 20-40 ಕಿಮೀ ಪ್ರಯಾಣಕ್ಕೆ ಒಂದು ಲೀಟರ್ ಇಂಧನ ವ್ಯಯವಾಗುತ್ತದೆ.
ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಇದೇ ವೇಳೆ, ತೈಲ ಮಾರುಕಟ್ಟೆ ಕಂಪನಿಗಳು ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ದರಗಳನ್ನು ಕಡಿಮೆ ಮಾಡಿವೆ. ಸಾಮಾನ್ಯವಾಗಿ ಬಳಸುವ 19 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 177 – 184 ರೂನಷ್ಟು ಕಡಿಮೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಮರ್ಷಿಯಲ್ ಎಲ್ಪಿಜಿ ಬೆಲೆ 3,021 ರೂಗೆ ಇಳಿದಿದೆ. 47.5 ಕಿಲೋದ ಬೃಹತ್ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 441 ರೂಗಳಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: LPG Cylinder Price: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್
ಇರಾನ್ ಯುದ್ಧ ಶುರುವಾದ ಬಳಿಕ ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ ನಾಲ್ಕು ಬಾರಿ ಹೆಚ್ಚಿದ್ದವು. 19 ಕಿಲೋ ಸಿಲಿಂಡರ್ ಬೆಲೆ ಪಡೆದ ಏರಿಕೆ ಒಟ್ಟು 1,374 ರೂ ಆಗಿತ್ತು. ಈ ವರ್ಷ ಇದೇ ಮೊದಲ ಬಾರಿಗೆ ಇದರ ಬೆಲೆ ತಗ್ಗಿಸಲಾಗಿದೆ.
ಬೆಂಗಳೂರಿನಲ್ಲಿ ಹೊಸ ಎಲ್ಪಿಜಿ ದರಗಳು
- 14.2 ಕಿಲೋ ಗೃಹಬಳಕೆ ಎಲ್ಪಿಜಿ ಬೆಲೆ: 944.50 ರೂ
- 5 ಕಿಲೋ ಗೃಹಬಳಕೆ ಎಲ್ಪಿಜಿ ಬೆಲೆ: 350.5- ರೂ
- 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಬೆಲೆ: 3,021 ರೂ
- 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ ಬೆಲೆ: 7,548 ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Wed, 1 July 26




