ಮುಂಬೈ, ಮೇ 15: ವಿರಾಟ್ ಕೊಹ್ಲಿ ಹೂಡಿಕೆ ಮಾಡಿರುವ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ (Go digit general insurance) ಷೇರು ಮಾರುಕಟ್ಟೆಗೆ ಅಡಿ ಇಡಲು ಸಜ್ಜಾಗಿದ್ದು , ಇವತ್ತು ಅದರ ಐಪಿಒ (Go Digit IPO) ಆರಂಭವಾಗಿದೆ. 2,616.65 ಕೋಟಿ ರೂ ಮೊತ್ತದ ಈ ಐಪಿಒನಲ್ಲಿ ಒಟ್ಟು 9.62 ಕೋಟಿ ಷೇರುಗಳು ಬಿಕರಿಯಾಗುತ್ತಿವೆ. ಮೇ 15, ಇವತ್ತು ಐಪಿಒ ಆರಂಭವಾಗಿ ಮೇ 17ಕ್ಕೆ ಮುಗಿಯುತ್ತದೆ. ಒಟ್ಟು 9.62 ಕೋಟಿ ಷೇರುಗಳ ಪೈಕಿ 4.14 ಕೋಟಿ ಷೇರುಗಳು ಹೊಸದಾಗಿ ವಿತರಿಸಲಾಗುತ್ತಿದೆ. ಇವುಗಳ ಮೊತ್ತ 1,125 ಕೋಟಿ ರೂ ಆಗಿದೆ. ಈಗಾಗಲೇ ಷೇರುಪಾಲು ಹೊಂದಿರುವವರು 5.48 ಕೋಟಿ ಷೇರುಗಳನ್ನು ಆಫ್ಲೋಡ್ ಮಾಡುತ್ತಿದ್ದಾರೆ. ಈ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಹೂಡಿಕೆ ಮಾಡಿದ್ದಾರೆ. ಇಬ್ಬರಿಗೂ ಒಂದಷ್ಟು ಷೇರುಪಾಲು ಇದೆ.
ಇದನ್ನೂ ಓದಿ: ಸಾರ್ವಜನಿಕರ ಷೇರುಪಾಲು ಶೇ. 10ಕ್ಕೆ ಹೆಚ್ಚಿಸಲು ಎಲ್ಐಸಿಗೆ ಸಿಕ್ಕಿತು ಮೂರು ವರ್ಷ ಹೆಚ್ಚುವರಿ ಕಾಲಾವಕಾಶ
2016ರಲ್ಲಿ ಗೋ ಡಿಜಿಟ್ ಜನರಲ್ ಇನ್ಷೂರೆನ್ಸ್ ಕಂಪನಿ ಆರಂಭವಾಗಿದೆ. ಇದು ಮೋಟಾರು ವಾಹನಗಳಿಗೆ ವಿಮೆ ಮಾರುವ ಕಂಪನಿ. ಕಳೆದ ಒಂದು ವರ್ಷದಿಂದ ಕಂಪನಿಯ ಹಣಕಾಸು ಸಾಧನೆ ಸಾಕಷ್ಟು ಉತ್ತಮಗೊಂಡಿದೆ. 2022ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಅದರ ಕಾರ್ಯಾಚರಣೆ ನಷ್ಟ 570 ಕೋಟಿ ರೂ ಇತ್ತು. 2023ರಲ್ಲಿ ಇದೇ ಅವಧಿಯಲ್ಲಿ ಅದರ ಆಪರೇಟಿಂಗ್ ಲಾಸ್ 101.2 ಕೋಟಿ ರೂಗೆ ಇಳಿದಿದೆ.
ಇನ್ನು, ಕಂಪನಿ ಅದೇ ಅವಧಿಯಲ್ಲಿ ಪಡೆದಿರುವ ನಿವ್ವಳ ಲಾಭ ಬರೋಬ್ಬರಿ 1,290 ಕೋಟಿ ರೂ ಇದೆ. ಹಿಂದಿನ ವರ್ಷದಲ್ಲಿ ಸಿಕ್ಕ ಲಾಭ 100.21 ಕೋಟಿ ರೂ ಮಾತ್ರ. ಒಂದು ವರ್ಷದ ಅಂತರದಲ್ಲಿ ಗೋ ಡಿಜಿಟ್ ಉತ್ತಮ ಲಾಭ ಮಾಡಿದೆ.
ಇದನ್ನೂ ಓದಿ: ಷೇರುಪೇಟೆ ಕುಸಿಯುತ್ತಿದೆಯಾ? ಜೂನ್ 4ರೊಳಗೆ ಖರೀದಿಸಿಬಿಡಿ: ಅಮಿತ್ ಶಾ ಸಲಹೆ ಕೇಳಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಗೋ ಡಿಜಿಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪ್ರತೀ ಷೇರಿಗೆ 75 ರೂ ಬೆಲೆಯಂತೆ 2,66,667 ಷೇರುಗಳನ್ನು ಖರೀದಿಸಿದ್ದರು. ಅನುಷ್ಕಾ ಶರ್ಮಾ 66,667 ಷೇರುಗಳನ್ನು ಹೊಂದಿದ್ದಾರೆ. ಇಬ್ಬರೂ ಸೇರಿ 3,33,334 ಷೇರುಗಳನ್ನು ಹೊಂದಿದ್ದಾರೆ.
ಈ ಐಪಿಒ ಬೆಲೆಯಲ್ಲೇ ಷೇರು ಲಿಸ್ಟ್ ಆಗಿದ್ದಾದಲ್ಲಿ ಇಬ್ಬರ ಷೇರುಸಂಪತ್ತು ಒಂಬತ್ತು ಕೋಟಿ ರೂವರೆಗೂ ಹೆಚ್ಚಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ