Vi CRO Resignation: ಸಂಕಷ್ಟದ ವೊಡಾಫೋನ್ನಿಂದ ಹೊರನಡೆದ ಮತ್ತೊಬ್ಬ ಹಿರಿಯ; ಸಿಆರ್ಒ ಬಾಲಾಜಿ ರಾಜೀನಾಮೆ
Vodafone Idea CRO P Balaji Resigns: ವೊಡಾಫೋನ್ ಐಡಿಯಾ ಸಂಸ್ಥೆಯ ಮುಖ್ಯ ರೆಗ್ಯುಲೇಟರಿ ಆಫೀಸರ್ ಆಗಿರುವ ಪಿ ಬಾಲಾಜಿ ರಾಜೀನಾಮೆ ನೀಡಿದ್ದಾರೆ. ಜ. 10ಕ್ಕೆ ಅವರು ಹೊರನಡೆಯಲಿದ್ದಾರೆ. ಐಐಟಿ ಮತ್ತು ಐಐಎಂ ಪದವೀಧರರಾಗಿರುವ ಪಿ ಬಾಲಾಜಿ 9 ವರ್ಷದ ಹಿಂದೆ ವಿಐ ಸೇರುವ ಮುನ್ನ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ವೊಡಾಫೋನ್ ಸಿಇಒ ಆಗಿದ್ದ ರವೀಂದ್ರ ತಕ್ಕರ್ ಕೂಡ ರಾಜೀನಾಮೆ ನೀಡಿದ್ದರು. ಅಕ್ಷಯ್ ಮೂಂಡ್ರಾ ನೂತನ ಸಿಇಒ ಇದ್ದಾರೆ.

ನವದೆಹಲಿ, ಜನವರಿ 3: ಸಂಕಷ್ಟದ ಪರಿಸ್ಥಿತಿಯಲ್ಲಿರುವ ವೊಡಾಫೋನ್ ಐಡಿಯಾ (Vi- Vodafone Idea) ಸಂಸ್ಥೆಯಿಂದ ಹಿರಿಯ ಅಧಿಕಾರಿಗಳು ಹೊರಬೀಳುವ ಟ್ರೆಂಡಿಂಗ್ ಶುರುವಾದಂತಿದೆ. ಸಂಸ್ಥೆಯಲ್ಲಿ ಚೀಫ್ ರೆಗ್ಯುಲೇಟರಿ ಆಫೀಸರ್ (Chief Regulatory Officer) ಆಗಿರುವ ಪಿ. ಬಾಲಾಜಿ ರಾಜೀನಾಮೆ ನೀಡಿದ್ದಾರೆ. ಇಂದು ಬುಧವಾರ (ಜ. 3) ಸಂಸ್ಥೆ ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ (bse filing) ಈ ವಿಚಾರವನ್ನು ತಿಳಿಸಿದೆ. ಬಾಲಾಜಿ ಅವರು ವೊಡಾಫೋನ್ ಐಡಿಯಾದಿಂದ ನಿರ್ಗಮಿಸುತ್ತಿರುವ ಎರಡನೇ ಹಿರಿಯ ಅಧಿಕಾರಿಯಾಗಿದ್ಧಾರೆ. ಇತ್ತೀಚೆಗಷ್ಟೇ ಸಿಇಒ ರವೀಂದ್ರ ತಕ್ಕರ್ ರಾಜೀನಾಮೆ ನೀಡಿ ಹೊರಹೋಗಿದ್ದರು.
ಪಿ. ಬಾಲಾಜಿ ಅವರು ಜನವರಿ 10ರವರೆಗೂ ಸೇವೆಯಲ್ಲಿರುತ್ತಾರೆ ಎಂಬುದು ವೊಡಾಫೋನ್ ಐಡಿಯಾದ ಬಿಎಸ್ಇ ಫೈಲಿಂಗ್ನಿಂದ ಗೊತ್ತಾಗಿದೆ. ಬಾಲಾಜಿ ಕಳೆದ 9 ವರ್ಷಗಳಿಂದಲೂ ವೊಡಾಫೋನ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ವೊಡಾಫೋನ್ ಮತ್ತು ಐಡಿಯಾ ವಿಲೀನದ ಬಳಿಕ ಅವರು ವೊಡಾಫೋನ್ ಐಡಿಯಾದಲ್ಲಿ ಚೀಫ್ ರೆಗ್ಯುಲೇಟರಿ ಅಂಡ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದರು.
ಇದನ್ನೂ ಓದಿ: Union Budget: ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಜೆಟ್; ಏನೇನು ನಿರೀಕ್ಷೆಗಳಿವೆ? ಮುಂಗಡಪತ್ರ ಹೇಗಿರಲಿದೆ?
‘9ಕ್ಕೂ ಹೆಚ್ಚು ವರ್ಷಗಳಿಂದ ವೊಡಾಫೋನ್ ಐಡಿಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ನಾವು ಒಟ್ಟುಗೂಡಿ ಈ ಸಂಸ್ಥೆಯನ್ನು ಪರಿವರ್ತಿಸಲು ಸಾಧ್ಯವಾಗಿದ್ದಕ್ಕೆ ಹೆಮ್ಮೆ ಇದೆ… ತತ್ಕ್ಷಣಕ್ಕೆ ಅನ್ವಯ ಆಗುವಂತೆ ನಾನು ಸೇವೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಗುತ್ತಿಗೆ ಪ್ರಕಾರ ನೋಟೀಸ್ ನೀಡಬೇಕಾದ ನಿಯಮವನ್ನು ಸಡಿಲಿಸಿ ತತ್ಕ್ಷಣವೇ ಜವಾಬ್ದಾರಿಯಿಂದ ವಿಯುಕ್ತಗೊಳಿಸಿದರೆ ಸಂಸ್ಥೆಗೆ ನಾನು ಆಭಾರಿಯಾಗಿರುತ್ತೇನೆ,’ ಎಂದು ಪಿ ಬಾಲಾಜಿ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಜನವರಿ 10ರವರೆಗೂ ವೊಡಾಫೋನ್ನಲ್ಲೇ ಇರಲಿರುವ ಬಾಲಾಜಿ ಅವರು ರಾಜೀನಾಮೆ ನೀಡಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ವೊಡಾಫೋನ್ ಐಡಿಯಾ ಸಂಸ್ಥೆಯ ಹೊರಗೆ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಾಗಿ ತಾನು ಹೊರನಡೆಯುತ್ತಿರುವುದಾಗಿ ಬಾಲಾಜಿ ತಿಳಿಸಿದ್ದಾರೆ.
ಬಾಲಾಜಿ ಯಾರು?
ಪಿ ಬಾಲಾಜಿ ಅವರು ಐಐಟಿ ರೂರ್ಕೀಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಐಐಎಂ ಅಹ್ಮದಾಬಾದ್ನಲ್ಲಿ ಮಾರ್ಕೆಟಿಂಗ್ ಮತ್ತು ಫೈನಾನ್ಸ್ನಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ.
ಇದನ್ನೂ ಓದಿ: Gold: ಕಳೆದ ಎರಡು ವರ್ಷ ಶೇ. 14ಕ್ಕಿಂತಲೂ ಹೆಚ್ಚು ದರದಲ್ಲಿ ಬೆಳೆದಿರುವ ಚಿನ್ನದ ಬೆಲೆ ಈ ವರ್ಷ ಎಷ್ಟಾಗಬಹುದು?
ನೊಕಿಯಾ ಇಂಡಿಯಾ, ಸೋನಿ ಮೊಬೈಲ್ ಸಂಸ್ಥೆಗಳಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಟಾಟಾ ಗ್ರೂಪ್, ಎಟಿ ಅಂಡ್ ಟಿ, ಎರಿಕ್ಸನ್, ಲುಸೆಂಟ್ ಮೊದಲಾದ ಕಡೆ ಹಿರಿಯ ನಾಯಕತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ವೊಡಾಫೋನ್ ಐಡಿಯಾಗೆ ಬಂಡವಾಳ ಹುಟ್ಟದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಲ್ಲೇ ಹಿರಿಯ ಅಧಿಕಾರಿಗಳು ಹೊರನಡೆದಿರುವುದು ಗಮನಾರ್ಹ. ಇತ್ತೀಚೆಗೆ ರವೀಂದ್ರ ತಕ್ಕರ್ ಅವರು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ವರ್ಷಗಳಿಂದ ಅವರು ಸಿಇಒ ಆಗಿದ್ದರು. ಈಗ ಅಕ್ಷಯ್ ಮೂಂಡ್ರಾ ಎಂಬುವವರು ಸಿಇಒ ಆಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ