ಇಂಡಸ್ ಟವರ್ಸ್​ನ ಶೇ. 20ರಷ್ಟು ಷೇರುಪಾಲು ಮಾರಿದ ವೊಡಾಫೋನ್; 17,065 ಕೋಟಿ ರೂಗೆ ಬಿಕರಿ; ಷೇರುಪಾಲು ಹೆಚ್ಚಿಸಿಕೊಂಡ ಏರ್ಟೆಲ್

|

Updated on: Jun 19, 2024 | 12:39 PM

Vodafone sells stake in Indus Towers: ಇಂಡಸ್ ಟವರ್ಸ್ ಸಂಸ್ಥೆಯಲ್ಲಿ ತಾನು ಹೊಂದಿರುವ ಶೇ. 20ರಷ್ಟು ಷೇರುಗಳನ್ನು ವೊಡಾಫೋನ್ ಗ್ರೂಪ್ ಮಾರಿದೆ. 17,065 ಕೋಟಿ ರೂಗೆ ಬಿಕರಿಯಾಗಿದೆ. ಐ ಸ್ಕ್ವಯರ್ಡ್ ಕ್ಯಾಪಿಟಲ್, ಸ್ಟೋನ್ ಪೀಕ್ ಕಂಪನಿಗಳು ಹೆಚ್ಚಿನ ಷೇರುಗಳನ್ನು ಖರೀದಿ ಮಾಡಿವೆ. ಶೇ. 47ಕ್ಕೂ ಹೆಚ್ಚು ಷೇರುಪಾಲು ಹೊಂದಿರುವ ಭಾರ್ತಿ ಏರ್ಟೆಲ್ ಸಂಸ್ಥೆ ಶೇ. 1ರಷ್ಟು ಷೇರು ಖರೀದಿಸಿರುವುದು ತಿಳಿದುಬಂದಿದೆ.

ಇಂಡಸ್ ಟವರ್ಸ್​ನ ಶೇ. 20ರಷ್ಟು ಷೇರುಪಾಲು ಮಾರಿದ ವೊಡಾಫೋನ್; 17,065 ಕೋಟಿ ರೂಗೆ ಬಿಕರಿ; ಷೇರುಪಾಲು ಹೆಚ್ಚಿಸಿಕೊಂಡ ಏರ್ಟೆಲ್
ಮೊಬೈಲ್ ಟವರ್
Follow us on

ನವದೆಹಲಿ, ಜೂನ್ 19: ಮೊಬೈಲ್ ಟವರ್​ಗಳನ್ನು ಸ್ಥಾಪಿಸುವ ಇಂಡಸ್ ಟವರ್ಸ್​ನಲ್ಲಿ ತಾನು ಹೊಂದಿರುವ ಬಹುತೇಕ ಷೇರುಗಳನ್ನು ವೊಡಾಫೋನ್ ಗ್ರೂಪ್ ಮಾರಿದೆ. ವರದಿಗಳ ಪ್ರಕಾರ ಇಂಡಸ್ ಟವರ್ಸ್​ನ (Indus Towers) ಶೇ. 20ರಷ್ಟು ಷೇರುಗಳನ್ನು ವೊಡಾಫೋನ್ ಆಫ್​ಲೋಡ್ ಮಾಡಿದ್ದು, 17,065 ಕೋಟಿ ರೂ ಗಳಿಸಿದೆ. ಈ ಮೊಬೈಲ್ ಟವರ್ ಇನ್​ಸ್ಟಾಲೇಶನ್ ಕಂಪನಿಯಲ್ಲಿ ವೊಡಾಫೋನ್ ಗ್ರೂಪ್ (Vodafone Group) ಶೇ. 21.05ರಷ್ಟು ಪಾಲು ಹೊಂದಿತ್ತು. ಈಗ ಅದರ ಬಳಿ 1.05 ಪ್ರತಿಶತದಷ್ಟು ಷೇರು ಮಾತ್ರವೇ ಉಳಿದಂತಾಗುತ್ತದೆ.

ಬ್ರಿಟನ್ ಮೂಲದ ವೊಡಾಫೋನ್ ಗ್ರೂಪ್ ಇಂಡಸ್ ಟವರ್ಸ್​ನ ಸುಮಾರು 53.30 ಕೋಟಿ ಷೇರುಗಳನ್ನು ಮಾರಿದೆ. ಐ ಸ್ಕ್ವಯರ್ಡ್ ಕ್ಯಾಪಿಟಲ್, ಸ್ಟೋನ್​ಪೀಕ್ ಮೊದಲಾದ ಇನ್ವೆಸ್ಟ್​ಮೆಂಟ್ ಸಂಸ್ಥೆಗಳು ಈ ಷೇರುಗಳನ್ನು ಖರೀದಿಸಿವೆ. ಇಂಡಸ್ ಟವರ್ಸ್​ನಲ್ಲಿ ಹೆಚ್ಚಿನ ಷೇರುಪಾಲು ಹೊಂದಿರುವ ಭಾರ್ತಿ ಏರ್ಟೆಲ್ ಸಂಸ್ಥೆ ಶೇ. 1ರಷ್ಟು ಷೇರುಗಳನ್ನು ಖರೀದಿ ಮಾಡಿದೆ. ಇಂಡಸ್​ನಲ್ಲಿ ಅದು ಹೊಂದಿರುವ ಷೇರುಪಾಲು ಶೇ. 49ರ ಆಸುಪಾಸಿಗೆ ಬಂದಂತಾಗುತ್ತದೆ.

ಇದನ್ನೂ ಓದಿ: ಅಪ್ಪ, ಹೆಂಡತಿಯನ್ನು ನಿರ್ದಯವಾಗಿ ಹೊರಗಿಟ್ಟ ಗೌತಮ್ ಸಿಂಘಾನಿಯಾರನ್ನು ಹೊರಗಿಡಿ: ರೇಮಂಡ್ಸ್ ಷೇರುದಾರರಿಗೆ ಐಐಎಎಸ್ ಮನವಿ

ಈ ಷೇರು ಬಿಕರಿಗೆ ಮುಂಚೆ ಇಂಡಸ್ ಟವರ್ಸ್​ನಲ್ಲಿ ಏರ್ಟೆಲ್ ಶೇ. 47.95, ವೊಡಾಫೋನ್ ಗ್ರೂಪ್ ಶೇ. 21.05ರಷ್ಟು ಪಾಲು ಹೊಂದಿದ್ದವು. ಶೇ. 30.97ರಷ್ಟು ಷೇರುಗಳು ಸಾರ್ವಜನಿಕರ ಬಳಿ ಇವೆ. ಈಗ ವೊಡಾಫೋನ್ ಪಾಲಿನ ಷೇರುಗಳು ಸಾಂಸ್ಥಿಕ ಹೂಡಿಕೆದಾರರ ಪಾಲಾಗಿವೆ.

ಮೊಬೈಲ್ ಟವರ್​ಗಳನ್ನು ಸ್ಥಾಪಿಸುವ ಸಂಸ್ಥೆಯಾದ ಇಂಡಸ್ ಟವರ್ಸ್​ಗೆ ಟೆಲಿಕಾಂ ಕಂಪನಿಗಳಿಂದಲೇ ಬಹುಪಾಲು ಆದಾಯ ಬರುತ್ತದೆ. ವೊಡಾಫೋನ್ ಐಡಿಯಾದಿಂದ ಶೇ. 35-40ರಷ್ಟು ಆದಾಯವನ್ನು ಇಂಡಸ್ ಟವರ್ಸ್ ಗಳಿಸುತ್ತಿತ್ತು. ಅಷ್ಟೇ ಅಲ್ಲ, ವೊಡಾಫೋನ್ ಐಡಿಯಾ ಸುಮಾರು 10,000 ಕೋಟಿ ರೂ ಹಣವನ್ನು ಇಂಡಸ್ ಟವರ್ಸ್​ಗೆ ಕೊಡುವುದು ಬಾಕಿ ಇದೆ. ಈಗ ಶೇ. 20ರಷ್ಟು ಷೇರುಪಾಲು ಮಾಡಿ ಗಳಿಸಿರುವ ಹಣದಲ್ಲಿ ಈ ಸಾಲವನ್ನು ತೀರಿಸುವ ಸಾಧ್ಯತೆ ಇರಬಹುದು.

ಇದನ್ನೂ ಓದಿ: ರಿಫೆಕ್ಸ್ ಇಂಡಸ್ಟ್ರೀಸ್, 65 ಪೈಸೆ ಇದ್ದ ಷೇರುಬೆಲೆ 10 ವರ್ಷದಲ್ಲಿ ಅದ್ಭುತ ಹೆಚ್ಚಳ; ಹೂಡಿಕೆದಾರರಿಗೆ ಎಷ್ಟು ಲಾಭ ಆಗಿರಬಹುದು ನೋಡಿ…

ಈ ಷೇರು ಮಾರಾಟದ ಬಳಿಕ ಇಂಡಸ್ ಟವರ್ಸ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳ ಷೇರುಬೆಲೆ ಇಳಿಕೆಯಾಗಿದೆ. ಭಾರ್ತಿ ಏರ್ಟೆಲ್ ಷೇರುಬೆಲೆಯೂ ಕಡಿಮೆಯಾಗಿದೆ. ಈ ಷೇರುಕುಸಿತಕ್ಕೆ ಈ ಬೆಳವಣಿಗೆಯೇ ಕಾರಣವಾ ಎಂಬುದು ಸ್ಪಷ್ಟವಾಗಿಲ್ಲ. ಇಂದು ಒಟ್ಟಾರೆಯಾಗಿ ಷೇರು ಮಾರುಕಟ್ಟೆ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಈ ಇಳಿಕೆ ಆಗಿರಬಹುದು ಎನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ