Warren Buffet: ಷೇರುಪೇಟೆ ದಂತಕಥೆ ವಾರನ್ ಬಫೆಟ್ ಹುಟ್ಟುಹಬ್ಬ ಇಂದು; ಶ್ರೀಮಂತರಾಗುವ ಆಸೆಯಿದ್ದರೆ ಬಫೆಟ್ ಕೊಟ್ಟ 13 ಸೂತ್ರ ಗಮನಿಸಿ
92ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹೂಡಿಕೆ ಜಗತ್ತಿನ ಹಿರಿಯಜ್ಜನ ಪ್ರೇರಣಾದಾಯಕ ಹೇಳಿಕೆಗಳಿವು. ನಿಮಗೂ ಶ್ರೀಮಂತರಾಗಬೇಕು ಎನ್ನುವ ಹಂಬಲವಿದ್ದರೆ ಇವನ್ನೊಮ್ಮೆ ಓದಿ, ಅನುಸರಿಸಿ.
ವಾರನ್ ಬಫೆಟ್ ಅವರನ್ನು ವಿಶ್ವದ ಶ್ರೇಷ್ಠ ಹೂಡಿಕೆದಾರ ಎಂದು ಕರೆಯಲಾಗುತ್ತದೆ. ಅಮೆರಿಕ ದೇಶವು ಆರ್ಥಿಕತೆಯ ಮಹಾ ಕುಸಿತದ ಪರಿಣಾಮಗಳನ್ನು ಅನುಭವಿಸಿದ್ದ ಕಾಲಘಟ್ಟದಲ್ಲಿ (Great Depression) ಜನಿಸಿದವರು ಬಫೆಟ್. 30ನೇ ಆಗಸ್ಟ್ 1930ರಲ್ಲಿ ಅಮೆರಿಕದ ನೆಬ್ರಾಸ್ಕಾದ ಒಮಾಹದಲ್ಲಿ ಜನಿಸಿದ ಬಫೆಟ್ ಅವರಿಗೆ ಈಗ 102 ವರ್ಷ. ಬಹುರಾಷ್ಟ್ರೀಯ ಕಂಪನಿ ಬರ್ಕ್ಶೈರ್ ಹ್ಯಾತ್ವೇ (Berkshire Hathaway) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರಾಗಿ ಬಫೆಟ್ ಇಂದಿಗೂ ಕಾರ್ಯತತ್ಪರ. ವ್ಯಾಪಾರ, ಹೂಡಿಕೆಯಲ್ಲಿ ಬಫೆಟ್ ಅವರದು ಎಂದಿಗೂ ಬತ್ತದ ಉತ್ಸಾಹ. ಚಿಕ್ಕ ಬಾಲಕನಿದ್ದ ಕಾಲದಿಂದಲೇ ಅವರು ಹೂಡಿಕೆ ಬಗ್ಗೆ ಆಸಕ್ತಿಯಿಂದ ಮೊದಲ ಪಾಠಗಳನ್ನು ಕಲಿಯಲು ಯತ್ನಿಸಿದರು. ಕಾಲೇಜಿಗೆ ಹೋದ ಮೇಲೆಯೂ ಅದು ಮುಂದುವರಿಯಿತು. ತಮ್ಮ ಸಂಪತ್ತು ಮತ್ತು ಔದಾರ್ಯದ ಕಾರಣಕ್ಕೂ ಅವರ ಜನಪ್ರಿಯರಾದರು. 102 ಶತಕೋಟಿ ಡಾಲರ್ (ಸುಮಾರು 81 ಲಕ್ಷ ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾಗಿರುವ ತಮ್ಮ ಆಸ್ತಿಯ ಶೇ 99ರಷ್ಟನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ದಾನ ಮತ್ತು ದತ್ತಿಗಾಗಿ ಈ ಹಿಂದೆಯೂ ಹಲವು ಬಾರಿ ನಿಧಿ ಘೋಷಿಸಿ ಸುದ್ದಿಯಾಗಿದ್ದರು. 92ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹೂಡಿಕೆ ಜಗತ್ತಿನ ಹಿರಿಯಜ್ಜನ ಪ್ರೇರಣಾದಾಯಕ ಹೇಳಿಕೆಗಳಿವು. ನಿಮಗೂ ಶ್ರೀಮಂತರಾಗಬೇಕು ಎನ್ನುವ ಹಂಬಲವಿದ್ದರೆ ಇವನ್ನೊಮ್ಮೆ ಓದಿ, ಅನುಸರಿಸಿ.
- ವಾಣಿಜ್ಯ ಜಗತ್ತಿನಲ್ಲಿ ಹಿಂದೆ ಏನೆಲ್ಲಾ ಆಗಿತ್ತು ಎನ್ನುವುದು ಮುಂದೆ ಏನಾಗಲಿದೆ ಎನ್ನುವುದಕ್ಕಿಂತ ಸ್ಪಷ್ಟವಾಗಿ ಕಾಣಿಸುತ್ತದೆ. ಹಿಂದೇನು ಇದೆ ಎಂದು ತೋರಿಸುವ ಕನ್ನಡಿಯು ಮುಂದಿನ ಹಾದಿ ಸ್ಪಷ್ಟಪಡಿಸುವ ವಿಂಡ್ಶೀಲ್ಡ್ಗಿಂತಲೂ ಸ್ವಚ್ಛವಾಗಿರುತ್ತದೆ.
- ಗೌರವ ಸಂಪಾದಿಸಲು 20 ವರ್ಷ ಬೇಕಾಗುತ್ತೆ, ಅದನ್ನು ಕಳೆದುಕೊಳ್ಳಲು 5 ನಿಮಿಷ ಸಾಕು. ಇದರ ಬಗ್ಗೆ ಯೋಚಿಸಿದರೆ ನೀವು ಕೆಲಸಗಳನ್ನು ಬೇರೆಯದ್ದೇ ರೀತಿಯಲ್ಲಿ ಮಾಡುತ್ತೀರಿ.
- ಅಲೆ ಹಿಂದಕ್ಕೆ ಹೋದ ನಂತರವೇ ನಿಮಗೆ ಯಾರು ಬೆತ್ತಲಾಗಿ ಈಜುತ್ತಿದ್ದರು ಎಂಬುದು ಅರ್ಥವಾಗುತ್ತದೆ.
- ಭೂಮಿಯ ಮೇಲೆ ನಡೆಯುವುದು ಹೇಗೆಂದು ಮೀನಿಗೆ ವಿವರಿಸಲು ಸಾಧ್ಯವೇ? ಭೂಮಿಯ ಮೇಲೆ ಒಂದು ದಿನ ಕಳೆಯುವುದು ಸಾವಿರ ವರ್ಷ ಅದರ ಬಗ್ಗೆ ಮಾತನಾಡುವುದಕ್ಕಿಂತ ಒಳ್ಳೆಯದು. ಒಂದು ದಿನ ವ್ಯಾಪಾರ ನಡೆಸುವುದನ್ನು ಸಹ ಇದೇ ಥರ ಅರ್ಥೈಸಬೇಕು.
- ಯಶಸ್ವಿ ಜನರು ಮತ್ತು ನಿಜವಾಗಿ ಯಶಸ್ವಿಯಾದವರ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ನಿಜವಾಗಿ ಯಶಸ್ಸು ಗಳಿಸಿದವರು ಬಹುತೇಕ ಎಲ್ಲದಕ್ಕೂ ಇಲ್ಲ ಎಂದು ಹೇಳುತ್ತಾರೆ. ಅವರು ಹೌದು ಎಂದರೆ ಅದರಲ್ಲೇನೋ ಮಹತ್ವದ್ದು ಇದೆ ಎಂದು ಅರ್ಥ.
- ನಿಮಗಿಂತಲು ಉತ್ತಮರ ಸಹವಾಸ ಮಾಡಿ. ನೀವು ಯಾರೊಂದಿಗೆ ಕೆಲಸ ಮಾಡಬೇಕೋ ಅವರನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಿ. ಸಹಜವಾಗಿಯೇ ನೀವೂ ಸುಧಾರಿಸುತ್ತೀರಿ.
- ಅತ್ಯುತ್ತಮ ಫಲಿತಾಂಶ ಪಡೆಯಲು ಅತ್ಯುತ್ತಮ ಕೆಲಸಗಳನ್ನು ಮಾಡಬೇಕಿಲ್ಲ.
- ನೀವು ಅಪರೂಪಕ್ಕೊಮ್ಮೆಯಾದರೂ ಸೋರುವ ದೋಣಿಯಲ್ಲಿ ಪ್ರಯಾಣ ಮಾಡಬೇಕು. ಆಗಲೇ ನಿಮಗೆ ಸೋರುವ ದೋಣಿಯ ರಂಧ್ರ ತುಂಬುವುದಕ್ಕಿಂತಲೂ ದೋಣಿಯನ್ನು ಬದಲಿಸುವುದೇ ಕಡಿಮೆ ಶ್ರಮದ ಕೆಲಸ ಎಂದು ಅರ್ಥವಾಗುತ್ತದೆ.
- ಹೂಡಿಕೆಯ ಮೊದಲ ನಿಯಮ: ಎಂದಿಗೂ ಹಣ ಕಳೆದುಕೊಳ್ಳಬೇಡಿ. ಎರಡನೇ ನಿಯಮ: ಮೊದಲ ನಿಯಮವನ್ನು ಎಂದಿಗೂ ಮರೆಯಬೇಡಿ.
- ನೀವು ಏನು ಮಾಡುತ್ತಿದ್ದೀರಿ ಎನ್ನುವುದು ಅರ್ಥವಾಗದಿದ್ದಾಗ ರಿಸ್ಕ್ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
- ಮುಂದಿನ ವರ್ಷ ಮಳೆ ಬರುತ್ತದೆಯೋ ಇಲ್ಲವೋ ಎಂದು ಯಾರೂ ಕೃಷಿ ಭೂಮಿಯನ್ನು ಖರೀದಿಸುವುದಿಲ್ಲ. ಮುಂದಿನ 10ರಿಂದ 20 ವರ್ಷಗಳಲ್ಲಿ ಇದು ಒಳ್ಳೆಯ ಹೂಡಿಕೆಯಾಗಬಹುದು ಎಂದು ಕೃಷಿ ಭೂಮಿಯನ್ನು ಖರೀದಿಸುತ್ತಾರೆ.
- ನಿಮಗೆ ಅರ್ಥವಾಗದ ಕಂಪನಿ, ವ್ಯಾಪಾರಗಳಲ್ಲಿ ಎಂದಿಗೂ ಹಣ ಹೂಡಬೇಡಿ.
- ಹೂಡಿಕೆದಾರರಿಗೆ ಇರಬೇಕಾದ ಅತ್ಯಂತ ಮುಖ್ಯ ಲಕ್ಷಣವೆಂದರೆ ಸಮಚಿತ್ತ, ಬುದ್ಧಿವಂತಿಕೆ ಅಲ್ಲ. ಜನಜಂಗುಳಿಯ ನಡುವೆ ಇರುವುದಾಗಲೀ ಅಥವಾ ಜನಜಂಗುಳಿಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಇರುವುದಾಗಲೀ ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಾರದು.
Published On - 8:32 am, Tue, 30 August 22