
ನವದೆಹಲಿ, ಮೇ 21: ಕೇಂದ್ರ ಸರ್ಕಾರಿ ನೌಕರರಿಗೆ ಪ್ರತೀ ವರ್ಷ ಎರಡು ಬಾರಿ ಸಂಬಳ ಪರಿಷ್ಕರಣೆ (ಡಿಎ, ಡಿಆರ್) ನಡೆಯುತ್ತದೆ. ಜನವರಿ 1 ಮತ್ತು ಜುಲೈ 1ರಂದು ಪರಿಷ್ಕೃತ ಸಂಬಳ ಅನ್ವಯ ಆಗುತ್ತದೆ. ಆದರೆ, ಸಂಬಳ ಹೆಚ್ಚಳ (salary hike) ಆಗುವ ಮುನ್ನವೇ ಉದ್ಯೋಗಿ ನಿವೃತ್ತರಾದಾಗ ಏನಾಗುತ್ತದೆ? ಸಾಮಾನ್ಯವಾಗಿ ಆ ನಿವೃತ್ತ ಉದ್ಯೋಗಿಗೆ ಹೊಸ ಸಂಬಳ ಅನ್ವಯ ಆಗೋದಿಲ್ಲ. ಆತನ ಪಿಂಚಣಿಯಲ್ಲಿ ಬದಲಾವಣೆ ಆಗೋದಿಲ್ಲ. ಆದರೆ, ಒಂದು ದಿನದ ಹಿಂದೆ ಮಾತ್ರ ನಿವೃತ್ತರಾದವರಿಗೆ ವಿನಾಯಿತಿ ಇದೆ. ಅಂದರೆ, ಡಿಸೆಂಬರ್ 31 ಅಥವಾ ಜೂನ್ 30ರಂದು ನಿವೃತ್ತರಾದವರಿಗೆ ಕಾಲ್ಪನಿಕ ಸಂಬಳ ಪರಿಷ್ಕರಣೆ ಮಾಡಲಾಗುತ್ತದೆ. ಇದರಿಂದ ಇಂಥವರಿಗೆ ತುಸು ಹೆಚ್ಚಿನ ಪಿಂಚಣಿ ಸಿಗಬಹುದು.
2017ರಲ್ಲಿ ನಿವೃತ್ತ ಸರ್ಕಾರಿ ನೌಕರರೊಬ್ಬರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಸಂಬಳ ಹೆಚ್ಚಳಕ್ಕೆ ಒಂದು ದಿನ ಪೂರ್ವದಲ್ಲಿ ನಿವೃತ್ತಿಯಾಗುತ್ತಿದ್ದ ಉದ್ಯೋಗಿಗೆ ಕಾಲ್ಪನಿಕ ಸಂಬಳ ಏರಿಕೆ ಮಾಡುವಂತೆ ಕೋರ್ಟ್ ತಿಳಿಸಿತ್ತು. ಸಿಬ್ಬಂದಿ ಇಲಾಖೆಯು ಅಂದು ಕೇವಲ ಆ ಒಂದು ಪ್ರಕರಣದಲ್ಲಿ ಮಾತ್ರವೇ ಕ್ರಮ ತೆಗೆದುಕೊಂಡಿತ್ತು.
ಇದನ್ನೂ ಓದಿ: ಈ ವರ್ಷ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆ ಸಾಧ್ಯತೆ; ದಾಖಲೆ ಬರೆಯಲಿದೆ ಹಳದಿಲೋಹ; ಏನು ಕಾರಣ?
ಆದರೆ, ಅಂಥ ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರತೊಡಗಿದವು. ವಿವಿಧ ಕೋರ್ಟ್ ಮತ್ತು ನ್ಯಾಯಮಂಡಳಿಗಳಲ್ಲಿ ದಾಖಲಾದ ಈ ಅರ್ಜಿಗಳನ್ನು ಗಮನಿಸಿ ಸುಪ್ರೀಂಕೋರ್ಟ್ 2023ರಲ್ಲಿ, ಇಂಥ ನಿವೃತ್ತ ಉದ್ಯೋಗಿಗಳಿಗೆ ಕಾಲ್ಪನಿಕವಾಗಿ ಸಂಬಳ ಹೆಚ್ಚಳ ನೀಡಬೇಕೆಂದು ತೀರ್ಪು ಕೊಟ್ಟಿತು.
ಸಂಬಳ ಹೆಚ್ಚಳಕ್ಕೆ ಮುನ್ನ ನಿವೃತ್ತರಾದವರಿಗೆ ಅಂತಿಮವಾಗಿ ಸಿಗುವ ಸಂಬಳದಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೆ, ಪಿಂಚಣಿ ದೃಷ್ಟಿಯಿಂದ ಇದು ಮಹತ್ವದ್ದಾಗಿರುತ್ತದೆ. ಸಂಬಳ ಹೆಚ್ಚಳದಿಂದ ಉದ್ಯೋಗಿಯ ಮೂಲ ವೇತನವೂ ಹೆಚ್ಚಾಗುತ್ತದೆ. ಕೊನೆಯ ಸಂಬಳದಲ್ಲಿನ ಮೂಲವೇತನ ಹಾಗೂ ಒಟ್ಟು ಸೇವಾವಧಿಯ ಆಧಾರದ ಮೇಲೆ ಪಿಂಚಣಿಯನ್ನು ನಿಗದಿ ಮಾಡಲಾಗುತ್ತದೆ. ಹೀಗಾಗಿ, ನೋಷನಲ್ ಸ್ಯಾಲರಿ ಹೈಕ್ ಅಥವಾ ಕಾಲ್ಪನಿಕ ಸಂಬಳ ಹೆಚ್ಚಳವು ನಿವೃತ್ತ ಉದ್ಯೋಗಿಗೆ ದೀರ್ಘಕಾಲೀನ ಅನುಕೂಲ ನೀಡುತ್ತದೆ.
ಇದನ್ನೂ ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ
ಈ ಪಿಂಚಣಿಯನ್ನು ಹೊರತುಪಡಿಸಿದರೆ, ಕಾಲ್ಪನಿಕ ಸಂಬಳ ಹೆಚ್ಚಳದಿಂದ ನಿವೃತ್ತ ಉದ್ಯೋಗಿಗೆ ಬೇರೆ ಹೆಚ್ಚುವರಿ ಲಾಭ ಇರದು. ಗ್ರಾಚುಟಿ, ಲೀವ್ ಎನ್ಕ್ಯಾಷ್ಮೆಂಟ್ ಇತ್ಯಾದಿ ಸೌಲಭ್ಯಗಳಲ್ಲಿ ಯಾವ ಬದಲಾವಣೆಯೂ ಆಗದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ