ತೈವಾನ್ ಮೇಲೆ ಚೀನಾ ಆಕ್ರಮಣವಾದರೆ ನಿಷ್ಕ್ರಿಯಗೊಳ್ಳಲಿವೆ ಚಿಪ್ ಮೆಷೀನ್ಸ್; ಯಾಕೆ ಹೀಗೆ?
What if China occupies Taiwan?: ತೈವಾನ್ ದೇಶ ತನಗೆ ಸೇರಿದ್ದು ಎನ್ನುತ್ತಿರುವ ಚೀನಾ ಯಾವಾಗ ಬೇಕಾದರೂ ಆಕ್ರಮಣ ಮಾಡಬಹುದು ಎನ್ನಲಾಗುತ್ತಿದೆ. ವಿಶ್ವದ ಚಿಪ್ ಹಬ್ ಆಗಿರುವ ತೈವಾನ್ ಮೇಲೆ ಚೀನಾ ಆಕ್ರಮಣ ಮಾಡಿದಲ್ಲಿ ಕೆಲ ಸೂಕ್ಷ್ಮ ಚಿಪ್ ತಂತ್ರಜ್ಞಾನಗಳು ಚೀನಾ ಪಾಲಾಗಬಹುದು ಎನ್ನುವ ಭೀತಿ ಅಮೆರಿಕಕ್ಕೆ ಇದೆ. ನೆದರ್ಲ್ಯಾಂಡ್ಸ್ ಮೂಲಕ ಎಎಸ್ಎಂಎಲ್ ಸಂಸ್ಥೆ ಅತ್ಯಾಧುನಿಕ ಚಿಪ್ ಮೇಕಿಂಗ್ ಯಂತ್ರಗಳನ್ನು ತೈವಾನ್ನ ಟಿಎಸ್ಎಂಸಿಗೆ ಪೂರೈಸುತ್ತದೆ. ಈ ಮೆಷೀನ್ಗಳನ್ನು ತಾನಿರುವ ಸ್ಥಳದಿಂದಲೇ ಡಿಸೇಬಲ್ ಮಾಡಬಹುದು ಎಂದು ಆ ಸಂಸ್ಥೆ ಹೇಳಿಕೊಂಡಿದೆ.
ನ್ಯೂಯಾರ್ಕ್, ಮೇ 21: ಒಂದು ವೇಳೆ ಚೀನಾ ದೇಶ ತೈವಾನ್ ಮೇಲೆ ಆಕ್ರಮಣ ಮಾಡಿದಲ್ಲಿ ಪ್ರಮುಖ ಚಿಪ್ ತಯಾರಕ ಕಂಪನಿಗಳಾದ ಎಎಸ್ಎಂಎಲ್ (ASML) ಮತ್ತು ಟಿಎಸ್ಎಂಎಸ್ (TSMC) ತಮ್ಮ ಚಿಪ್ ಮೆಷೀನ್ಗಳನ್ನು ಡಿಸೇಬಲ್ ಮಾಡಲಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಎಎಸ್ಎಂಎಲ್ ಹೋಲ್ಡಿಂಗ್ ಎನ್ವಿ ನೆದರ್ಲ್ಯಾಂಡ್ಸ್ ದೇಶದ ಕಂಪನಿಯಾಗಿದೆ. ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕೋ ಅಥವಾ ಟಿಎಸ್ಎಂಸಿ ತೈವಾನ್ ಮೂಲದ ಕಂಪನಿಯಾಗಿದೆ. ಅಮೆರಿಕ ಸರ್ಕಾರವೇ ಖುದ್ದಾಗಿ ಈ ಮನವಿ ಮಾಡಿಕೊಂಡಿದೆಯಂತೆ. ಒಂದು ವೇಳೆ ತೈವಾನ್ ಮೇಲೆ ಚೀನಾ ಆಕ್ರಮಣ (china attacking taiwan) ಮಾಡಿಯೇ ಬಿಟ್ಟಲ್ಲಿ ಚಿಪ್ ತಯಾರಿಸುವ ಮೆಷಿನ್ಗಳು ಚೀನಾ ಪಾಲಾಗಬಹುದು ಎನ್ನುವ ಆತಂಕವನ್ನು ನೆದರ್ಲ್ಯಾಂಡ್ಸ್ ಮತ್ತು ತೈವಾನ್ ಸರ್ಕಾರದ ಮುಂದೆ ಅಮೆರಿಕ ತೋಡಿಕೊಂಡಿದೆ ಎನ್ನಲಾಗುತ್ತಿದೆ.
ಚಿಪ್ ಮೆಷೀನ್ ಡಿಸೇಬಲ್ ಮಾಡಲು ಒಪ್ಪಿರುವ ಕಂಪನಿಗಳು
ಅಮೆರಿಕ ಆತಂಕ ತೋಡಿಕೊಂಡ ಬೆನ್ನಲ್ಲೇ ಡಚ್ ಮತ್ತು ತೈವಾನ್ ಸರ್ಕಾರಗಳು ತಮ್ಮ ದೇಶದ ಚಿಪ್ ತಯಾರಕ ಕಂಪನಿಗಳೊಂದಿಗೆ ಈ ಬಗ್ಗೆ ಮಾತನಾಡಿವೆ. ಎಎಸ್ಎಂಎಲ್ ಚಿಪ್ ತಯಾರಿಸುವ ಮೆಷೀನ್ಗಳನ್ನು ಸರಬರಾಜು ಮಾಡುತ್ತದೆ. ತೈವಾನ್ನ ಟಿಎಸ್ಎಂಸಿ ಅದರ ಪ್ರಮುಖ ಗ್ರಾಹಕ. ಈ ಮೆಷೀನ್ಗಳನ್ನು ತಾವಿರುವ ಸ್ಥಳದಿಂದಲೇ ನಿಷ್ಕ್ರಿಯಗೊಳಿಸಲು ಸಾಧ್ಯ. ಚೀನಾವೇನಾದರೂ ತೈವಾನ್ ಮೇಲೆ ಆಕ್ರಮಣ ಮಾಡಿದರೆ ಇಲ್ಲಿಂದಲೇ ಮೆಷೀನ್ ಅನ್ನು ಡಿಸೇಬಲ್ ಮಾಡಲು ಸಾಧ್ಯ ಎಂದು ಎಎಸ್ಎಂಎಲ್ ಸಂಸ್ಥೆಯ ಅಧಿಕಾರಿಗಳು ತಮ್ಮ ಸರ್ಕಾರಕ್ಕೆ ಭರವಸೆ ಕೊಟ್ಟಿದೆಯಂತೆ.
ಇದನ್ನೂ ಓದಿ: ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್ಗೆ ಸರ್ಕಾರ ಮನವಿ
ಎಎಸ್ಎಂಎಲ್ ಚಿಪ್ನಲ್ಲಿ ಅಂಥದ್ದೇನಿದೆ?
ನೆದರ್ಲ್ಯಾಂಡ್ಸ್ನ ಎಎಸ್ಎಂಎಲ್ ಬಳಿ ಚಿಪ್ ತಯಾರಿಸಲು ವಿವಿಧ ರೀತಿಯ ಮೆಷೀನ್ಗಳಿವೆ. ಇದರಲ್ಲಿ ಇಯುವಿ ಅಥವಾ ಎಕ್ಸ್ಟ್ರೀಮ್ ಅಲ್ಟ್ರಾವಯಲೆಟ್ ಮೆಷೀನ್ಗಳೂ ಇವೆ. ಈ ಇಯುವಿ ಮೆಷೀನ್ಗಳು ಹೈ ಫ್ರೀಕ್ವನ್ಸಿ ಲೈಟ್ ವೇವ್ಗಳನ್ನು ಸೃಷ್ಟಿಸಿ ಅತಿಸಣ್ಣ ಮೈಕ್ರೋಚಿಪ್ ಟ್ರಾನ್ಸಿಸ್ಟರ್ಗಳನ್ನು ಮುದ್ರಿಸಬಲ್ಲುವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಪ್ಲಿಕೇಶನ್ಗಳಿಗೆ ಬಳಸಲು ಮತ್ತು ಬಹಳ ಸೂಕ್ಷ್ಮ ಮಿಲಿಟರಿ ಅಪ್ಲಿಕೇಶನ್ಗಳಿಗೆ ಬಳಸಲು ಈ ಪುಟ್ಟ ಚಿಪ್ಗಳು ನೆರವಿಗೆ ಬರುತ್ತವೆ.
ಈ ಇಯುವಿ ಮೆಷೀನ್ಗಳು ಒಂದು ಬಸ್ ಗಾತ್ರದ್ದಾಗಿರುತ್ತದೆ. ಇಡೀ ವಿಶ್ವದಲ್ಲಿ ನೆದರ್ಲ್ಯಾಂಡ್ಸ್ನ ಎಎಸ್ಎಂಎಲ್ ಸಂಸ್ಥೆ ಮಾತ್ರವೇ ಈ ಮಹಾ ಚಿಪ್ ಯಂತ್ರವನ್ನು ತಯಾರಿಸುವುದು. ಒಂದು ಯಂತ್ರಕ್ಕೆ 217 ಮಿಲಿಯನ್ ಡಾಲರ್, ಅಥವಾ 1,800 ಕೋಟಿ ರೂ ಬೆಲೆ ಇದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಹೆಚ್ಚಿಸಿಕೊಂಡ ಭಾರತೀಯ ಷೇರುಪೇಟೆ; ಮೊದಲ ಬಾರಿಗೆ 5 ಟ್ರಿಲಿಯನ್ ಮೈಲಿಗಲ್ಲು
ಅಮೆರಿಕ-ಚೀನಾ ಚಿಪ್ ವಾರ್
ತಂತ್ರಜ್ಞಾನದಲ್ಲಿ ಹಲವು ದಶಕಗಳಿಂದ ಅಮೆರಿಕವೇ ಸೂಪರ್ ಪವರ್ ದೇಶವಾಗಿದೆ. ವೈಜ್ಞಾನಿಕ ಸಂಶೋಧನೆಗಳಿಂದ ಹಿಡಿದು ತಂತ್ರಜ್ಞಾನ ಆವಿಷ್ಕಾರಗಳಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಚೀನಾ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳೆದಿದೆ. ಕೆಲವೊಂದು ವಿಚಾರಗಳಲ್ಲಿ ಅಮೆರಿಕವನ್ನೂ ಮೀರಿಸಿ ಚೀನಾ ಮುನ್ನಡೆಯುತ್ತಿದೆ ಎನ್ನಲಾಗುತ್ತಿದೆ.
ಭವಿಷ್ಯದಲ್ಲಿ ಚಿಪ್ಗಳು ಬಹಳ ದೊಡ್ಡ ಪಾತ್ರ ವಹಿಸಲಿವೆ. ಈ ತಂತ್ರಜ್ಞಾನವನ್ನು ಯಾರು ಹೆಚ್ಚು ಬೆಳೆಸಿಕೊಂಡು ಹೋಗುತ್ತಾರೋ ಅವರು ಪಾರುಪತ್ಯ ಮೆರೆಯಲಿದ್ದಾರೆ. ಅಂತೆಯೇ, ಈ ರೇಸ್ನಲ್ಲಿ ಚೀನಾ ಮುಂಚೂಣಿಗೆ ಬರಬಾರದು ಎಂಬುದು ಅಮೆರಿಕದ ಇರಾದೆ. ಅದಕ್ಕೆ ಎಎಸ್ಎಂಎಲ್ನ ಅತ್ಯಾಧುನಿಕ ಚಿಪ್ ಮೇಕಿಂಗ್ ಮೆಷೀನ್ನ ತಂತ್ರಜ್ಞಾನ ಚೀನೀಯರ ಕೈಗೆ ಸಿಗಬಾದು ಎಂದು ಅದು ಬಯಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ