PoK with India: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ… ಇಲ್ಲಿದೆ ಅನುಕೂಲಗಳ ವಿವರ

Benefits of PoK merging with India: ಪಾಕಿಸ್ತಾನದೊಂದಿಗೆ ಮಾತುಕತೆ ಆಗುವುದಿದ್ದರೆ ಅದು ಪಿಒಕೆ ವಿಚಾರವಾಗಿ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತ ವಿರೋಧಿ ಶಕ್ತಿಗಳಿರುವ ಪಿಒಕೆ ಭಾಗವು ಭಾರತಕ್ಕೆ ಬಂದರೆ ಮತ್ತಷ್ಟು ಸಮಸ್ಯೆಗಳು ವಕ್ಕರಿಸುವುದಿಲ್ಲವಾ? ಸಮಸ್ಯೆಗಳಿಗಿಂತ ಹೆಚ್ಚು ಅನುಕೂಲಗಳು ಭಾರತಕ್ಕೆ ತಂದಿಡುತ್ತದೆ ಪಿಒಕೆ.

PoK with India: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ಆಗುವ ಪ್ರಯೋಜನ ಅಷ್ಟಿಷ್ಟಲ್ಲ... ಇಲ್ಲಿದೆ ಅನುಕೂಲಗಳ ವಿವರ
ಪಾಕ್ ಆಕ್ರಮಿತ ಕಾಶ್ಮೀರ

Updated on: May 15, 2025 | 6:26 PM

ಭಾರತದ ಆಪರೇಷನ್ ಸಿಂದೂರದಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನವು (pakistan) ಎರಡೂ ದೇಶಗಳ ಮಧ್ಯೆ ಕಾಶ್ಮೀರ ವಿಚಾರದ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಅಮೆರಿಕ ಇತ್ಯಾದಿ ದೇಶಗಳಿಗೆ ದುಂಬಾಲು ಬೀಳುತ್ತಿದೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ವಿಚಾರವಾಗಿ ಸ್ಪಷ್ಟವಾಗಿ ಒಂದು ವಿಚಾರ ಹೇಳಿದ್ದಾರೆ. ಅದು, ಮಾತುಕತೆ ಆಗುವುದೇ ಆದರೆ ಪಾಕ್ ಆಕ್ರಮಿತ ಕಾಶ್ಮೀರ (PoK- Pak occupied Kashmir) ಕುರಿತು ಆಗಲಿ, ಮತ್ತು ಭಯೋತ್ಪಾದನೆ ಕುರಿತು ಆಗಲಿ ಎಂದು ಹೇಳಿದ್ದಾರೆ. ಭಾರತದಲ್ಲೇ ಹತ್ತೆಂಟು ಸಮಸ್ಯೆಗಳಿರುವಾಗ ಪಾಕ್ ಆಕ್ರಮಿತ ಕಾಶ್ಮೀರ ಇಟ್ಟುಕೊಂಡರೆ ಭಾರತಕ್ಕೆ ಬಗುಲಲ್ಲಿ ಕೆಂಡ ಇಟ್ಟುಕೊಂಡಂತೆ ಆಗೋದಿಲ್ಲವಾ ಎನ್ನುವುದು ಕೆಲವರ ವಾದ. ಆದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಡೆಯುವುದರಿಂದ ಭಾರತಕ್ಕೆ ಹಲವು ಪ್ರಯೋಜನಗಳಿವೆ ಎಂಬುದನ್ನು ಗಮನಿಸಬೇಕು.

ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿತ್ತು. ವಿಭಜನೆ ನಂತರದ ಅನಾಹುತಗಳಲ್ಲಿ ಅದು ಬೇರ್ಪಟ್ಟುಹೋಗಿದ್ದು ಹೌದು. ಈಗ ಅದನ್ನು ಮರಳಿ ಪಡೆದರೆ ಭಾರತದ ಸಾರ್ವಭೌಮತ್ವಕ್ಕೆ ನಿಜಾರ್ಥ ಬರುತ್ತದೆ. ಐತಿಹಾಸಿಕ ತಪ್ಪನ್ನು ಸರಿಪಡಿಸಿದಂತೆ ಆಗುತ್ತದೆ. ಈಗಲೂ ಪಾಕಿಸ್ತಾನದ ಆಡಳಿತದಿಂದ ನ್ಯಾಯಯುತ ನಡವಳಿಕೆ ಕಾಣದ ಅಲ್ಲಿನ ಜನರಿಗೆ ಭಾರತದ ಆಡಳಿತವು ಹೆಚ್ಚು ಸ್ವಾತಂತ್ರ್ಯ ನೀಡಬಹುದು. ಇದು ರಾಜಕೀಯ ಸಂಗತಿ. ಆದರೆ, ಪಿಒಕೆಯಿಂದ ಭಾರತಕ್ಕೆ ಇನ್ನೂ ಮಹತ್ತರವಾದ ಲಾಭಗಳಿವೆ.

ಇದನ್ನೂ ಓದಿ: ಟರ್ಕಿಯ ಕಡುವೈರಿ ದೇಶದ ಮಿಲಿಟರಿಗೆ ಭಾರತದ ರುದ್ರಂ ಕ್ಷಿಪಣಿಗಳ ಮೇಲೆ ಆಸಕ್ತಿ

ಇದನ್ನೂ ಓದಿ
ಭಾರತ-ಪಾಕ್ ಮಧ್ಯಸ್ಥಿಕೆ ಬಗ್ಗೆ ವರಸೆ ಬದಲಿಸಿದ ಡೊನಾಲ್ಡ್ ಟ್ರಂಪ್
ಪಾಕಿಸ್ತಾನದ ಪರಮಾಣು ಬಾಂಬ್‌ಗಳ ಜಾಗತಿಕ ಮೇಲ್ವಿಚಾರಣೆ ಅಗತ್ಯ;ರಾಜನಾಥ್ ಸಿಂಗ್
ಟರ್ಕಿಯ ಕಡುವೈರಿ ರಾಷ್ಟ್ರಕ್ಕೆ ಭಾರತದಿಂದ ರುದ್ರಂ ಕ್ಷಿಪಣಿ?
ಸಿಂಧೂ ಜಲ ಒಪ್ಪಂದದ ರದ್ದತಿ ಮರುಪರಿಶೀಲಿಸಿ;ಮೊದಲ ಬಾರಿ ಭಾರತಕ್ಕೆ ಪಾಕ್ ಮನವಿ

ಪಿಒಕೆಯ ಪ್ರಾದೇಶಿಕ ಮಹತ್ವ

ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶದ ಭೌಗೋಳಿಕ ಸ್ಥಳ ಭಾರತಕ್ಕೆ ಬಹಳ ಮಹತ್ತರವಾದುದು. ಮಧ್ಯೆ ಏಷ್ಯಾ ಹಾಗೂ ಅಫ್ಘಾನಿಸ್ತಾನ ದೇಶಗಳನ್ನು ಭಾರತ ನೇರವಾಗಿ ಪ್ರವೇಶಿಸಬಹುದು. ಪಾಕಿಸ್ತಾನ ಅಥವಾ ಇರಾನ್ ಮೂಲಕ ಹಾದು ಹೋಗಬೇಕಾದ ಅನಿವಾರ್ಯತೆ ತಪ್ಪುತ್ತದೆ. ಚೀನಾಗೆ ಅದರ ಪಶ್ಚಿಮ ಭಾಗದಲ್ಲಿ ಒಂದು ತಡೆಯಾಗಿ ಭಾರತ ನಿಲ್ಲಬಹುದು.

ಪಿಒಕೆಯಲ್ಲಿ ಸಮೃದ್ಧ ಯುರೇನಿಯಂ ಖನಿಜ

ಪಿಒಕೆ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಪರಮಾಣು ಶಕ್ತಿ ಉತ್ಪಾದಿಸಲು ಬೇಕಾದ ಯುರೇನಿಯಂ ಇಲ್ಲಿ ಇದೆ. ನೀಲಂ, ಝೀಲಂ ನದಿಗಳ ಹರಿವಿನಿಂದ ಜಲವಿದ್ಯುತ್ ಉತ್ಪಾದನೆ ಮಾಡಬಹುದು. ಪಾಕಿಸ್ತಾನವು ಇಷ್ಟೆಲ್ಲಾ ಸಮೃದ್ಧವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನದ ಸಂಪನ್ಮೂಲ ದುರ್ಬಳಕೆ ಮಾಡಿಕೊಂಡು ಅದರ ಪಂಜಾಬ್ ಭಾಗದ ಅಭಿವೃದ್ಧಿ ಮಾತ್ರ ಮಾಡುತ್ತಿದೆ. ಭಾರತವು ಇಡೀ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಸಮೃದ್ಧಪಡಿಸಲು ಈ ಸಂಪನ್ಮೂಲಗಳನ್ನು ಬಳಸಬಹುದು.

ಪಿಒಕೆಯಿಂದ ಭಾರತಕ್ಕೆ ಭದ್ರತೆ

ಭಾರತದ ಕಾಶ್ಮೀರ ಭಾಗಕ್ಕೆ ಒಳನುಸುಳಿ ಬರುತ್ತಿರುವ ಉಗ್​ರಗಾಮಿಗಳಿಗೆ ಪೋಷಣೆ ಆಗುತ್ತಿರುವುದು ಇದೇ ಪಿಒಕೆಯಲ್ಲಿ. ಬಹುತೇಕ ಎಲ್ಲಾ ಉಗ್ರ ಶಿಬಿರಗಳು, ಲಾಂಚ್ ಪ್ಯಾಡ್​​ಗಳು ಅಸ್ತಿತ್ವದಲ್ಲಿರುವುದು ಇಲ್ಲಿಯೇ. ಇದನ್ನು ಭಾರತದ ಹಿಡಿತಕ್ಕೆ ತೆಗೆದುಕೊಂಡರೆ ಉಗ್ರರನ್ನು ಮೂಲದಲ್ಲೇ ಚಿವುಟಿ ಹಾಕಲು ಸಾಧ್ಯ.

ಇದನ್ನೂ ಓದಿ: ಬಲೂಚಿಸ್ತಾನದ ಸಹಾಯಕ ಆಯುಕ್ತರಾಗಿ ಹಿಂದೂ ಮಹಿಳೆ ನೇಮಕ, ಯಾರು ಈ ಕಾಶಿಶ್ ಚೌಧರಿ? ಇಲ್ಲಿದೆ ಮಾಹಿತಿ

ಸಿಪೆಕ್ ಕಾರಿಡಾರ್​​ಗೆ ಇದು ಪ್ರಮುಖ ಕೊಂಡಿ…

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಆದ ಸಿಪೆಕ್​​ನ ದಾರಿ ಪಿಒಕೆಯಿಂದ ಸಾಗುತ್ತದೆ. ಇದು ಭಾರತದ ವಶಕ್ಕೆ ಹೋದರೆ ಚೀನಾದ ಈ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿಯುತ್ತದೆ. ಭಾರತದ ಜೊತೆ ಚೀನಾ ತಗ್ಗಿಬಗ್ಗಿ ಇರಬೇಕಾಗುತ್ತದೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವುದರಿಂದ ಭಾರತದ ಸ್ವಾಭಿಮಾನ ಮತ್ತಷ್ಟು ಜಾಗೃತಿ ಆಗುವುದರ ಜೊತೆಗೆ ಇಷ್ಟೆಲ್ಲಾ ಲಾಭಗಳು ಸಿಗುತ್ತವೆ. ಸಮೃದ್ಧ ಸಂಪನ್ಮೂಲ ಇರುವ ಗಿಲ್ಗಿಟ್ ಬಾಲ್ಟಿಸ್ತಾನ ಕೂಡ ಅಭಿವೃದ್ಧಿಗೊಳ್ಳಲು ಸಾಧ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Thu, 15 May 25