WPI: ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ 13.11ಕ್ಕೆ ಏರಿಕೆ

ಭಾರತದಲ್ಲಿ ಫೆಬ್ರವರಿ ತಿಂಗಳಿನ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 13.11 ತಲುಪಿದೆ. ಆ ಬಗ್ಗೆ ವಿವರಗಳು ಈ ಲೇಖನದಲ್ಲಿ ಇವೆ.

WPI: ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ 13.11ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 14, 2022 | 4:28 PM

ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿದ ಭಾರತದ ಹಣದುಬ್ಬರವು (Inflation) ಫೆಬ್ರವರಿಯಲ್ಲಿ ಶೇ 13.11ಕ್ಕೆ ಏರಿದೆ. ಮಾರ್ಚ್ 14ರಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಜನವರಿಯಲ್ಲಿ ಶೇ 12.96 ಇತ್ತು. ಅಂದ ಹಾಗೆ 2021ರ ಫೆಬ್ರವರಿಯಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 4.83 ಇತ್ತು. WPI ಹಣದುಬ್ಬರವು ಹೆಚ್ಚುತ್ತಿರುವ ವೆಚ್ಚವನ್ನು ಉತ್ಪಾದಕರು ತಮ್ಮ ಗ್ರಾಹಕರಿಗೆ ವರ್ಗಾಯಿಸುವುದರಿಂದ ಹೆಚ್ಚಿನ ಗ್ರಾಹಕ ಬೆಲೆಗಳಿಗೆ ಪೂರ್ವಭಾವಿಯಾಗಿ ಕಂಡುಬರುತ್ತದೆ. ಈ ಮಧ್ಯೆ, ಜನವರಿಯಲ್ಲಿ ಭಾರತದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಸರಣಿಯ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ತಯಾರಿಸಿದ ಆಹಾರ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೆಲೆಗಳನ್ನು ಕಡಿಮೆ ಆದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿತ್ತು. ರಷ್ಯಾ ಮತ್ತು ಉಕ್ರೇನ್‌ನ ಸುತ್ತಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನದಿಂದಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳು ಹೆಚ್ಚಿದ ಕಾರಣ ಮುಂದಿನ ತಿಂಗಳುಗಳಲ್ಲಿ ಬೆಲೆ ಏರಿಕೆ ದರವು ಎರಡಂಕಿಯಲ್ಲಿ ಇರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಆಹಾರ ಪದಾರ್ಥಗಳ ಹಣದುಬ್ಬರವು ಶೇ 10.33ರಿಂದ ಫೆಬ್ರವರಿಯಲ್ಲಿ ಶೇ 8.19ಕ್ಕೆ ಇಳಿದಿದೆ. ತರಕಾರಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 26.93ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಅದು ಶೇ 38.45ರಷ್ಟಿತ್ತು. “ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರ ಫೆಬ್ರವರಿಯಲ್ಲಿ ಹಣದುಬ್ಬರದ ಹೆಚ್ಚಿನ ದರವು ಪ್ರಾಥಮಿಕವಾಗಿ ಖನಿಜ ತೈಲಗಳು, ಮೂಲ ಲೋಹಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಪದಾರ್ಥಗಳು ಹಾಗೂ ಆಹಾರೇತರ ವಸ್ತುಗಳು ಇತ್ಯಾದಿಗಳ ಬೆಲೆಗಳಲ್ಲಿ ಏರಿಕೆಯಾಗಿದೆ,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಯಾರಿಸಿದ ವಸ್ತುಗಳ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 9.84ರಷ್ಟಿತ್ತು, ಇದು ಜನವರಿಯಲ್ಲಿ ಶೇ 9.42ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ಬುಟ್ಟಿಯಲ್ಲಿ ತಿಂಗಳಿನಲ್ಲಿ ಬೆಲೆ ಏರಿಕೆ ದರವು ಶೇ 31.50ರಷ್ಟಿದೆ. ಕಚ್ಚಾ ಪೆಟ್ರೋಲಿಯಂನಲ್ಲಿನ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 55.17ಕ್ಕೆ ಏರಿದ್ದು, ಹಿಂದಿನ ತಿಂಗಳಲ್ಲಿ ಶೇ 39.414ರಲ್ಲಿತ್ತು. ಅಂದಹಾಗೆ ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ಏರುತ್ತಿದೆ. ರಿಸರ್ವ್ ಬ್ಯಾಂಕ್ ಕಳೆದ ತಿಂಗಳು ತನ್ನ ಪ್ರಮುಖ ರೆಪೋ ದರವನ್ನು ಹಾಗೇ ಉಳಿಸಿಕೊಂಡಿದೆ – ಇದು ಬ್ಯಾಂಕ್​ಗಳಿಗೆ ಅಲ್ಪಾವಧಿಯ ಹಣವನ್ನು ಸಾಲವಾಗಿ ನೀಡುತ್ತದೆ – ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಹಣದುಬ್ಬರದ ಒತ್ತಡವನ್ನು ನಿರ್ವಹಿಸಲು ಸತತವಾಗಿ 10ನೇ ಬಾರಿಗೆ ಶೇಕಡಾ 4ರಲ್ಲಿ ಬದಲಾಗದೆ ಹಾಗೇ ಉಳಿಸಿಕೊಳ್ಳಲಾಗಿದೆ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ಇದನ್ನೂ ಓದಿ: ರಷ್ಯಾ – ಉಕ್ರೇನ್​ ಯುದ್ಧ: ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ: ಮಾರಾಟಗಾರರ ಮೇಲೆ ಕೃತಕ ಅಭಾವ ಸೃಷ್ಟಿ ಆರೋಪ