
ನವದೆಹಲಿ, ಜುಲೈ 9: ಜಗತ್ತಿನ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೂ ನಾವು ಮೊದಲು ಹುಡುಕುವ ಜಾಗ ಎಂದರೆ ವಿಕಿಪೀಡಿಯಾ (Wikipedia). ಆದರೆ, “ಯಾರು ಬೇಕಾದರೂ ಸಂಪಾದಿಸಬಹುದಾದ ಮುಕ್ತ ಜ್ಞಾನಕೋಶ” ಎಂದು ಕರೆಸಿಕೊಳ್ಳುವ ವಿಕಿಪೀಡಿಯಾ ಈಗ ಸೈದ್ಧಾಂತಿಕ ಹಿತಾಸಕ್ತಿ ಹೊಂದಿರುವ ಕೆಲವು ಅನಾಮಧೇಯ ಗುಂಪುಗಳ (Anonymous Mob) ಸಂಪೂರ್ಣ ನಿಯಂತ್ರಣಕ್ಕೆ ಸಿಲುಕಿದೆ. ಎಷ್ಟು ಮಟ್ಟಿಗೆ ಎಂದರೆ, ಸ್ವತಃ ವಿಕಿಪೀಡಿಯಾದ ಸಹ-ಸ್ಥಾಪಕರಾದ ಲ್ಯಾರಿ ಸ್ಯಾಂಗರ್ (Larry Sanger) ಅವರನ್ನೇ ಈ ವೇದಿಕೆಯಿಂದ ಶಾಶ್ವತವಾಗಿ ನಿಷೇಧಿಸಲಾಗಿದೆಯಂತೆ. ಹಾಗಂತ ಸ್ವತಃ ಸ್ಯಾಂಗರ್ ಅವರೇ ಹೇಳಿಕೊಂಡಿದ್ದಾರೆ.
ವಿಕಿಪೀಡಿಯಾದ ಕೋಫೌಂಡರ್ಗಳಲ್ಲಿ ಒಬ್ಬರಾಗಿರುವ ಲ್ಯಾರಿ ಸ್ಯಾಂಗರ್ ಅವರು ವಾಷಿಂಗ್ಟನ್ ಎಕ್ಸಾಮಿನರ್ ಎನ್ನುವ ವೆಬ್ಸೈಟ್ನ ಓಪನ್ ಎಡ್ನಲ್ಲಿ ಇತ್ತೀಚೆಗೆ ಬರೆದಿರುವ ಲೇಖನದಲ್ಲಿ ಇವತ್ತಿನ ವಿಕಿಪೀಡಿಯಾದ ವಾಸ್ತವ ಸ್ಥಿತಿಯ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರ ಜಾಗತಿಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
2001 ರಲ್ಲಿ ವಿಕಿಪೀಡಿಯಾ ಸಂಸ್ಥೆಯನ್ನು ಕಟ್ಟಿ, ಅದಕ್ಕೆ ಹೆಸರಿಟ್ಟಿದ್ದೇ ಲ್ಯಾರಿ ಸ್ಯಾಂಗರ್. ಆದರೆ ಇತ್ತೀಚೆಗೆ ಅವರು ವಿಕಿಪೀಡಿಯಾದಲ್ಲಿ ಕೆಲವು ತಿದ್ದುಪಡಿ ಹಾಗೂ ಸುಧಾರಣೆಗಳನ್ನು ತರಲು ಪ್ರಯತ್ನಿಸಿದಾಗ, ಅಲ್ಲಿನ ಅನಾಮಧೇಯ ಅಡ್ಮಿನ್‌ಗಳು (Administrators) ಅವರ ಖಾತೆಯನ್ನೇ ನಿರ್ಬಂಧಿಸಿದ್ದಾರೆ. “ನೀವು ನಿಯಮಗಳ ಪ್ರಕಾರ ಮಾಹಿತಿ ನೀಡುತ್ತಿಲ್ಲ” ಎಂಬ ಅಸ್ಪಷ್ಟ ಕಾರಣ ನೀಡಿ ಸ್ಯಾಂಗರ್ ಅವರನ್ನು ಹೊರಹಾಕಲಾಗಿದೆ.
“ಸ್ವತಃ ಸಂಸ್ಥಾಪಕನಿಗೇ ಇಲ್ಲಿ ಮುಕ್ತವಾಗಿ ಬರೆಯುವ ಸ್ವಾತಂತ್ರ್ಯವಿಲ್ಲ ಎಂದರೆ, ಇನ್ನು ಸಾಮಾನ್ಯ ಜನರ ಕಥೆಯೇನು?” ಎಂದು ಸ್ಯಾಂಗರ್ ಅವರು ತಮ್ಮ ಬ್ಲಾಗ್ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಗೃಹ ಜ್ಯೋತಿ ಸ್ಕೀಮ್ನಲ್ಲಿ ಆರ್ಆರ್ ನಂಬರ್ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?
ಲ್ಯಾರಿ ಸ್ಯಾಂಗರ್ ಅವರ ಪ್ರಕಾರ, ವಿಕಿಪೀಡಿಯಾ ಈಗ ಮೊದಲಿನಂತೆ ನಿಷ್ಪಕ್ಷಪಾತವಾಗಿ ಉಳಿದಿಲ್ಲ. ವಿಕಿಪೀಡಿಯಾದ ಬಹುತೇಕ ಪ್ರಭಾವಿ ಅಡ್ಮಿನ್‌ಗಳು ತಮ್ಮ ಅಸಲಿ ಹೆಸರನ್ನು ಮರೆಮಾಚಿ ಅನಾಮಧೇಯರಾಗಿ ಕೆಲಸ ಮಾಡುತ್ತಾರೆ. ಇವರು ತಮ್ಮದೇ ಆದ ಸಣ್ಣ ಗುಂಪುಗಳನ್ನು ಮಾಡಿಕೊಂಡು, ತಮಗೆ ಇಷ್ಟವಿಲ್ಲದ ಅಥವಾ ತಮ್ಮ ಸಿದ್ಧಾಂತಕ್ಕೆ ಹೊಂದಿಕೆಯಾಗದ ಬರಹಗಾರರನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ಬ್ಯಾನ್ ಮಾಡುತ್ತಾರೆ.
ವಿಕಿಪೀಡಿಯಾದಲ್ಲಿ ನಿಷ್ಪಕ್ಷಪಾತ ಮಾಹಿತಿ ಇರಬೇಕು ಎಂಬ ನಿಯಮವಿದ್ದರೂ, ತೆರೆಯ ಮರೆಯಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಪೇಯ್ಡ್ ಎಡಿಟಿಂಗ್ (Paid Editing) ಆಗುತ್ತಿದೆ. ದೊಡ್ಡ ಪಿಆರ್ (PR) ಏಜೆನ್ಸಿಗಳು, ಬಿಲಿಯನೇರ್‌ಗಳು ಮತ್ತು ಕೆಲವು ಸರ್ಕಾರಗಳು ತಮಗೆ ಬೇಕಾದಂತೆ ಮಾಹಿತಿಯನ್ನು ತಿರುಚಲು ಹಣ ನೀಡುತ್ತಿದ್ದಾರೆ. ಬ್ರಿಟನ್ ಸಚಿವರೊಬ್ಬರ ವಿವಾದಾತ್ಮಕ ಸಂಬಂಧಗಳನ್ನು (Link with Epstein) ಮುಚ್ಚಿಹಾಕಲು ಅನಾಮಧೇಯ ಎಡಿಟರ್‌ಗಳಿಗೆ ಹಣ ನೀಡಲಾಗಿತ್ತು ಎಂಬ ಉದಾಹರಣೆಯನ್ನು ಲ್ಯಾರಿ ಸ್ಯಾಂಗರ್ ಅವರು ನೀಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಹಾಗೂ ಪ್ರಮುಖ ಚುನಾವಣೆಗಳ ಸಮಯದಲ್ಲಿ ಸರ್ಕಾರಗಳು ಮತ್ತು ಪ್ರಭಾವಿ ಸಂಸ್ಥೆಗಳು ವಿಕಿಪೀಡಿಯಾ ಜೊತೆ ಮಾತುಕತೆ ನಡೆಸಿ ತಮಗೆ ಪೂರಕವಾದ ಮಾಹಿತಿಯನ್ನು ಮಾತ್ರ ಜಗತ್ತಿಗೆ ತೋರಿಸುವಂತೆ ಪ್ರಭಾವ ಬೀರಿದ್ದವು ಎಂದು ಸ್ಯಾಂಗರ್ ಆಪಾದಿಸಿದ್ದಾರೆ.
ಇದನ್ನೂ ಓದಿ: ಈ ವಾರ ನಿರೀಕ್ಷಿಸಿ ಹೊಸ ಸ್ವರೂಪದ ಇಪಿಎಫ್ಒ; ಸೈಟ್ಸ್ ಅಳವಡಿಕೆ; ವೇಗದ ಸೇವೆ ಸುಲಭ ಬಳಕೆ; ಇನ್ನೇನಿದೆ ಇದರ ವಿಶೇಷತೆ?
ವಿಕಿಪೀಡಿಯಾವು ಕೇವಲ ಒಂದು ವೆಬ್‌ಸೈಟ್ ಅಲ್ಲ, ಅದು ಜಾಗತಿಕವಾಗಿ ಜನರ ಆಲೋಚನೆಗಳನ್ನು ರೂಪಿಸುವ ಶಕ್ತಿಯಾಗಿದೆ. ಇಂತಹ ವೇದಿಕೆ ಸೈದ್ಧಾಂತಿಕ ಗುಂಪುಗಳ ವಶವಾದರೆ ಕೆಲ ಗಂಭೀರ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು.
ವಿಕಿಪೀಡಿಯಾದ ಈ ಸ್ಥಿತಿಯನ್ನು ಕಂಡು ಬೇಸತ್ತಿರುವ ಲ್ಯಾರಿ ಸ್ಯಾಂಗರ್, “ಇದು ಜಗತ್ತಿನ ಅತ್ಯಂತ ಪ್ರಭಾವಿ ಮಾಧ್ಯಮ ವೇದಿಕೆಗಳಲ್ಲಿ ಒಂದಾಗಿದೆ. ಆದರೆ ಇದನ್ನು ನಿಜವಾಗಿ ನಿಯಂತ್ರಿಸುತ್ತಿರುವುದು ಯಾರು ಎಂಬುದನ್ನು ಜಗತ್ತು ತಿಳಿಯುವ ಸಮಯ ಮೀರಿದೆ,” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ
ಪ್ರಶ್ನೆ: ಸಹ-ಸ್ಥಾಪಕ ಲ್ಯಾರಿ ಸ್ಯಾಂಗರ್ ಅವರನ್ನೇ ವಿಕಿಪೀಡಿಯಾದಲ್ಲಿ ಯಾಕೆ ನಿರ್ಬಂಧಿಸಲಾಗಿದೆ?
ಉತ್ತರ: ವಿಕಿಪೀಡಿಯಾದಲ್ಲಿ ಸೈದ್ಧಾಂತಿಕ ಸುಧಾರಣೆಗಳನ್ನು ತರಲು ಪ್ರಯತ್ನಿಸಿದ್ದಕ್ಕಾಗಿ ಅಲ್ಲಿನ ಪ್ರಭಾವಿ ಅನಾಮಧೇಯ ಅಡ್ಮಿನ್‌ಗಳು ಸ್ಯಾಂಗರ್ ಅವರ ಖಾತೆಯನ್ನು ಶಾಶ್ವತವಾಗಿ ನಿರ್ಬಂಧಿಸಿದ್ದಾರೆ.
ಪ್ರಶ್ನೆ: ವಿಕಿಪೀಡಿಯಾವನ್ನು ಸದ್ಯ ನಿಯಂತ್ರಿಸುತ್ತಿರುವ ‘ಅನಾಮಧೇಯ ಗುಂಪುಗಳು’ ಯಾವುವು?
ಉತ್ತರ: ಇವರು ತಮ್ಮ ಅಸಲಿ ಗುರುತು ಮರೆಮಾಚಿ, ವಿಕಿಪೀಡಿಯಾದ ನಿಯಮಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾ ಭಿನ್ನ ಸಿದ್ಧಾಂತದ ಬರಹಗಾರರನ್ನು ಹತ್ತಿಕ್ಕುವ ಪ್ರಭಾವಿ ಎಡಿಟರ್‌ಗಳಾಗಿದ್ದಾರೆ.
ಪ್ರಶ್ನೆ: ವಿಕಿಪೀಡಿಯಾದಲ್ಲಿ ಈ ಸೈದ್ಧಾಂತಿಕ ನಿಯಂತ್ರಣದಿಂದ ಆಗುವ ಪ್ರಮುಖ ಪರಿಣಾಮವೇನು?
ಉತ್ತರ: ವಿಕಿಪೀಡಿಯಾದಲ್ಲಿ ನಿಷ್ಪಕ್ಷಪಾತ ಮಾಹಿತಿ ಸಿಗದೆ, ಸೈದ್ಧಾಂತಿಕ ಪೂರ್ವಾಗ್ರಹ ಪೀಡಿತ ಹಾಗೂ ಹಣದ ಪ್ರಭಾವದಿಂದ ತಿರುಚಲ್ಪಟ್ಟ ಸುಳ್ಳು ಮಾಹಿತಿಯೇ ಸತ್ಯವಾಗಿ ಬಿಂಬಿತವಾಗುತ್ತದೆ.