Windfall Tax: ತೈಲ ಕಂಪನಿಗಳ ಮೇಲೆ ವಿಂಡ್ ಫಾಲ್ ಟ್ಯಾಕ್ಸ್.. ಲಾಭ ಗ್ರಾಹಕನಿಗಿಲ್ಲ!
ತೈಲ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ವಿಂಡ್ ಫಾಲ್ ತೆರಿಗೆ ವಿಧಿಸಿದೆ. ದೇಶಿಯ ತೈಲ ಉತ್ಪಾದನೆಗೆ ಒತ್ತು ನೀಡಲು ಒಂದು ಕಡೆ ಇಳಿಕೆ ಗಿಫ್ಟ್ ನೀಡಿದ್ದರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ತಂತ್ರಗಾರಿಕೆಯನ್ನು ವಿಂಡ್ ಫಾಲ್ ತೆರಿಗೆ ಹೆಸರಿನಲ್ಲಿ ಸಾಧಿಸಿಕೊಂಡಿದೆ.
ನವದೆಹಲಿ; ಅಪರಿಮಿತ ಲಾಭಗಳಿಸಿಕೊಳ್ಳುತ್ತಿದ್ದ ತೈಲ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ವಿಂಡ್ ಫಾಲ್ ತೆರಿಗೆ ವಿಧಿಸಿದೆ. ದೇಶಿಯ ತೈಲ ಉತ್ಪಾದನೆಗೆ ಒತ್ತು ನೀಡಲು ಒಂದು ಕಡೆ ಇಳಿಕೆ ಗಿಫ್ಟ್ ನೀಡಿದ್ದರೆ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ತಂತ್ರಗಾರಿಕೆಯನ್ನು ವಿಂಡ್ ಫಾಲ್ ತೆರಿಗೆ ಹೆಸರಿನಲ್ಲಿ ಸಾಧಿಸಿಕೊಂಡಿದೆ.
ಕಚ್ಚಾ ತೈಲ, ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಇಂಧನ (ATF) ಮೇಲಿನ ವಿಂಡ್ ಫಾಲ್ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಪ್ರತಿ ಟನ್‌ಗೆ 17,750 ರೂ.ನಿಂದ 13,000 ರೂ.ಗೆ ಇಳಿಸಲಾಗಿದೆ. ಆದರೆ ಜೆಟ್ ಇಂಧನದ (ಏವಿಯೇಷನ್ ಟರ್ಬೈನ್ ಫ್ಯುಯಲ್, ಎಟಿಎಫ್) ಮೇಲಿನ ರಫ್ತು ತೆರಿಗೆಯನ್ನು ಸೊನ್ನೆಯಿಂದ ಲೀಟರ್‌ಗೆ 2 ರೂ.ಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಡೀಸೆಲ್ ರಫ್ತಿನ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 5 ರೂ.ನಿಂದ 7 ರೂ.ಗೆ ಹೆಚ್ಚಿಸಲಾಗಿದೆ. ಪೆಟ್ರೋಲ್ ರಫ್ತಿನ ಮೇಲಿನ ಅಬಕಾರಿ ಸುಂಕ ಸೊನ್ನೆಯಲ್ಲಿಯಲ್ಲಿಯೇ ಇದ್ದು ಯಾವ ಬದಲಾವಣೆ ಮಾಡಲಾಗಿಲ್ಲ.
ವಿಂಡ್ ಫಾಲ್ ಟ್ಯಾಕ್ಸ್ ಎಂದರೇನು? ಕಂಪನಿಯೊಂದು ತಾನು ಜವಾಬ್ದಾರನಲ್ಲದ ವಿಭಾಗದಿಂದ ಅಪರಿಮಿತ ಲಾಭ ಗಳಿಕೆ ಮಾಡಿಕೊಳ್ಳುತ್ತಿದ್ದರೆ ಅದರ ಮೇಲೆ ವಿಧಿಸುವ ತೆರಿಗೆಯನ್ನು ವಿಂಡ್ ಫಾಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಬರುತ್ತಿರುವ ಲಾಭವನ್ನೇ ವಿಂಡ್ ಫಾಲ್ ಲಾಭ ಎಂದು ಕರೆಯಲಾಗುತ್ತದೆ. ತೈಲ ದರ ಏಕಕಾಲದಲ್ಲಿ ಏರಿಕೆ ಕಂಡರೆ ತೈಲ ಕಂಪನಿಗಳ ಬೊಕ್ಕಸ ತುಂಬಿಕೊಳ್ಳುತ್ತದೆ. ಉದಾಹರಣೆಗೆ 100 ರೂ. ಲಾಭ ಈ ತಿಂಗಳು ಬರಬಹುದು ಎಂದು ನಿರೀಕ್ಷೆ ಮಾಡಿದ್ದ ಜಾಗದಲ್ಲಿ 150 ರೂ. ಲಾಭ ಬಂದಿರುತ್ತದೆ! ಈ ಹೆಚ್ಚುವರಿ ಲಾಭಕ್ಕೆ ತೆರಿಗೆ ವಿಧಿಸಲಾಗುತ್ತದೆ.ವಸರ್ಕಾರ ಇಂಥ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಸಾಮಾನ್ಯ ದರಕ್ಕಿಂತ ಹೆಚ್ಚಿನ ಒನ್ ಟೈಮ್ ಟ್ಯಾಕ್ಸ್ ವಿಧಿಸುತ್ತದೆ.
ಭಾರತ ಸರ್ಕಾರ ಜುಲೈ 1 ರಂದು ಕೆಲ ಕಂಪನಿಗಳ ಮೇಲೆ ವಿಂಡ್‌ಫಾಲ್ ತೆರಿಗೆ ವಿಧಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತೈಲ ಕಂಪನಿಗಳು ಸಹಜವಾಗಿಯೇ ಹೆಚ್ಚಿನ ಲಾಭಗಳಿಕೆ ಮಾಡಿಕೊಳ್ಳುತ್ತಿದ್ದವು. ಅಂತರಾಷ್ಟ್ರೀಯ ತೈಲ ದರ ಇಳಿಕೆಯ ಹಾದಿಯಲ್ಲಿರುವುದರಿಂದ ಈಗ ಅಷ್ಟೊಂದು ಲಾಭ ಸಿಗುತ್ತಿಲ್ಲ.
ಜುಲೈ 1 ರಂದು, ಪೆಟ್ರೋಲ್ ಮತ್ತು ಎಟಿಎಫ್‌ಗೆ ಪ್ರತಿ ಲೀಟರ್‌ಗೆ 6 ರೂ. (ಬ್ಯಾರೆಲ್‌ಗೆ 12ಡಾಲರ್) ರಫ್ತು ಸುಂಕವನ್ನು ವಿಧಿಸಲಾಗಿದ್ದರೆ ಮತ್ತು ಡೀಸೆಲ್ ರಫ್ತಿನ ಮೇಲೆ 13 ರೂ. ತೆರಿಗೆಯನ್ನು (ಬ್ಯಾರೆಲ್‌ಗೆ 26 ಡಾಲರ್) ವಿಧಿಸಲಾಯಿತು. ದೇಶೀಯ ಕಚ್ಚಾ ಉತ್ಪಾದನೆಯ ಮೇಲೆ ಪ್ರತಿ ಟನ್‌ಗೆ 23,250 ರೂ. ವಿಂಡ್‌ಫಾಲ್ ಲಾಭ ತೆರಿಗೆಯನ್ನು (ಪ್ರತಿ ಬ್ಯಾರೆಲ್‌ಗೆ 40 ಡಾಲರ್) ವಿಧಿಸಲಾಯಿತು.
ದೇಶಿಯ ಆದ್ಯತೆ ಪೂರೈಕೆಮಾಡುವುದಕ್ಕಿಂತ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕಾರಣಕ್ಕೆ ವಿಂಡ್ ಫಾಲ್ ತೆರಿಗೆ ಹೆಜ್ಜೆ ಇಟ್ಟಿದ್ದೇವೆ ಎಂದು ಸರ್ಕಾರ ಹೇಳಿತ್ತು. ಪೆಟ್ರೋಲ್ ಮತ್ತು ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಮೇಲಿನ ರಫ್ತು ಸುಂಕಗಳನ್ನು ಸರ್ಕಾರ ತೆಗೆದು ಹಾಕಿತ್ತು.
ಕೇಂದ್ರ ಸರ್ಕಾರವು ಒಂದು ತಿಂಗಳ ಹಿಂದೆ ಗ್ಯಾಸೋಲಿನ್ ರಫ್ತುಗಳ ಮೇಲಿನ ಲೆವಿಯನ್ನು ತೆಗೆದುಹಾಕಿತ್ತು. ಇತರೆ ಇಂಧನಗಳ ಮೇಲೆ ವಿಂಡ್‌ಫಾಲ್ ತೆರಿಗೆ ವಿಧಿಸಿ ಮೂರು ವಾರಗಳ ನಂತರ ಹಿಂದಕ್ಕೆ ಪಡೆದುಕೊಂಡಿತು.
ಗುರುವಾರ ಸಂಜೆ ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಹೊಸ ದರಗಳು ಆಗಸ್ಟ್ 19 ಶುಕ್ರವಾದಿಂದ ಅನ್ವಯವಾಗುತ್ತವೆ. ಜಾಗತಿಕ ಕಚ್ಚಾ ತೈಲ ಮತ್ತು ಉತ್ಪನ್ನ ಬೆಲೆಗಳಿಂದಾಗಿ ದೇಶೀಯ ಕಚ್ಚಾ ಉತ್ಪಾದಕರು ಮತ್ತು ರಿಫೈನರ್‌ಗಳು ಮಾಡಿದ ವಿಂಡ್‌ಫಾಲ್ ಗಳಿಕೆಯನ್ನು ಗಮನದಲ್ಲಿಟ್ಟುಕೊಂಡು ಲೆವಿ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರ ವಿಧಿಸಿರುವ ವಿಂಡ್ ಫಾಲ್ ತೆರಿಗೆ ಲಾಭ ಆರಂಭದಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅಂಥ ವ್ಯತ್ಯಾಸವೇನೂ ಆಗಿಲ್ಲ.
ಮಧುಸೂದನ ಹೆಗಡೆ