ಹೋಲ್​ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್​ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ

WPI based inflation down to minus 0.13% in June 2025: ಸಗಟು ಮಾರಾಟ ದರ ಹಣದುಬ್ಬರ ಜೂನ್​​ನಲ್ಲಿ ಮೈನಸ್ 0.13 ಪ್ರತಿಶತಕ್ಕೆ ಇಳಿಕೆ ಕಂಡಿದೆ. ಇದು ಕಳೆದ 20 ತಿಂಗಳಲ್ಲೇ ಡಬ್ಲ್ಯುಪಿಐ ಆಧಾರಿತ ಹಣದುಬ್ಬರದ ಕನಿಷ್ಠ ಮಟ್ಟ ಎನಿಸಿದೆ. ರೀಟೇಲ್ ಹಣದುಬ್ಬರವೂ ಜೂನ್ ತಿಂಗಳಲ್ಲಿ ಮತ್ತಷ್ಟು ಇಳಿಯಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ಹೋಲ್​ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್​ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ
ಹಣದುಬ್ಬರ

Updated on: Jul 14, 2025 | 2:54 PM

ನವದೆಹಲಿ, ಜುಲೈ 14: ಭಾರತದ ಸಗಟು ದರ ಹಣದುಬ್ಬರ ಸೂಚ್ಯಂಕ ಜೂನ್ ತಿಂಗಳಲ್ಲಿ ಮೈನಸ್ ಶೇ. 0.13ಕ್ಕೆ ಇಳಿದಿದೆ. ಇದು 20 ತಿಂಗಳಲ್ಲೇ ಕನಿಷ್ಠ ಸಗಟು ದರ ಹಣದುಬ್ಬರ (WPI inflation) ಮಟ್ಟ ಎನಿಸಿದೆ. ಹಿಂದಿನ ತಿಂಗಳಾದ ಮೇ ಹಾಗೂ ಕಳೆದ ವರ್ಷದ ಜೂನ್ ತಿಂಗಳಿಗಿಂತ ಡಬ್ಲ್ಯೂಪಿಐ ದರ ಗಣನೀಯವಾಗಿ ತಗ್ಗಿದೆ. 2025ರ ಮೇ ತಿಂಗಳಲ್ಲಿ ಈ ಹೋಲ್​ಸೇಲ್ ಹಣದುಬ್ಬರ ಶೇ. 0.39ರಷ್ಟಿತ್ತು. 2024ರ ಜೂನ್ ತಿಂಗಳಲ್ಲಿ ಇದು ಶೇ. 3.43ರಷ್ಟಿತ್ತು. ಆಹಾರವಸ್ತು ಮತ್ತು ಇಂಧನ ದರಗಳು ಜೂನ್ ತಿಂಗಳಲ್ಲಿ ಕಡಿಮೆಗೊಂಡಿದ್ದು ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ದರದ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ಆಹಾವಸ್ತು, ಇಂಧನ, ಖನಿಜ ತೈಲ, ಕಚ್ಛಾ ಪೆಟ್ರೋಲಿಯಂ ಮತ್ತ ನೈಸರ್ಗಿಕ ಅನಿಲಗಳ ಬೆಲೆಗಳು ಇಳಿಯುವುದರ ಜೊತೆಗೆ, ಮೂಲ ಲೋಹಗಳು ಸೇರಿದಂತೆ ಪ್ರಮುಖ ಉತ್ಪನ್ನ ತಯಾರಿಕೆ ವೆಚ್ಚವೂ ಕಡಿಮೆ ಆಗಿರುವುದು ಸಗಟು ಮಾರಾಟ ಬೆಲೆ ತಗ್ಗಲು ಸಹಾಯಕವಾಗಿದೆ.

ಇದನ್ನೂ ಓದಿ: ಭಾರತದಲ್ಲಿಯಂಥ ವೇಗದ ಪೇಮೆಂಟ್ ಸಿಸ್ಟಂ ಬೇರೆಲ್ಲೂ ಇಲ್ಲ ಎಂದ ಐಎಂಎಫ್; ಅಮೆರಿಕದಕ್ಕಿಂತ ಹೇಗೆ ಭಿನ್ನ? ಯುಪಿಐ ವಿಶೇಷತೆ ಏನು?

ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಹಾರವಸ್ತುಗಳ ಬೆಲೆ ಜೂನ್ ತಿಂಗಳಲ್ಲಿ ಶೇ. 3.75ರಷ್ಟು ಇಳಿದಿದೆ. ಮೇ ತಿಂಗಳಲ್ಲಿ ಇವುಗಳ ಹೋಲ್​ಸೇಲ್ ಬೆಲೆ ಶೇ. 1.56ರಷ್ಟು ಇಳಿದಿತ್ತು. ಅದು ಜೂನ್ ತಿಂಗಳಲ್ಲೂ ಮುಂದುವರಿದಿದೆ. ಆಹಾರವಸ್ತುಗಳ ಪೈಕಿ ತರಕಾರಿಗಳ ಹೋಲ್​ಸೇಲ್ ಬೆಲೆ ಶೇ. 22.65ರಷ್ಟು ಕಡಿಮೆಗೊಂಡಿತ್ತು.

ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ

ಹೋಲ್​ಸೇಲ್ ಬೆಲೆ ಇಳಿದರೆ ಸಹಜವಾಗಿ ರೀಟೇಲ್ ಬೆಲೆಯೂ ಇಳಿಯುತ್ತದೆ. ಜೂನ್ ತಿಂಗಳಲ್ಲಿ ರೀಟೇಲ್ ಹಣದುಬ್ಬರವು ಆರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಬಹುದು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇ ತಿಂಗಳಲ್ಲಿ ಶೇ. 2.82ರಷ್ಟಿದ್ದ ರೀಟೇಲ್ ಇನ್​ಫ್ಲೇಶನ್ ಜೂನ್ ತಿಂಗಳಲ್ಲಿ ಶೇ. 2.33ಕ್ಕೆ ಇಳಿಯಬಹುದು. ಇದು ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು.

ಇದನ್ನೂ ಓದಿ: ಪ್ರಿಯಾ ನಾಯರ್ ಸಿಇಒ ಆದ ಬಳಿಕ ಹಿಂದೂಸ್ತಾನ್ ಯುನಿಲಿವರ್ ಷೇರುಬೆಲೆ ಭರ್ಜರಿ ಹೆಚ್ಚಳ; ಏನು ಕಾರಣ?

ಇದೇನಾದರೂ ನಿಜವೇ ಆದಲ್ಲಿ ಕಳೆದ ಆರು ವರ್ಷದಲ್ಲೇ ರೀಟೇಲ್ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ಜಾರಬಹುದು. 2019ರ ಜನವರಿ ತಿಂಗಳಲ್ಲಿ ಹಣದುಬ್ಬರ ಶೇ. 1.97 ಇತ್ತು. ಇವತ್ತು ಸಂಜೆ ಸರ್ಕಾರದಿಂದ ಅಧಿಕೃತ ರೀಟೇಲ್ ಹಣದುಬ್ಬರ ದತ್ತಾಂಶ ಪ್ರಕಟವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Mon, 14 July 25