ನವದೆಹಲಿ, ನವೆಂಬರ್ 21: ಹೊಸ ಪ್ರಯೋಗಗಳಿಂದ ಸದಾ ಸುದ್ದಿಯಲ್ಲಿರುವ ಜೊಮಾಟೊ ಸಂಸ್ಥೆಗೆ ಈಗ ಹೊಸ ಸ್ಟ್ಯಾಫ್ ಚೀಫ್ ಬೇಕಾಗಿದೆಯಂತೆ. ಜೊಮಾಟೋ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರೇ ಖುದ್ದಾಗಿ ಚೀಫ್ ಅಫ್ ಸ್ಟ್ಯಾಫ್ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಆದರೆ, ಈ ಹುದ್ದೆ ಪಡೆಯಲು ಅಭ್ಯರ್ಥಿಗಳಿಗೆ ಹಾಕಲಾಗಿರುವ ಕೆಲ ಮಾನದಂಡಗಳು ನಿಜಕ್ಕೂ ಕುತೂಹಲ ಮೂಡಿಸುತ್ತವೆ. ಚೀಫ್ ಆಫ್ ಸ್ಟ್ಯಾಫ್ ಸ್ಥಾನ ಇರುವುದು ಒಂದೇ ಒಂದು ಮಾತ್ರ. ಒಂದು ವರ್ಷ ಸಂಬಳ ಇಲ್ಲದೇ ಕೆಲಸ ಮಾಡಬೇಕು ಎಂಬುದು ಷರತ್ತುಗಳಲ್ಲಿ ಒಂದು. ಅದಕ್ಕಿಂತ ಮುಖ್ಯವಾದ ಇನ್ನೂ ಕೆಲ ಷರತ್ತುಗಳಿವೆ….
ಇಲ್ಲಿ ಅಭ್ಯರ್ಥಿಯು 20 ಲಕ್ಷ ರೂ ಹಣವನ್ನು ಜೊಮಾಟೊದ ಫೀಡಿಂಗ್ ಇಂಡಿಯಾ ಎಂಬ ಚ್ಯಾರಿಟಿಗೆ ಡೊನೇಶನ್ ರೂಪದಲ್ಲಿ ಕೊಡಬೇಕು. ಇದಕ್ಕೆ ಪ್ರತಿಯಾಗಿ, ಅಭ್ಯರ್ಥಿ ತಿಳಿಸಿದ ಯಾವುದಾದರೂ ಚಾರಿಟಿಗೆ ಜೊಮಾಟೊ 50 ಲಕ್ಷ ರೂ ಹಣವನ್ನು ನೀಡುತ್ತದೆ.
ಇದನ್ನೂ ಓದಿ: ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆ ಆರೋಪ ದಾಖಲು; ಗೌತಮ್, ಸಾಗರ್ ಅದಾನಿ ವಿರುದ್ಧ ಅರೆಸ್ಟ್ ವಾರಂಟ್
ಒಂದು ವರ್ಷದ ಬಳಿಕ, ಅಂದರೆ ಎರಡನೇ ವರ್ಷದಿಂದ ಅಭ್ಯರ್ಥಿಗೆ ಸಂಬಳ ಸಿಗತೊಡಗುತ್ತದೆ. ಸಂಬಳ ಕನಿಷ್ಠ ವರ್ಷಕ್ಕೆ 50 ಲಕ್ಷ ರೂನಷ್ಟಾದರೂ ಇರುತ್ತದೆ ಎಂದು ಹೇಳಲಾಗಿದೆ.
ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸ್ಕೂಲ್ನಲ್ಲಿ ಎರಡು ವರ್ಷದ ಡಿಗ್ರಿ ಮಾಡುವಾಗ ಏನು ಕಲಿಯುತ್ತೀರೀ, ಅದಕ್ಕೆ ಹತ್ತು ಪಟ್ಟು ಹೆಚ್ಚನ್ನು ಇಲ್ಲಿ ಕಲಿಯಲು ಅವಕಾಶ ಸಿಗುತ್ತದೆ. ನನ್ನೊಂದಿಗೆ ಹಾಗೂ ಕನ್ಸೂಮರ್ ಟೆಕ್ ಕ್ಷೇತ್ರದ ಅತ್ಯಂತ ಜಾಣ ಮಂದಿ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ.
ಇಲ್ಲಿ ಕೆಲಸಕ್ಕೆ ಸೇರಲು ಬಯಸುವವರು ಇದನ್ನು ಸಂಬಳದ ದೃಷ್ಟಿಯಲ್ಲಿ ನೋಡುವ ಬದಲು ಕಲಿಕೆಯ ಅವಕಾಶವಾಗಿ ಕಾಣಬೇಕು. ಇದು ಒಂದು ರೀತಿಯಲ್ಲಿ ಫಾಸ್ಟ್ ಟ್ರ್ಯಾಕ್ ಲರ್ನಿಂಗ್ ಪ್ರೋಗ್ರಾಮ್ ಇದ್ದಂತೆ. ವೈಯಕ್ತಿಕವಾಗಿ ಮತ್ತು ವೃತ್ತಿಪರರಾಗಿ ನೀವು ಕಲಿಯುತ್ತೀರಿ ಎಂದು ದೀಪಿಂದರ್ ಗೋಯಲ್ ಅವರು ತಮ್ಮ ಎಕ್ಸ್ನಲ್ಲಿ ಚೀಫ್ ಆಫ್ ಸ್ಟ್ಯಾಫ್ನ ಜಾಬ್ ಪ್ರೊಫೈಲ್ ವಿವರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 24 ಗಂಟೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರಿಂದ ವಿಮಾನ ಪ್ರಯಾಣ; ಭಾರತದಲ್ಲಿ ಹೊಸ ದಾಖಲೆ
ಜೊಮಾಟೊ ಸಿಇಒ ದೀಪಿಂದರ್ ಗೋಯಲ್, ಸಿಒಎಸ್ ಹುದ್ದೆಗೆ ರೆಸ್ಯೂಮ್ ಬಿಲ್ಡರ್ಗಳು ಬೇಡ. ಕಲಿಯುವವರು ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. d@zomato.com ಎಂಬ ಐಡಿಗೆ 200 ಪದಗಳು ಮೀರದಂತೆ ಒಂದು ಕವರ್ ಲೆಟರ್ ಕಳುಹಿಸುವಂತೆ ತಿಳಿಸಲಾಗಿದೆ. ಹಾಗೆಯೇ, ಯಾವುದೇ ರೆಸ್ಯೂಮೆ (ಬಯೋಡಾಟಾ) ಲಗತ್ತಿಸಬಾರದು ಎಂದಿದೆ. ಕವರ್ ಲೆಟರ್ನಲ್ಲಿ 200 ಪದಗಳಲ್ಲಿ ಅಭ್ಯರ್ಥಿಗಳು ತಮ್ಮ ಬಗ್ಗೆ ಸಾಧ್ಯವಾದಷ್ಟನ್ನು ಹೇಳಿಕೊಳ್ಳಬಹುದು.
ಈ ಕೆಲಸಕ್ಕೆ ಎಷ್ಟು ಅರ್ಜಿ ಸಲ್ಲಿಕೆಯಾಗಿರಬಹುದು? ದೀಪಿಂದರ್ ಗೋಯಲ್ ನಿನ್ನೆ ಈ ಪೋಸ್ಟ್ ಹಾಕಿದ್ದರು. ಇವತ್ತು ಮಧ್ಯಾಹ್ನ ಅಪ್ಡೇಟ್ ಪೋಸ್ಟ್ ಹಾಕಿದ್ದು, ಅದರ ಪ್ರಕಾರ ಇಲ್ಲಿಯವರೆಗೆ 10,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿವೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ