ನವದೆಹಲಿ, ಫೆಬ್ರುವರಿ 12: ದೊಡ್ಡ ರೆಸ್ಟೋರೆಂಟ್ಗಳ ಹೆಸರಿನಲ್ಲಿ ಆರ್ಡರ್ ಬುಕ್ ಮಾಡಿ, ಬೇರೆ ಸ್ಥಳಗಳಿಂದ ಗ್ರಾಹಕರಿಗೆ ಆಹಾರ ಪೂರೈಸಿದ ಆರೋಪದ ಮೇಲೆ ಜೊಮಾಟೋ ವಿರುದ್ಧ ದೆಹಲಿಯ ಗ್ರಾಹಕರೊಬ್ಬರು ಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಈ ಸಂಬಂಧ ನ್ಯಾಯಾಲಯವು ಜೊಮಾಟೋಗೆ ಸಮನ್ಸ್ ನೋಟೀಸ್ (Court summons to Zomato) ಕಳುಹಿಸಿದೆ. ಸೌರವ್ ಮಲ್ (Saurav Mall) ಎಂಬ ಗುರುಗ್ರಾಮ್ ನಿವಾಸಿ ಇತ್ತೀಚೆಗೆ ಕೋರ್ಟ್ನಲ್ಲಿ ಜೊಮಾಟೋ ವಿರುದ್ಧ ದೂರು ನೀಡಿದ್ದರು. ಮೊನ್ನೆಮೊನ್ನೆ ಸಿವಿಲ್ ಜಡ್ಜ್ ಉಮೇಶ್ ಕುಮಾರ್ ಈ ಅರ್ಜಿ ವಿಚಾರಣೆ ನಡೆಸಿ ಇದೀಗ ಜೊಮಾಟೊಗೆ ಸಮನ್ಸ್ ಹೊರಡಿಸಿದ್ದಾರೆ. ಮಾರ್ಚ್ 20ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.
ನವದೆಹಲಿಯಲ್ಲಿ ಜೊಮಾಟೋ ‘ದಿಲ್ಲಿ ಕೇ ಲೆಜೆಂಟ್ಸ್’ ಎಂಬ ಸಬ್ ಕೆಟಗರಿ ಹೊಂದಿದ್ದು, ಅದರ ಅಡಿಯಲ್ಲಿ ಖ್ಯಾತ ರೆಸ್ಟೋರೆಂಟ್ಗಳಿಂದ ತಾಜಾ ಆಹಾರ ಬುಕ್ ಮಾಡುವ ಅವಕಾಶ ನೀಡಿದೆ. ಆದರೆ, ಇಲ್ಲಿ ಆರ್ಡರ್ ಬುಕ್ ಮಾಡಿದರೆ ಆಹಾರವು ಈ ಹೋಟೆಲ್ಗಳಿಂದ ಬರುವುದಿಲ್ಲ. ಬೇರೆ ಕಡೆಯಿಂದ ಫುಡ್ ಪಿಕಪ್ ಆಗಿ ಡೆಲಿವರಿ ಆಗುತ್ತದೆ ಎಂಬುದು ದೂರುದಾರರ ಆರೋಪ.
ಇದನ್ನೂ ಓದಿ: ಚೀನಾ ಕಂಪನಿಗಳನ್ನು ಹೀಗೆ ಗುರಿ ಮಾಡಿದರೆ ಸರಬರಾಜುದಾರರು ಭಾರತಕ್ಕೆ ಬರಲು ಭಯಬೀಳಬಹುದು: ಶಿಯೋಮಿ ಕಳವಳ
ದೆಹಲಿಯ ಜಾಮಾ ಮಸೀದಿ, ಕೈಲಾಶ್ ಕಾಲೊನಿ ಮತ್ತು ಜಂಗಪುರ ಎಂಬ ಮೂರು ಸ್ಥಳಗಳಲ್ಲಿ ಮೂರು ಬೇರೆ ಬೇರೆ ಹೋಟೆಲ್ಗಳಿಂದ ಜೊಮಾಟೋದಲ್ಲಿ ಸೌರವ್ ಮಲ್ ಎಂಬುವವರು ಅಕ್ಟೋಬರ್ 24ರಂದು ಆಹಾರ ಬುಕ್ ಮಾಡಿದ್ದಾರೆ. ಬಳಿಕ ಡೆಲಿವರಿ ಪಾರ್ಟ್ನರ್ ಲೊಕೇಶನ್ ಅನ್ನು ಅವರು ಟ್ರ್ಯಾಕ್ ಮಾಡಿದ್ದಾರೆ. ಬುಕ್ ಮಾಡಲಾದ ರೆಸ್ಟೋರೆಂಟ್ ಬದಲು ಅಪರಿಚಿತ ಸ್ಥಳವೊಂದರಿಂದ ಆಹಾರ ಪಿಕಪ್ ಆಗಿದೆ ಎಂದು ಗ್ರಾಹಕ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
‘ಆ ರೆಸ್ಟೋರೆಂಟ್ನ ಯಾವ ಶಾಖೆಯೂ ಇಲ್ಲದ ಸ್ಥಳದಿಂದ ಆಹಾರ ಹೇಗೆ ತರಲಾಯಿತು? ರೆಸ್ಟೋರೆಂಟ್ನ ಒರಿಜಿನಲ್ ಪ್ಯಾಕೇಜಿಂಗ್ ಯಾಕೆ ಇರಲಿಲ್ಲ? ರೆಸ್ಟೋರೆಂಟ್ ಪಾರ್ಟ್ನರ್ನಿಂದಲೇ ಆಹಾರ ತಯಾರಾಗಿದೆ ಎನ್ನುವುದಕ್ಕೆ ಏನು ಖಾತ್ರಿ? ಆಹಾರ ಹೊಸದಾಗಿ ತಯಾರಾಗಿದೆ ಎನ್ನುವುದಕ್ಕೆ ಏನು ಖಾತ್ರಿ?’ ಎಂದು ಗ್ರಾಹಕ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ, ಮಾರಿಷಸ್ನಲ್ಲೂ ಭಾರತದ ಯುಪಿಐ, ರುಪೇ ಕಾರ್ಡ್ ಸೇವೆಗೆ ಚಾಲನೆ
ಅಷ್ಟೇ ಅಲ್ಲ, ದೆಹಲಿಯಲ್ಲಿರುವ ಪ್ರಖ್ಯಾತ ರೆಸ್ಟೋರೆಂಟ್ಗಳಿಂದ ಗುರುಗ್ರಾಮ್, ನೋಯ್ಡಾಗಳಿಗೆ 30 ನಿಮಿಷದಲ್ಲಿ ಆಹಾರ ತಲುಪಿಸಲು ಹೇಗೆ ಸಾಧ್ಯ ಎಂದೂ ಅರ್ಜಿದಾರರು ಕೇಳಿದ್ದಾರೆ.
ಜೊಮಾಟೋ ಸಂಸ್ಥೆ ತನ್ನ ಗ್ರಾಹಕರಿಗೆ ಸುಳ್ಳು ಹೇಳಿ ವಂಚಿಸುತ್ತಿದೆ ಎಂದು ಆರೋಪಿಸಿರುವ ಸೌರವ್ ಮಲ್, ಜೊಮಾಟೋದ ಎಲ್ಲಾ ಗ್ರಾಹಕರ ಪ್ರತಿನಿಧಿಯಾಗಿ ಈ ಮೊಕದ್ದಮೆ ಹೂಡಿರುವುದಾಗಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ