ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಐದಾರು ಮಂದಿ ದುಷ್ಕರ್ಮಿಗಳು ಯುವಕನನ್ನ ಚಾಕುವಿನಿಂದ ತಿವಿದು ಕೊಲೆ ಮಾಡಿದ ಘಟನೆ ಶ್ರೀರಾಂಪುರದ ಆರ್ಜೆ ನಗರದ 81 ಬಸ್ಸ್ಟಾಂಡ್ ಬಳಿ ನಡೆದಿದೆ. ದೀಪಾಂಜಲಿ ನಗರದ ನಿವಾಸಿ ಮಂಜುನಾಥ್ (25 ) ಮೃತ ದುರ್ದೈವಿ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋ ಮಂಜುನಾಥ್ ನೆನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶ್ರೀರಾಂಪುರಕ್ಕೆ ಬಂದಿದ್ದ. ಈ ನಡುವೆ ದುಷ್ಕರ್ಮಿಗಳು ಮಾತನಾಡಬೇಕೆಂದು ಮಂಜುನಾಥ್ನನ್ನ ಕರೆದೊಯ್ದು ಗಲಾಟೆ ಮಾಡಿದ್ದಾರೆ. ಹೀಗಿರುವಾಗ್ಲೇ ಹಿಂಬದಿಯಿಂದ ದುಷ್ಕರ್ಮಿಯೊಬ್ಬ ಮಂಜುನಾಥ್ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ತಿವಿದಿದ್ದಾನೆ.
ಕೂಡ್ಲೇ ಮಂಜುನಾಥ್ ಅಲ್ಲಿಂದ ಓಡಲು ಯತ್ನಿಸಿದ್ದು, ಮತ್ತೊಬ್ಬ ಲಾಂಗ್ನಿಂದ ತಲೆಗೆ ಹೊಡೆದಿದ್ದಾನೆ. ಇದ್ರಿಂದ ತೀವ್ರ ರಕ್ತಸ್ರಾವವಾದ ಹಿನ್ನಲೆ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಣಕಾಸಿನ ವಿಚಾರಕ್ಕೆ ಮಂಜುನಾಥ್ನನ್ನ ಶ್ರೀರಾಂಪುರ ಪ್ರಕಾಶ್ನಗರದ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನು ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.