ಬೆಂಗಳೂರು: ವಾಟರ್ ಟ್ಯಾಂಕರ್ ಹರಿದು 9 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
ವಾಟರ್ ಟ್ಯಾಂಕರ್ ಹರಿದು 9 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ HAL ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ನಡೆದಿದೆ. ಕುಂದಾಪುರದ ತೆಕ್ಕಟ್ಟೆಯಲ್ಲಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಯುವಕನ ಮೇಲೆ ಕ್ರೇನ್ ಹರಿದ ಪರಿಣಾಮ ಆತ ದಾರುಣವಾಗಿ ಅಸುನೀಗಿದ್ದಾನೆ. ಖಾಸಗಿ ಬಸ್ ಚಾಲಕನ ನಿರ್ಲಕ್ಷದಿಂದಾಗಿ ಘಟನೆ ನಡೆದಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು/ಉಡುಪಿ, ಅಕ್ಟೋಬರ್ 15: ವಾಟರ್ ಟ್ಯಾಂಕರ್ ಹರಿದ ಪರಿಣಾಮ 9 ವರ್ಷದ ಬಾಲಕಿ ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ HAL ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ ನಡೆದಿದೆ. ಅನುಶ್ರೀ ಸಾವನ್ನಪ್ಪಿದ ಬಾಲಕಿಯಾಗಿದ್ದು, ಬೆಳಗ್ಗೆ ಕಟ್ಟಡವೊಂದಕ್ಕೆ ವಾಟರ್ ಸಪ್ಲೈಗೆ ಟ್ಯಾಂಕರ್ ಬಂದಿತ್ತು. ಈ ವೇಳೆ ಆಟ ಆಡುತ್ತಿದ್ದ ಅನುಶ್ರೀಗೆ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ವಾಸವಿದ್ದ ಕಲಬುರಗಿ ಮೂಲದ ದಂಪತಿಯ ಮಗಳು ಅನುಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಜೀವನ್ ಭೀಮನಗರ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರೇನ್ ಹರಿದು ಯುವಕನ ದಾರುಣ ಸಾವು
ಕ್ರೇನ್ ಹರಿದ ಪರಿಣಾಮ ಯುವಕನ ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಮೃತ ಯುವಕನನ್ನು ಅಭಿಷೇಕ್ ಪೂಜಾರಿ ಎಂದು ಗರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯು ಟರ್ನ್ ತೆಗೆದುಕೊಳ್ಳಲು ಇರುವ ಜಾಗದಲ್ಲೇ ಖಾಸಗಿ ಬಸ್ ಚಾಲಕ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಿದ್ದ. ಈ ವೇಳೆ ಏಕಾ ಏಕಿ ಬಸ್ ಚಲಿಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಭಿಷೇಕ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಹಿಂದಿನಿಂದ ವೇಗವಾಗಿ ಬಂದ ಕ್ರೇನ್ ಇವರ ಮೇಲೆ ಹರಿದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅಭಿಷೇಕ್ರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಗೆ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ದೂರಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ತೆಯಾಯ್ತು ಡಿಜಿಟಲ್ ಐಟಿ ಅರೆಸ್ಟ್ ಕಚೇರಿ; ವಿದೇಶಿ ಪ್ರಜೆಗಳನ್ನೇ ಟಾರ್ಗೆಟ್ ಮಾಡಿ ಕರೆ, ಹಣ ವಸೂಲಿ
ಅಪರಿಚಿತ ಯುವತಿ ಶವ ಪತ್ತೆ
ಹುಬ್ಬಳ್ಳಿಯ ಚೆನ್ನಪೇಟೆ ಸೇತುವೆ ಬಳಿಯ ರಾಜಾಕಾಲುವೆಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಕೊಳಚೆ ನೀರಿನಲ್ಲಿ ಶವ ತೇಲುತ್ತಿರುವುದು ಗಮನಕ್ಕೆ ಬಂದಿದ್ದು, ಸೇತುವೆಯ ಮೇಲೆ ಯುವತಿಯ ಚಪ್ಪಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




