ಬೆಳಗಾವಿ, ಜು.10: ಅದು ಮೇ.30ರಂದು ಬೆಳಗ್ಗೆ 11.30 ರ ಸುಮಾರಿಗೆ ಬೆಳಗಾವಿ(Belagavi) ನಗರದ ಬಿಮ್ಸ್ ಆಸ್ಪತ್ರೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುವಾಗ ಕಾರು ಡಿಕ್ಕಿಯಾಗುತ್ತದೆ. ಸಂಚಾರ ದಟ್ಟಣೆ ನಡುವೆಯೂ ಸ್ಪೀಡಾಗಿ ಹೋಗುತ್ತಿದ್ದ ಕಾರಿಗೆ ಸಿಲುಕಿ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪುತ್ತಾನೆ. ಇನ್ನು ಸ್ಥಳೀಯರು ಕೂಡಲೇ ಅಲ್ಲೇ ಇದ್ದ ಆಸ್ಪತ್ರೆಗೆ ಆತನನ್ನ ಸಾಗಿಸುವ ಪ್ರಯತ್ನ ಮಾಡಿದರಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಬಂದು ಪರಿಶೀಲನೆ ಕೂಡ ನಡೆಸುತ್ತಾರೆ. ಇದಾದ ಬಳಿಕ ಮೃತನ ಹಿನ್ನೆಲೆ ತೆಗೆದಾಗ ಆತ ಯಾರು, ಎಲ್ಲಿ ಅವನು ಎಂದು ತಿಳಿಯುತ್ತಾರೆ.
ಇಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಹೆಸರು ವಿರೂಪಾಕ್ಷ ಹರ್ಲಾಪುರ(60), ಧಾರವಾಡದ ಸತ್ತೂರ ಗ್ರಾಮದ ನಿವಾಸಿ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಔಷಧಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಂದು ದಿನ ಕೆಲಸ ಮಾಡಿ ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಬೇಕು ಅಂದುಕೊಂಡಿದ್ದ ವಿರೂಪಾಕ್ಷಗೆ ಕಾರೊಂದು ಯಮನ ಸ್ವರೂಪದಲ್ಲಿ ಬಂದು ಜೀವವನ್ನೇ ತೆಗೆದುಕೊಂಡು ಹೋಗಿತ್ತು. ಇದು ಜೊತೆಗೆ ಕೆಲಸ ಮಾಡ್ತಿದ್ದ ಸಹದ್ಯೋಗಿಗಳಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಜೊತೆಗೆ ಖುಷಿ ಖುಷಿಯಾಗಿ ಕೆಲಸ ಮಾಡಿ ನಿವೃತ್ತಿ ಜೀವನವನ್ನ ನೆಮ್ಮದಿಯಾಗಿ ಕಳೆಯಬೇಕು ಎನ್ನುವ ಆಲೋಚನೆಯಲ್ಲಿದ್ದ ವಿರೂಪಾಕ್ಷ ಅವರ ಸಾವು, ಅಲ್ಲಿದ್ದ ಎಲ್ಲರಿಗೂ ಕಣ್ಣೀರು ತರಿಸುವಂತೆ ಮಾಡಿತ್ತು.
ಇದನ್ನೂ ಓದಿ:5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹತೆಯ ಶವ ಪತ್ತೆ: ಪತಿ ವಿರುದ್ಧ ಕೊಲೆ ಆರೋಪ
ಈ ಅಪಘಾತ ಅಂದ ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪೊಲೀಸರು, ಅಪಘಾತ ಮಾಡಿದ ಕಾರು ಯಾವುದು ಎನ್ನೋದನ್ನ ಪತ್ತೆ ಹೆಚ್ಚಲು ಮುಂದಾಗುತ್ತಾರೆ. ವಿರೂಪಾಕ್ಷ ಸಹೋದರ ನೀಡಿದ ದೂರಿನ ಮೇಲೆ ತನಿಖೆ ಶುರು ಮಾಡಿ, ಕಾರು ಪತ್ತೆಗೆ ಮುಂದಾದವರು ಚೆನ್ನಮ್ಮ ವೃತ್ತದಲ್ಲಿನ ಸಿಸಿಟಿವಿ ದೃಶ್ಯಗಳನ್ನ ಪರಿಶೀಲನೆ ಮಾಡುತ್ತಾರೆ. ಈ ವೇಳೆ ಅಪಘಾತ ಮಾಡಿ ಹೋಗುತ್ತಿದ್ದ ಸ್ವಿಪ್ಟ್ ಸಿಲ್ವರ್ ಕಾರು ಮುಂದಿನ ಭಾಗ ಡ್ಯಾಮೇಜ್ ಆಗಿದ್ದು, ಮತ್ತು ಸ್ಥಳೀಯರು ಕೊಟ್ಟ ಮಾಹಿತಿ ಮೇರೆಗೆ ಅದರ ನಂಬರ್ ಪಡೆದು ಕೂಡಲೇ ಯಾರು ಮಾಲೀಕರು ಎನ್ನೋದನ್ನ ಪತ್ತೆ ಹಚ್ಚುವ ಕೆಲಸ ಮಾಡುತ್ತಾರೆ. ಇತ್ತ ಸಿಸಿಟವಿ ದೃಶ್ಯ ನೋಡುವ ಸಮಯದಲ್ಲಿ ಒಂದು ಗಂಟೆಯ ಹಿಂದೆ ಯಾವೆಲ್ಲ ವಾಹನ ಓಡಾಡಿದೆ ಎಂದು ಕೂಡ ಪರಿಶೀಲನೆ ಮಾಡಿದ್ದಾರೆ. ಆಗ ಅದೊಂದು ವಿಚಾರ ಸಿಸಿಟವಿ ದೃಶ್ಯದಿಂದ ಬೆಳಕಿಗೆ ಬಂದು ಸಂಶಯಗೊಂಡು ಇನ್ನಷ್ಟು ತನಿಖೆ ಚುರುಕು ಮಾಡುತ್ತಾರೆ.
ಹೌದು, ಇಲ್ಲಿ ಸಿಸಿಟಿವಿ ದೃಶ್ಯ ಪರಿಶೀಲನೆ ಸಂದರ್ಭದಲ್ಲಿ ಸ್ವಿಪ್ಟ್ ಕಾರು, ಒಂದು ಗಂಟೆಯಲ್ಲಿ ಎರಡ್ಮೂರು ಬಾರಿ ಒಂದೇ ರಸ್ತೆಯಲ್ಲಿ ಓಡಾಟ ನಡೆಸಿದ್ದು ಕಂಡು ಬರುತ್ತದೆ. ಇದರಿಂದ ಸಂಶಯ ಬಂದು ಅಪಘಾತ ನಡೆದ ಐದು ಗಂಟೆಗಳ ಮೊದಲು ಅಂದರೆ ಬೆಳಗ್ಗೆ ಆರು ಗಂಟೆಯಿಂದ ಸಿಸಿಟಿವಿ ದೃಶ್ಯವನ್ನ ಪರಿಶೀಲನೆ ಮಾಡುತ್ತಾರೆ. ಆಗ ಬೆಳಗ್ಗೆ ಏಳು ಗಂಟೆಯಿಂದಲೇ ವಾಹನ ಬಿಮ್ಸ್ ರಸ್ತೆ ಹಾಗೂ ಚೆನ್ನಮ್ಮ ವೃತ್ತದಲ್ಲಿ ರೌಂಡ್ಸ್ ಹಾಕುತ್ತಿರುವುದು ಕಂಡು ಬರುತ್ತದೆ. ಇದರಿಂದ ಸಂಶಯಗೊಂಡ ಪೊಲೀಸರು ಕೂಡಲೇ ಕಾರು ಚಾಲಕ ಶಾಸ್ತ್ರಿ ನಗರದ ನಿವಾಸಿ ಮಹೇಶ್ ಸುಂಕದ್ಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಚಾಲಕನನ್ನ ತಂದು ವಿಚಾರಿಸುತ್ತಿದ್ದಂತೆ ಮಹೇಶ್ ಇದು ಅಪಘಾತವಲ್ಲ ಬದಲಿಗೆ ಪೂರ್ವ ನಿಯೋಜಿತ ಪ್ಲ್ಯಾನ್ ಎಂದು ಒಪ್ಪಿಕೊಳ್ಳುತ್ತಾನೆ.
ಇದನ್ನೂ ಓದಿ:ಹುಬ್ಬಳ್ಳಿ ನೇಹಾ ಕೊಲೆ: ಚಾರ್ಜ್ ಶೀಟ್ನಲ್ಲಿ ಲವ್ ಜಿಹಾದ್ ಉಲ್ಲೇಖವಿಲ್ಲ, ಮದುವೆಗೆ ನಿರಾಕರಿಸಿದ್ದಕ್ಕೆ ಹತ್ಯೆ
ಕಾರು ಚಾಲಕ ಉದ್ದೇಶ ಪೂರ್ವಕವಾಗಿ ಕಾರು ಗುದ್ದಿ ಸಾಯಿಸಲಾಗಿದೆ ಎಂದು ಹೇಳುತ್ತಾನೆ. ಆತನೊಂದಿಗೆ ಕೆಲವರು ಕೂಡ ಕಾರಿನಲ್ಲಿದ್ರೂ ಮತ್ತು ತಾನೂ ಬಾಡಿಗೆ ಬಂದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾನೆ. ಯಾವಾಗ ಇದು ಅಪಘಾತ ಅಲ್ಲ, ಕೊಲೆ ಎನ್ನುವ ವಿಚಾರ ಸಂಚಾರಿ ಠಾಣೆ ಪೊಲೀಸರಿಗೆ ಗೊತ್ತಾಗುತ್ತದೆ. ಕೂಡಲೇ ಅಲರ್ಟ್ ಆದ ಪೊಲೀಸರು, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರ ಗಮನಕ್ಕೆ ತರುತ್ತಾರೆ. ಇತ್ತ ಘಟನೆ ನಡೆದ ವ್ಯಾಪ್ತಿಗೆ ಬರುವ ಎಪಿಎಂಸಿ ಪೊಲೀಸ್ ಠಾಣೆಗೆ ಕೇಸ್ ಹಸ್ತಾಂತರ ಮಾಡುತ್ತಾರೆ. ಅಪಘಾತ ಪ್ರಕರಣ ತೆಗೆದು ಕೊಲೆ ಕೇಸ್ ಎಂದು ಸಂಚಾರಿ ಠಾಣೆ ಸಿಬ್ಬಂದಿ ಎಪಿಎಂಸಿಯಲ್ಲಿ ದೂರು ಕೊಡುತ್ತಾರೆ. ಅದನ್ನ ದಾಖಲಿಸಿಕೊಂಡು ಎಪಿಎಂಸಿ ಪೊಲೀಸರು ತನಿಖೆಗಿಳಿಯುತ್ತಾರೆ.
ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು, ಕಾರು ಚಾಲಕನನ್ನ ಕರೆದುಕೊಂಡು ಬಂದು ಯಾರು ಬಾಡಿಗೆ ಪಡೆದಿದ್ದರು ಎನ್ನುವ ಮಾಹಿತಿ ಪಡೆಯುತ್ತಾರೆ. ಊರು ಬಿಟ್ಟವರನ್ನ ಒಂದು ತಂಡ ಮಾಡಿಕೊಂಡು ಹುಡುಕಾಟ ನಡೆಸಿ ಕೆಲ ದಿನಗಳ ಹಿಂದೆ ಅವರನ್ನ ಬಂಧಿಸಿ ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸುತ್ತಾರೆ. ಆರೋಪಿ ಪ್ರಕಾಶ್ ರಾಠೋಡ್ಗೆ ವಿಚಾರಣೆ ನಡೆಸುತ್ತಿದ್ದಂತೆ ಮೂರು ಲಕ್ಷ ರೂಪಾಯಿಗೆ ವಿರೂಪಾಕ್ಷ ಕೊಲೆ ಮಾಡಲು ಬಸವರಾಜ್ ಎಂಬುವವರು ನಮಗೆ ಸುಫಾರಿ ಕೊಟ್ಟಿದ್ದರು ಎಂದು ಹೇಳುತ್ತಾರೆ. ಇದರಿಂದ ಮತ್ತೆ ಕನ್ಪ್ಯೂಸ್ ಆದ ಪೊಲೀಸರು, ಈ ಬಸವರಾಜ ಬಗವತಿ ಯಾರು ಎಂದು ಮಾಹಿತಿ ಪಡೆದು, ಆತ ಎಲ್ಲಿರ್ತಾನೆ ಎನ್ನವುದನ್ನು ತಿಳಿದುಕೊಂಡು ಮಾಳಮಾರುತಿ ಎಕ್ಸ್ಟೆನ್ಸ್ ಏರಿಯಾದಲ್ಲಿದ್ದ ಮನೆಗೆ ಹೋಗಿ ಆತನನ್ನ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಾರೆ.
ಅಷ್ಟಕ್ಕೂ ಈ ಬವರಾಜ್ ಮತ್ತು ಕೊಲೆಯಾದ ವಿರೂಪಾಕ್ಷ, ಹತ್ತಿರದ ಸಂಬಂಧಿಕರಲ್ಲ. ಬದಲಾಗಿ ಬಸವರಾಜ್ನ ಹೆಂಡತಿಯ ಕಡೆಯಿಂದ ಸಂಬಂಧಿಯಾಗಿರುತ್ತಾನೆ. ಆದರೆ, ಕೆಲ ದಿನಗಳಿಂದ ವಿರೂಪಾಕ್ಷ ಕುಟುಂಬದ ಜೊತೆಗೆ ಗುರುತಿಸಿಕೊಂಡು ಅವರ ಮನೆಗೆ ಹೋಗುವುದು ಬರುವುದು ಮಾಡುತ್ತಿರುತ್ತಾನೆ. ಹೆಚ್ಚಾಗಿ ವಿರೂಪಾಕ್ಷ ಪತ್ನಿ ಜೊತೆಗೆ ಒಡನಾಟವನ್ನ ಈ ಆರೋಪಿ ಹೊಂದಿರುತ್ತಾನೆ. ಇನ್ನೂ ಕೊಲೆಗೆ ಕಾರಣವೇನು ಎಂದು ವಿಚಾರಿಸಿದಾಗ ‘ವಿರೂಪಾಕ್ಷನ ಅಣ್ಣನ ಜೊತೆಗೆ ಆಗಗ ಜಗಳ ಆಡುತ್ತಿದ್ದ. ಇತ್ತ ತನ್ನ ಮೇಲೆಯೂ ಇತ್ತಿಚೀನ ದಿನಗಳಲ್ಲಿ ವಿರೂಪಾಕ್ಷ ಸಂಶಯ ಪಡಲಾರಂಭಿಸಿದ್ದ. ಇದರಿಂದ ಕುಟುಂಬಸ್ಥರಲ್ಲಿ ಮರ್ಯಾದೆ ಕಡಿಮೆಯಾಗಿತ್ತು. ಜೊತೆಗೆ ಆಸ್ತಿಗಾಗಿ ಕೂಡ ಜಗಳವಾಡ್ತಿದ್ದ ಈತನನ್ನ ಕೊಲೆ ಮಾಡಿದ್ರೇ ಆಸ್ತಿಯಲ್ಲಿ ಒಂದು ಭಾಗಕ್ಕೆ ಮುಂದೆ ಅವರ ಅಣ್ಣನ ಬಳಿ ಡಿಮ್ಯಾಂಡ್ ಮಾಡಬಹುದು ಅಂದುಕೊಂಡು ಕೊಲೆಗೆ ಸ್ಕೇಚ್ ಹಾಕಿದ್ದಾಗಿ ಹೇಳುತ್ತಾನೆ.
ಇದನ್ನೂ ಓದಿ:ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಹತ್ಯೆ; ಕೊಲೆಗೈದು ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ದುಷ್ಕರ್ಮಿಗಳು
ಅಷ್ಟೇ ಅಲ್ಲದೇ ಈ ಹಿಂದೆಯೂ ಎರಡು ಬಾರಿ ಇದೇ ಮಾದರಿಯಲ್ಲಿ ಅಪಘಾತ ಮಾಡಿ ಕೊಲೆ ಮಾಡಲು ಕೂಡ ಪ್ರಯತ್ನ ಪಟ್ಟಿದ್ದು, ಆಗ ಅದೃಷ್ಟವಶಾತ್ ವಿರೂಪಾಕ್ಷ ಬದುಕಿದ್ದ ಎನ್ನುವುದನ್ನೂ ಕೂಡ ಬಾಯ್ಬಿಟ್ಟಿದ್ದಾನೆ. ವಿರೂಪಾಕ್ಷ ಮೇಲಿನ ಸೇಡು ಹಾಗೂ ಆಸ್ತಿಗಾಗಿ ಮೇ.30ರಂದು ಕೊಲೆಗೆ ಪ್ಲ್ಯಾನ್ ಮಾಡಲಾಗಿತ್ತು. ವಿರೂಪಾಕ್ಷ ನಿತ್ಯ ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಬಂದಿ ಹೋಗುತ್ತಿರುತ್ತಾನೆ. ಒಂದು ದಿನ ಮೊದಲು ಆತನ ಎಲ್ಲ ಚಲನವಲನ ಗಮನಿಸಿ ಮೇ.30ರಂದು ಆತನ ಕಥೆ ಮುಗಿಸಲು ಪ್ಲ್ಯಾನ್ ಮಾಡ್ತಾರೆ. ಅದರಂತೆ ಸುಫಾರಿ ಕೊಟ್ಟು ಅವರ ಜೊತೆಗೆ ಈತನೂ ಕೂಡ ಭಾಗಿಯಾಗಿ. ಆತ ಧಾರವಾಡದಿಂದ ಬಿಮ್ಸ್ ಆಸ್ಪತ್ರೆಗೆ ಬಂದು ಒಂದು ಗಂಟೆಗಳ ಕಾಲ ಕೆಲಸ ಮಾಡಿ ಬಳಿಕ ಟೀ ಕುಡಿಯಲು ಹೊರ ಬಂದಿದ್ದಾನೆ. ನಿತ್ಯ ಇದೇ ರೀತಿ ಹೊರ ಬರ್ತಿದ್ದ ವಿಚಾರ ತಿಳಿದಿದ್ದು, ಅಂದು ಆತ ಹೊರ ಬರುವುದನ್ನ ಓರ್ವ ಗಮನಿಸಿಕೊಂಡು ನಿಂತಿದ್ದ. ಆತ ಹೊರ ಬರ್ತಿದ್ದಂತೆ ದೂರದಲ್ಲಿ ಕಾರಿನಲ್ಲಿ ಕುಳಿತಿದ್ದ ಗ್ಯಾಂಗ್ ಅಲರ್ಟ್ ಆಗಿ, ಅಪಘಾತ ಮಾಡಿದೆ.
ಇತ್ತ ಬಸವರಾಜ್ ಮಾತ್ರ ಆತನ ಅಣ್ಣನಿಗೆ ಅಪಘಾತವಾಗಿ ನಿಮ್ಮ ತಮ್ಮ ಡೆತ್ ಆಗಿದ್ದಾನೆ ಎನ್ನುವ ವಿಷಯ ಮುಟ್ಟಿಸಿ, ತಾನೇ ಎಲ್ಲವನ್ನೂ ಮುಂದೆ ನಿಂತುಕೊಂಡು ಕೆಲಸ ಮಾಡಿದ್ದ. ಆದರೆ, ಸಿಸಿಟಿವಿ ಒಂದು ದೃಶ್ಯ ಇವರ ಪ್ಲ್ಯಾನ್ ಎಲ್ಲವನ್ನೂ ಪ್ಲಾಪ್ ಮಾಡಿದ್ದು, ಪ್ರಕರಣ ಸಂಬಂಧ ಆರೋಪಿಗಳಾದ ಬಸವರಾಜ್ ಬಗವತಿ, ಪ್ರಕಾಶ್ ರಾಠೋಡ್, ರವಿ ಕುಂಬರಗಿ, ಸಚೀನ್ ಪಾಟೀಲ್, ರಾಮು ವಂಟಮೂರಿ ಹಾಗೂ ಮಹೇಶ್ ನನ್ನ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ