ಹಳೆ ವೈಷಮ್ಯ; ಗ್ರಾಮ ಪಂಚಾಯತಿ ಸದಸ್ಯನ ಕೊಲೆ, ಆರೋಪಿ ಪರಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಅಪಾಕ್ ಅಮಿರ್ ಖಾನ್ ಕೊಲೆ ಆಗಿದೆ. ಹಳೆ ವೈಷಮ್ಯ ಹಿನ್ನೆಲೆ ಕೊಲೆ ನಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ. ಕಳೆದ ರಾತ್ರಿ ಗ್ರಾಮ ಪಂಚಾಯತಿ ಕಚೇರಿ ಮುಂದೆಯೇ ಘಟನೆ ನಡೆದಿದೆ.
ದೇವನಹಳ್ಳಿ, ಜುಲೈ.08: ಹಳೆ ವೈಷಮ್ಯ ಹಿನ್ನೆಲೆ ಗ್ರಾಮ ಪಂಚಾಯತಿ ಸದಸ್ಯನ ಕೊಲೆ (Murder) ಮಾಡಲಾಗಿರುವ ಭಯಾನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೈಲನರಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ಅಪಾಕ್ ಅಮಿರ್ ಖಾನ್ (45) ನನ್ನು ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ಘಟನೆ ನಡೆದಿದ್ದು ಇದೇ ಗ್ರಾಮದ ಮೆಹಬೂಬ್ ಎಂಬಾತ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಅಮಿರ್ ಖಾನ್ ಗ್ರಾಮ ಪಂಚಾಯತಿ ಮುಂದೆ ಪೋನ್ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಅಟ್ಯಾಕ್ ಮಾಡಿ ಕೊಲೆ ಮಾಡಲಾಗಿದೆ. ಕೊಲೆ ನಂತರ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ ಹಣ ಕಳ್ಳತನ
ಬೆಂಗಳೂರಿನಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ ಹಣ ಕಳ್ಳತನ ಮಾಡಲಾಗಿದೆ. ಒಂದೇ ದಿನ ಬೆಳ್ಳಂದೂರು ಹಾಗೂ ಹೊಸೂರಿನಲ್ಲಿ ಕಳ್ಳತನ ನಡೆದಿದೆ. ಬೆಡ್ಶೀಟ್ ಸುತ್ತಿಕೊಂಡು ಬಂದು ಆರೋಪಿಗಳು ಕೃತ್ಯ ಎಸಗಿದ್ದಾರೆ. ಸಿಸಿ ಕ್ಯಾಮರಾಗೆ ಕಪ್ಪು ಸ್ಪ್ರೇ ಹೊಡೆದು ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ್ದಾರೆ. ಬೆಳ್ಳಂದೂರಿನ ಎಟಿಎಂ ಒಂದರಲ್ಲೇ 16,56,800 ನಗದು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊರ ರಾಜ್ಯದಿಂದ ಬಂದು ಕೃತ್ಯ ಎಸಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಬಳ್ಳಾರಿ: ಅನಾರೋಗ್ಯದಿಂದ ಬಿಎಸ್ಎಫ್ ಯೋಧ ಕೊನೆಯುಸಿರು
ಮರಳೇಕಾಯಿ ತಿಂದು 8 ಮಕ್ಕಳು ಅಸ್ವಸ್ಥ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಾರದೊಡ್ಡಿಯಲ್ಲಿ ಮರಳೇಕಾಯಿ ತಿಂದು 8 ಮಂದಿ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆಗೆ ಆಟವಾಡುವಾಗ ಅದೇ ಗಿಡದ ಕಾಯಿ ತಿಂದ ಮಕ್ಕಳು ಕೂಡಲೇ ಅಸ್ವಸ್ಥಗೊಂಡಿದ್ದಾರೆ. ಸ್ಥಳದಲ್ಲಿ ಕೆಲ ಮಕ್ಕಳಿಗೆ ವಾಂತಿ ಕೂಡ ಆಗಿದೆ. ಕೂಡಲೇ ಮಕ್ಕಳನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆದರಿಸಲು ಹೋದವರ ಮೇಲೆ ಚಿರತೆ ದಾಳಿ
ರಾಯಚೂರಿನ ದೇವದುರ್ಗ ತಾಲ್ಲೂಕಿನ ಡಿ.ಕರಡಿಗುಡ್ಡದಲ್ಲಿ ಚಿರತೆ ಹೆದರಿಸಲು ಹೋದವರು ಚಿರತೆ ದಾಳಿಗೆ ಒಳಗಾಗಿದ್ದಾರೆ. ನಿನ್ನೆ ಬೆಳಗ್ಗೆ ರಂಗನಾಥ್ ಎಂಬಾತ ಬಹಿರ್ದೆಸೆಗೆ ಹೋದಾಗ ಚಿರತೆ ಪ್ರತ್ಯಕ್ಷವಾಗಿದ್ದು, ರಮೇಶ್ ಮತ್ತು ಮಲ್ಲಣ್ಣ ಎಂಬಾತನಿಗೆ ಮಾಹಿತಿ ನೀಡಿ ಬಳಿಕ ಆಯುಧಗಳನ್ನ ತೆಗೆದುಕೊಂಡು ಹೋಗಿ ಚಿರತೆಯನ್ನ ಬೆದರಿಸಲು ಯತ್ನಿಸಿದ್ದಾರೆ. ಆಗ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಮೂವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:30 am, Mon, 8 July 24