ರಾಜ್ಯ ಸರ್ಕಾರಕ್ಕೆ ಶಾಕ್ ಕೊಡಲು ಮುಂದಾದ ಸರ್ಕಾರಿ ನೌಕರರು; ಕೆಲಸಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ
7 ನೇ ವೇತನ ಜಾರಿ, ಸಂಜೀವಿನಿ ಯೋಜನೆ ಜಾರಿ, NPS ರದ್ದು ಮಾಡಿ OPS ಜಾರಿ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪ್ರತಿಭಟನೆಯ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಚಿಕ್ಕಮಗಳೂರು, ಜುಲೈ.08: ರಾಜ್ಯ ಸರ್ಕಾರ (Karnataka Government) ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಸಚಿವ ಸಂಪುಟದ ಸದಸ್ಯರಿಗೆ ಅಂಕಿ–ಅಂಶಗಳ ಮೂಲಕ ತಿಳಿಸಿದ್ದಾರೆ. ಆದರೆ ಇತ್ತ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ (Protest) ಶಾಕ್ ಕೊಡಲು ಸರ್ಕಾರಿ ನೌಕರರು ಮುಂದಾಗಿದ್ದಾರೆ. ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸರ್ಕಾರಿ ನೌಕರರು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರ ವಿರುದ್ಧ ಮೂರು ಹಂತದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಮಾನ ಮಾಡಿದೆ. 7 ನೇ ವೇತನ ಜಾರಿ, ಸಂಜೀವಿನಿ ಯೋಜನೆ ಜಾರಿ, NPS ರದ್ದು ಮಾಡಿ OPS ಜಾರಿ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಚಿಕ್ಕಮಗಳೂರು ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪ್ರತಿಭಟನೆಯ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರಕ್ಕೆ ಇದೆ ತಿಂಗಳಿನಿಂದ ಪ್ರತಿಭಟನೆಯ ಬಿಸಿ ತಟ್ಟಲಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಇಂದಿನಿಂದ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ನೀಡುವ ಮೂಲಕ ಮೊದಲ ಹಂತದ ಪ್ರತಿಭಟನೆ ಆರಂಭವಾಗುತ್ತದೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಿಂದ ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನು ಚಿಕ್ಕಮಗಳೂರು ನಗರದ ಪೈ ಕಲ್ಯಾಣ ಮಂಟಪದಲ್ಲಿ ರಾಜ್ಯ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು, ಚುನಾವಣೆ ಮುಗಿದ ಬಳಿಕ 7ನೇ ವೇತನ ಜಾರಿ ಮಾಡುವುದಾಗಿ ಹೇಳಿದ್ದರು. ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಮ್ಮೇಳನದಲ್ಲಿ ಸರ್ಕಾರಿ ನೌಕರರಿಗೆ ಬರವಸೆ ನೀಡಿದ್ದರು. ಆದರೆ 7ನೇ ವೇತನ ಜಾರಿ ಮಾಡದ ಹಿನ್ನೆಲೆ ಕೋಪಗೊಂಡಿರುವ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ವೇತನ ಹೆಚ್ಚಿಸಿ ಆದೇಶ
ಇನ್ನು ಮತ್ತೊಂದೆಡೆ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅವರ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಏಳನೇ ವೇತನ ಆಯೋಗವು ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜೊತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಆರಂಭವಾದ ಕಾರಣ ಶಿಫಾರಸು ಜಾರಿ ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ನೌಕರರ ಆರೋಪ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ