ಗಂಡನನ್ನು ಪ್ರಿಯಕರನ ಜೊತೆ ಪ್ರವಾಸಕ್ಕೆ ಕಳುಹಿಸಿ ಧಾರುಣವಾಗಿ ಹತ್ಯೆ ಮಾಡಿಸಿದ ಪತ್ನಿ; ಮೃತದೇಹದ ಸುಳಿವು ನೀಡಿತ್ತು ಬಸ್ ಟಿಕೆಟ್
ಪತಿ- ಪತ್ನಿಯ ಸಂಬಂಧ ಅತೀ ವಿಶೇಷ. ಈ ಒಂದೇ ಜನ್ಮಕ್ಕೆ ಮಾತ್ರವಲ್ಲ, ಏಳೇಳು ಜನ್ಮಕ್ಕೂ ಆಕೆ ಹಾಗೂ ಆತನೇ ತನ್ನ ಜೀವನ ಸಾಥೀ ಎನ್ನುವ ವಚನದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಾಗುತ್ತದೆ. ಆದರೆ, ಇಲ್ಲೊಬ್ಬಾಕೆ ತನ್ನ ಅನೈತಿಕ ಸಂಬಂಧಕ್ಕೆ ಪತಿ ಮಹಾಶಯ ಅಡ್ಡಿಯಾಗುತ್ತಾನೆಂದು ತನ್ನ ಪ್ರಿಯಕರನ ಜತೆ ಸೇರಿ ಪತಿಯನ್ನು ಧಾರುಣವಾಗಿ ಕೊಲೆ ಮಾಡಿಸಿದ್ದಾಳೆ. ಆದರೆ, ಬಸ್ ಟಿಕೆಟ್‌ವೊಂದು ನೀಡಿದ ಸುಳಿವಿನಿಂದಾಗಿ ಕೊಲೆಗಾರರ ತಂಡವೇ ಜೈಲು ಸೇರಿದೆ.
ಉತ್ತರ ಕನ್ನಡ, ಅ.06: ಪ್ರಿಯತಮನ ಜೊತೆ ಸೇರಿ ತನ್ನ ಗಂಡನನ್ನೇ ಧಾರುಣವಾಗಿ ಹತ್ಯೆ ಮಾಡಿದ ಪ್ರಕರಣ ಉತ್ತರ ಕನ್ನಡ(Uttara Kannada) ಜಿಲ್ಲೆಯ ಕುಮಟಾ(Kumta) ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ. ಒಂದು ಬಸ್ ಟಿಕೆಟ್ (Bus Ticket) ನೀಡಿದ ಸುಳಿವಿನಿಂದಾಗಿ ಕೊಲೆ ಆರೋಪಿಗಳೆಲ್ಲರೂ ಪೊಲೀಸರ ಬಲೆಗೆ ಬಿದ್ದಿದ್ದು, ಇದೀಗ ಕಂಬಿ ಎಣಿಸುತ್ತಿದ್ದಾರೆ. ಹೌದು, ಸೆ. 30ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಘಟ್ಟದ ಮಾಸ್ತಿಮನೆ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು. ಬಿಳಿ ಬಣ್ಣದ ಅಂಗಿ, ಹಸಿರು ಲುಂಗಿ ತೊಟ್ಟಿದ್ದ ವ್ಯಕ್ತಿ ಶವವಾಗಿ ಬಿದ್ದಿದ್ದ. ತಲೆ ಹಿಂಭಾಗದಲ್ಲಿ ಮತ್ತು ಎಡಗಿವಿ ಭಾಗದಲ್ಲಿ ಯಾರೋ ಹೊಡೆದು ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.
ಅನಾಥವಾಗಿ ಕಾಡಿನಲ್ಲಿ ಬಿದ್ದಿದ್ದ ಮೃತದೇಹದ ಸುಳಿವು ನೀಡಿತ್ತು ಬಸ್ ಟಿಕೆಟ್
ಕೂಡಲೇ ಸ್ಥಳಕ್ಕೆ ಧಾವಿಸಿದ ಕುಮಟಾ ಪೊಲೀಸರು ಅನಾಥ ಶವ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಆತನ ಕಿಸೆಯಲ್ಲಿದ್ದ ಬಸ್ ಟಿಕೆಟ್ ಆತ ಯಾವ ಊರಿನ ವ್ಯಕ್ತಿ ಎಂದು ಸುಳಿವು ನೀಡಿತ್ತು. ಈ ಸುಳಿವಿನ ಆಧಾರದಲ್ಲಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್, ಪಿಎಸ್‌ಐ ನವೀನ್ ನಾಯ್ಕ್, ಪಿಎಸ್‌ಐ ಸಂಪತ್ ಕುಮಾರ್ ಹಾಗೂ ತಾಂತ್ರಿಕ ತಂಡ ಸೇರಿ ಒಟ್ಟು ಮೂರು ತಂಡ ರಚಿಸಿ ಕಾರ್ಯಪ್ರವೃತ್ತರಾಗಿದ್ದರು.
ಇದನ್ನೂ ಓದಿ:ಜಮೀನಿಗೆ ಬಂದ ಕೇಂದ್ರ ಬರ ತಂಡದ ಅಧಿಕಾರಿಗಳ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ
ತನಿಖೆ ಬೆನ್ನತ್ತಿದ ಪೋಲಿಸರು ಬಾದಾಮಿ ತಾಲೂಕಿನ ಹೊಸೂರು ಬಸ್ ನಿಲ್ದಾಣಕ್ಕೆ ತೆರಳಿ ಸೆ. 28 ತಾರೀಕಿನ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ, ಆ ಮೃತವ್ಯಕ್ತಿ ಬಾಗಲಕೋಟೆಯ ಬಾದಾಮಿ ತಾಲೂಕು ಹೊಸೂರು ಮೂಲದ ಬಶೀರ್ ಸಾಬ್ (32) ಎಂಬ ಮಾಹಿತಿ ಗೊತ್ತಾಗಿದೆ. ಅಲ್ಲದೇ, ಕೊಲೆಯಾದ ವ್ಯಕ್ತಿ ಜೊತೆಗೆ ಇಬ್ಬರು ಬಸ್‌ನಲ್ಲಿ ಗದಗದ ಮುಸಿಗೇರಿಯಿಂದ ಗಜೇಂದ್ರಗಢದ ಕಡೆಗೆ ಪ್ರಯಾಣ ಬೆಳೆಸಿರುವುದು ಕೂಡಾ ಗೊತ್ತಾಗಿದೆ. ಅಲ್ಲದೇ, ಓರ್ವ ಆರೋಪಿ ಪರಶುರಾಮ ಎಂಬಾತ ಬಗ್ಗೆಯೂ ಪೊಲೀಸರಿಗೆ ಸುಳಿವು ದೊರಕಿತ್ತು.
ಹತ್ಯೆ ಕುರಿತು ಬಾಯ್ಬಿಟ್ಟ ಆರೋಪಿಗಳು
ಕೊಲೆಯಾದ ವ್ಯಕ್ತಿ ಹಾಗೂ ಆತನ ಪತ್ನಿ ಮುಸಿಗೇರಿ ನಿವಾಸಿ ರಾಜ್ಮಾ (27) ಜತೆ ಆಗಾಗ ಗಲಾಟೆ ಕೂಡ ನಡೆಯುತ್ತಿತ್ತು ಎಂಬ ಮಾಹಿತಿ ಪಡೆದುಕೊಂಡ ಪೊಲೀಸರು, ಮೃತ ವ್ಯಕ್ತಿಯ ಪತ್ನಿಯ ಜೊತೆ ಮೂವರು ಆರೋಪಿಗಳಾದ ಮುಸಿಗೇರಿಯ ಪರಶುರಾಮ್ (23), ತೆಮಿನಾಳ ನಿವಾಸಿ ರವಿ ದಾನಲ್ಲಿ ಹಾಗೂ ಮುಸಿಗೇರಿಯ ಆದೇಶ (30) ಎಂಬಾತನನ್ನು ಕರೆತಂದು ಬಾಯಿ ಬಿಡಿಸಿದ್ದಾರೆ. ಆಗ ಮೃತನ ಪತ್ನಿ ಕೊಲೆಯ ಹಿಂದಿನ ರಹಸ್ಯಗಳನ್ನೆಲ್ಲಾ ಇಂಚಿಂಚಾಗಿ ಹೊರ ಹಾಕಿದ್ದಾಳೆ.
ಇದನ್ನೂ ಓದಿ:ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ: ಕಾರಣವೇನು?
ಇನ್ನು ಬಾಗಲಕೋಟೆಯ ಬಾದಾಮಿ ತಾಲೂಕು ಹೊಸೂರು ಮೂಲದ ಬಶೀರ್ ಸಾಬ್ ಕುರಿ ಕಾಯುವ ವೃತ್ತಿ ಮಾಡಿಕೊಂಡಿದ್ದ. ಬಶೀರ್ ಹಾಗೂ ಈತನ ಪತ್ನಿ, ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದು, ಪತಿಯ ಜತೆ ಚೆನ್ನಾಗಿಯೇ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಕೆಲವು ತಿಂಗಳ ಹಿಂದೆ ಬಾದಾಮಿ ತಾಲೂಕಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಕುರಿ ಮಾರಾಟ ಮಾಡಲು ಬಶೀರಸಾಬ್‌ನ ಸಹೋದರ ಖಾಸಿಂ ತೆರಳಿದ್ದಾಗ ಅಲ್ಲಿ ಆರೋಪಿ ಪರಶುರಾಮ್ ಪರಿಚಯ ಆಗಿದ್ದ. ಸಹೋದರ ಖಾಸಿಂ ಪರಿಚಯದ ಮೇಲೆ ಆರೋಪಿ ಪರಶುರಾಮ್ ಬಶೀರಸಾಬ್ ಮನೆಗೆ ಬಂದಾಗ ಆತನ ಹೆಂಡತಿ ರಾಜಮಾ ಪರಿಚಯ ಮಾಡಿಕೊಂಡಿದ್ದನು. ರಾಜಮಾ ಹಾಗೂ ಪರಶುರಾಮ್ ಇಬ್ಬರದ್ದು ಒಂದೇ ಊರಾಗಿದ್ದರಿಂದ ಇಬ್ಬರ ಪರಿಚಯ, ನಂತರ ಪ್ರೇಮ ಹಾಗೂ ಕಾಮಕ್ಕೆ ತಿರುಗಿತ್ತು.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ
ನಂತರ ಆತನ ಜೊತೆ ಅಕ್ರಮ ಸಂಬಂಧ ಮುಂದುವರಿಸಿದ್ದ ಆಕೆ, ತನ್ನ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದಳು. ಈ ದುರುದ್ದೇಶದೊಂದಿಗೆ ಗಂಡನನ್ನು ಪುಸಲಾಯಿಸಿ ಮಂಗಳೂರಿಗೆ ಬೀಚ್ ನೋಡುವ ಹೆಸರಿನಲ್ಲಿ ತನ್ನ ಪ್ರಿಯಕರ ಪರಶುರಾಮನಿಗೆ 10 ಸಾವಿರ ರೂ. ಹಣ ನೀಡಿ ತನ್ನ ಗಂಡ ಬಶೀರ್ ಸಾಬ್‌ನನ್ನು ಮಂಗಳೂರಿಗೆ ಕಳಿಸಿದ್ದಳು. ಈ ವೇಳೆ ಪರಶುರಾಮನಿಗೆ ಆತನ ದೊಡ್ಡಮ್ಮನ ಮಗ ತೆಮಿನಾಳದ ರವಿ ದಾನಪ್ಪ ಸಾಥ್ ನೀಡಿದ್ದಾನೆ. ನಂತರ ಮಂಗಳೂರಿನಲ್ಲಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆದೇಶನ ಕರೆ ಮಾಡಿದ ಪರಶುರಾಮ ತನ್ನ ಯೋಜನೆ ಕೂಡ ತಿಳಿಸಿದ್ದ.
ಕೊಲೆಗೆ ಐಡಿಯಾ ನೀಡಿದ್ದ ಆದೇಶ್
ಆದೇಶನ ಸಾಥ್ ಪಡೆದುಕೊಂಡು ಪಣಂಬೂರು ಬೀಚ್‌ಗೂ ಭೇಟಿ ನೀಡಿ, ಕುಡಿದು ಭರ್ಜರಿಯಾಗಿ ತಿಂದ ಬಳಿಕ ಆತನನ್ನು ಕೊಲೆ ಮಾಡಲು ಯತ್ನಿಸಿದ್ದರೂ ಆಗಿರಲಿಲ್ಲ. ಹೀಗಾಗಿ ತಲೆ ಕೆಡಿಸಿಕೊಂಡ ಆರೋಪಿ ಪರಶುರಾಮನಿಗೆ ಆರೋಪಿ ಆದೇಶ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟ ನಿರ್ಜನ ಪ್ರದೇಶದಲ್ಲಿ ಇಳಿದುಕೊಂಡು ಅಲ್ಲಿ ಮದ್ಯ ಸೇವನೆ ನೆಪಮಾಡಿ ಕೊಲೆ ಮಾಡಿ ಎಂಬ ಐಡಿಯಾ ನೀಡಿದ್ದ. ಆದೇಶನ ಐಡಿಯಾದಂತೆ ಮಂಗಳೂರಿನಿಂದ ಸೆ.29ರಂದು ಹಿಂತಿರುಗಿದ್ದ ಆರೋಪಿಗಳು, ಬಶೀರ್ ಜತೆ ದೇವಿಮನೆ ಘಟ್ಟದಲ್ಲಿ ಇಳಿದುಕೊಂಡಿದ್ದರು.
ಇದನ್ನೂ ಓದಿ:ಆಂಧ್ರಪ್ರದೇಶ: ಪತ್ನಿ, ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪೊಲೀಸ್ ಹೆಡ್ ಕಾನ್ಸ್ಟೆಬಲ್
ಅಲ್ಲೇ ಇರುವ ದೇವಸ್ಥಾನದ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಮಂಗಳೂರಿನಿಂದ ತಂದಿದ್ದ ಸಾರಾಯಿಯನ್ನು ಬಶೀರನಿಗೆ ಪುಲ್ ಕುಡಿಸಿದ್ದಾರೆ. ಬಳಿಕ ರವಿ ಮರದ ತುಂಡಿನಿಂದ ಬಶೀರನ ಎಡಗಿವಿ ಭಾಗಕ್ಕೆ ತಿವಿದಿದ್ದರೆ, ಪರಶುರಾಮ ಬಶೀರನ ತಲೆಗೆ ಹೊಡೆದು ಸಾಯಿಸಿಯೇ ಬಿಟ್ಟಿದ್ದ. ಸತ್ತು ಬಿದ್ದ ಬಶೀರನ ಮೃತದೇಹವನ್ನು ಹಾಗೂ ಆತನ ಟವೆಲನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಆತನ ಮೊಬೈಲನ್ನು ಸುಮಾರು ಒಂದು ಕಿ.ಮೀ.ದೂರದಲ್ಲಿ ಬಿಸಾಕಿ ನೆಮ್ಮದಿಯ ಉಸಿರು ಬಿಟ್ಟಿದ್ದರು. ಬೆಳಿಗ್ಗೆ ಶವ ನೋಡಿದ ವಾಹನ ಸವಾರರೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಕೈಗೊಂಡು, ಒಂದು ಟಿಕೆಟ್ ನೀಡಿದ ಸುಳಿವನ್ನು ಆಧರಿಸಿಕೊಂಡು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಎಂಬ ಉದ್ದೇಶದಿಂದ ತನ್ನ ಗಂಡನನ್ನೇ ದಾರುಣವಾಗಿ ಕೊಲೆ ಮಾಡಿಸಿದ ಪತ್ನಿ, ಆಕೆಯ ಪ್ರಿಯಕರ ಹಾಗೂ ಇವರಿಗೆ ಸಾಥ್ ನೀಡಿದ ಇನ್ನಿಬ್ಬರು ಆರೋಪಿಗಳು ಇದೀಗ ಜೈಲಿನ ಕಂಬಿ ಎಣಿಸಿಸುತ್ತಿದ್ದಾರೆ. ಪ್ರಕೃತಿ ಸೌಂದರ್ಯ ಪ್ರಿಯರ ಫೇವರೇಟ್ ಸ್ಪಾಟ್ ಆಗಿರುವ ದೇವಿಮನೆ ಘಟ್ಟ ಪ್ರಸ್ತುತ ಕೊಲೆಗಟುಕರಿಗೆ ಫೇವರೇಟ್ ಸ್ಪಾಟ್ ಆಗುತ್ತಿರುವುದು ವಿಪರ್ಯಾಸವಾಗಿದ್ದು, ಪೊಲೀಸ್ ಇಲಾಖೆ ಇಂತಹ ನಿರ್ಜನ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಬೇಕೆಂಬ ಒತ್ತಾಯ ಜನರಿಂದ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Fri, 6 October 23