ಹೈದರಾಬಾದ್: ಮೇ 28ರಂದು ಹೈದರಾಬಾದ್ನಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ (Hyderabad gang rape) ಪ್ರಕರಣದಲ್ಲಿ ಎಐಎಂಐಎಂ (AIMIM) ಶಾಸಕನ ಪುತ್ರನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಆರೋಪಿ ಅಪ್ರಾಪ್ತನಾಗಿದ್ದು ಆತನನ್ನು ಅಬ್ಸರ್ವೇಷನ್ ಹೋಂಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿನ ಐವರು ಆರೋಪಿಗಳು ಅಪ್ರಾಪ್ತರಾಗಿದ್ದಾರೆ. ಇಲ್ಲಿವರೆಗೆ ಬಂಧಿಸಿದ 6 ಆರೋಪಿಗಳ ಪೈಕಿ ಒಬ್ಬ ಮಾತ್ರ ಅಪ್ರಾಪ್ತ ಅಲ್ಲ, ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಶಾಸಕನ ಮಗನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣದ ಬದಲು ಲೈಂಗಿಕ ಕಿರುಕುಳ ಆರೋಪ ಹೊರಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಕಾರಿನಲ್ಲಿ ಶಾಸಕನ ಪುತ್ರ ಇರಲಿಲ್ಲ. ಮರ್ಸಿಡೆಸ್ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಈತ ಸಂತ್ರಸ್ತೆಯನ್ನು ನಿಂದಿಸಿದ್ದಾನೆ ಎಂಬ ಆರೋಪವಿದೆ.
ಸಾಮೂಹಿಕ ಅತ್ಯಾಚಾರ ನಡೆದ ಇನ್ನೋವಾ ಸರ್ಕಾರಿ ವಾಹನ ಎಂದು ತೋರುತ್ತದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಮೇ 28 ರಂದು ಜುಬಿಲಿ ಹಿಲ್ಸ್‌ನ ಪಬ್‌ನಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿ ಬಾಲಕಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಹುಡುಗಿ ಪಬ್‌ನಿಂದ ಹೊರಡುತ್ತಿರುವಾಗ, ಅಲ್ಲಿ ಅವಳನ್ನು ಭೇಟಿಯಾದ ಕೆಲವು ಯುವಕರು ಅವಳ ಬಳಿ ಬಂದು ಅವಳನ್ನು ಮನೆಗೆ ಬಿಡಲು ಮುಂದಾದರು. ಹೀಗೆ ಕಾರಿನಲ್ಲಿ ಕರೆದುಕೊಂಡು ಬಂದ ಯುವಕರು ಏಕಾಂತ ಸ್ಥಳದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕ ಎಂ ರಘುನಂದನ್ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಕೆಲವು ಫೋಟೊಗಳನ್ನು ಪ್ರದರ್ಶಿಸಿದ್ದು, ಅತ್ಯಾಚಾರ ಪ್ರಕರಣದಲ್ಲಿ ಎಐಎಂಐಎಂ ಶಾಸಕರ ಪುತ್ರ ಭಾಗಿಯಾಗಿದ್ದಾನೆ ಎಂಬುದಕ್ಕೆ ಸಾಕ್ಷ್ಯ ಇದು ಎಂದಿದ್ದರು.
ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಒತ್ತಾಯಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಕುರಿತು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ಆಡಳಿತಾರೂಢ ಟಿಆರ್‌ಎಸ್‌ನ ದೋಸ್ತಿ ಪಕ್ಷವಾದ ಎಐಎಂಐಎಂಗೆ ಸೇರಿದವರ ಕುಟುಂಬ ಸದಸ್ಯರ ಶಾಮೀಲಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುವುದು ರಾಜ್ಯ ಸರ್ಕಾರದ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಹೇಳಿದ ಬಿಜೆಪಿ ನಾಯಕ ತೆಲಂಗಾಣದಲ್ಲಿ ಪಬ್‌ಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:33 pm, Tue, 7 June 22