ಹಾಸ್ಟೆಲ್‌ನಿಂದ ಹೊರಹೋದ ವಿದ್ಯಾರ್ಥಿ; ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆ
ಆತ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ. ಕಾಲೇಜಿನ ಹಾಸ್ಟೆಲ್ನಲ್ಲಿಯೇ ವಾಸವಿದ್ದು, ನಿತ್ಯ ಕಾಲೇಜ್ ಬಸ್‌ನಲ್ಲಿ ಹೋಗಿ ಬರುತ್ತಿದ್ದ. ಆದ್ರೆ, ಕಳೆದ ನಾಲ್ಕೈದು ದಿನಗಳ ಹಿಂದೆ ಕಾಲೇಜಿಗೆ ಹೋಗುವುದಾಗಿ ಹಾಸ್ಟೆಲ್‌ನಿಂದ ಹೊರಹೋದ ವಿದ್ಯಾರ್ಥಿ ಕಾಣೆಯಾಗಿದ್ದು, ಇದೀಗ ಆನೇಕಲ್ ಸಮೀಪದ ತೆಲಗರಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬೆಂಗಳೂರು, ಫೆ.25: ಉತ್ತರಾಖಂಡ ಮೂಲದ ಬಿ.ಟೆಕ್ ಓದುತ್ತಿದ್ದ ವಿದ್ಯಾರ್ಥಿ(Student)ಯೊಬ್ಬ ಕಾಲೇಜಿಗೆ ಹೋಗುವುದಾಗಿ ಹಾಸ್ಟೆಲ್ ನಿಂದ ಹೊರಹೋದವ ನಾಲ್ಕೈದು ದಿನಗಳ ಬಳಿಕ ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ತೆಲಗರಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹರ್ಷಿತ್ ಕೊಟ್ನಾಲಾ ಮೃತ ರ್ದುದೈವಿ. ಪ್ರತಿಷ್ಠಿತ ಅಲಯನ್ಸ್ ಯೂನಿವರ್ಸಿಟಿಯಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಹರ್ಷಿತ್ ಕೊಟ್ನಾಲಾ, ಗುಮ್ಮಾಳಾಪುರದ ಕಾಲೇಜಿನ ಹಾಸ್ಟೆಲ್ನಲ್ಲಿಯೇ ವಾಸವಿದ್ದ. ಪ್ರತಿದಿನ ಎಂದಿನಂತೆ ಬೆಳಿಗ್ಗೆ ಕಾಲೇಜಿನ ಬಸ್ ನಲ್ಲಿಯೇ ಸ್ನೇಹಿತರೊಡನೆ ಕಾಲೇಜಿಗೆ ಹೋಗಿ ಬರುತ್ತಿದ್ದ. ಆದ್ರೆ, ಕಳೆದ 21 ನೇ ತಾರೀಖಿನಂದು ಕಾಲೇಜಿನ ಬಸ್‌ನಲ್ಲಿ ತೆರಳದೆ, ಹಾಸ್ಟೆಲ್‌ನಿಂದ ತಡವಾಗಿ ಕಾಲೇಜಿಗೆ ಹೋಗೋದಾಗಿ ಹೊರಬಂದಿದ್ದ.
ಅಲ್ಲಿಂದ ಹೊರ ಹೋದ ವಿದ್ಯಾರ್ಥಿ ಹರ್ಷಿತ್, ಕಾಲೇಜಿಗೆ ಹೋಗದೆ ಕಾಣೆಯಾಗಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಕಾಣದಿದ್ದಾಗ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು. ಈ ಮಧ್ಯೆ ತೆಲಗರಹಳ್ಳಿಯ ನೀಲಗಿರಿ ತೋಪಿನ ಸ್ಥಳೀಯರಿಗೆ ಸುಟ್ಟು ಕರಕಲಾದ ಶವವೊಂದು ಕಂಡಿತ್ತು. ಕೂಡಲೇ ಆನೇಕಲ್ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಸ್ಥಳದಲ್ಲಿ ದೊರೆತ ಬ್ಯಾಗ್ನಲ್ಲಿನ ದಾಖಲೆಗಳ ಆಧಾರದ ಮೇಲೆ ಹರ್ಷಿತ್ ಎಂದು ಗುರುತಿಸಿದ್ದಾರೆ.
ಇನ್ನು ವಿದ್ಯಾರ್ಥಿ ಹರ್ಷಿತ್ 21ನೇ ತಾರೀಖಿನಂದು ಕಾಲೇಜ್ ಬಸ್‌ನಲ್ಲಿ ತೆರಳದೆ, ಹಾಸ್ಟೆಲ್‌ನಿಂದ ತಡವಾಗಿ ಹೊರಟ್ಟಿದ್ದ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಲೇಜಿಗೆ ಹೋಗದೆ ಸ್ನೇಹಿತರ ಜತೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ತೆಲಗರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮದ್ಯದ ಬಾಟೆಲ್, ತಿಂಡಿ-ತಿನಿಸು ಬಿದ್ದಿದ್ದು, ಈ ನಡುವೆ ಹರ್ಷಿತ್ ಹಾಗೂ ಜೊತೆಯಲ್ಲಿದ್ದವರ ನಡುವೆ ಏನು ನಡೆದಿದೆಯೋ ತಿಳಿದಿಲ್ಲ. ದುಷ್ಟರು ಹರ್ಷಿತ್‌ನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಪುರುಷೋತ್ತಮ್, ಶ್ವಾನದಳ, ಎಫ್. ಎಸ್. ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹಲವು ಸಾಕ್ಷ್ಯ ಕಲೆ ಹಾಕಿದ್ದಾರೆ. ವಿದ್ಯಾರ್ಥಿ ಹರ್ಷಿತ್ನ ಹತ್ಯೆಯು, ಪ್ರೀತಿ ಪ್ರೇಮದ ವಿಚಾರಕ್ಕೆ ನಡೆದಿದ್ಯಾ ಅಥವಾ ಸ್ನೇಹಿತರ ಜೊತೆ ಕುಡಿದ ಮತ್ತಿನಲ್ಲಿ ಕಿರಿಕ್ ಆಗಿ ಕೊಲೆ ನಡೆದಿದೆಯಾ, ಹಂತಕರು ಯಾರೂ ಎಂಬುದರ ಕುರಿತು ಪೊಲೀಸರು ತನಿಖೆಯಿಂದ ತಿಳಿದು ಬರಬೇಕಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ