ದಾವಣಗೆರೆಯಲ್ಲಿ ಬೊಲೆರೊ ಟೆಂಪೋ ಟೈಯರ್ ಸ್ಫೋಟ; ಮೂವರ ಸಾವು, 6 ಜನರಿಗೆ ಗಾಯ
ದಾವಣಗೆರೆ ನಗರದ ಹೊರವಲಯದ ಪಂಜಾಬಿ ಡಾಬಾ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ತಡ ರಾತ್ರಿ ಬೊಲೆರೊ ಟೆಂಪೋ ವಾಹನದ ಟೈಯರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿದೆ. ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಆರು ಜನರಿಗೆ ಗಾಯಗಳಾಗಿವೆ.
ದಾವಣಗೆರೆ, ಫೆ.26: ಬೊಲೆರೊ ಟೆಂಪೋ ವಾಹನದ ಟೈಯರ್ ಸ್ಫೋಟಗೊಂಡು ವಾಹನ (Accident) ಪಲ್ಟಿಯಾಗಿದ್ದು ಮೂವರು ಸ್ಥಳದಲ್ಲಿಯೇ ಮೃತಪಟ್ಟ (Death) ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹಾಗೂ ಘಟನೆಯಲ್ಲಿ ಆರು ಜನರಿಗೆ ಗಾಯಗಳಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಹಾಗೂ ಗಾಯಾಳುಗಳು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳು.
ದಾವಣಗೆರೆ ನಗರದ ಹೊರವಲಯದ ಪಂಜಾಬಿ ಡಾಬಾ ಬಳಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ತಡ ರಾತ್ರಿ ಅಪಘಾತ ಸಂಭವಿಸಿದೆ. ಇವರು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿನಕಾಯಿ ತೆಗೆದುಕೊಂಡು ತಮ್ಮೂರಿಗೆ ವಾಪಸ್ಸಾಗುವಾಗ ಘಟನೆ ನಡೆದಿದೆ.
ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಓರ್ವ ಯುವಕ ಬಲಿ
ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಓರ್ವ ಯುವಕ ಬಲಿಯಾಗಿದ್ದಾನೆ. ವ್ಹೀಲಿಂಗ್ ವೇಳೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಟೋಲ್ ಬಳಿ ಅಪಘಾತ ಸಂಭವಿಸಿದೆ. ದಾಸರಹಳ್ಳಿಯ ರಾಜೀಶ್(18) ಮೃತ ದುರ್ದೈವಿ. ವ್ಹೀಲಿಂಗ್ ಬೈಕ್ ನಲ್ಲಿದ್ದ ಮತ್ತೊಬ್ಬ ಸೊಹೈಲ್ ಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಬೈಕ್ನ ಕೆಂಪರಾಜು, ತರುಣ್ಗೂ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು: ಆಘಾತಕಾರಿ ಮಾಹಿತಿ ನೀಡಿದ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ
ಸೀತಾ ನದಿಯಲ್ಲಿ ಮುಳುಗಿ ಇಬ್ಬರು ಸಾವು
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿಯ ಸೀತಾ ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಶೃಂಗೇರಿಯಲ್ಲಿ ವೈದ್ಯರಾಗಿದ್ದ ಡಾ. ದೀಪಕ್, ಶಿವಮೊಗ್ಗದಲ್ಲಿ ವ್ಯಾಪಾರಿಯಾಗಿದ್ದ ಶೈನು ಡೇನಿಯಲ್ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆಂದು ಮೂವರು ಗೆಳೆಯರ ತಂಡ ಬಂದಾಗ ದುರಂತ ನಡೆದಿದೆ. ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಸ್ಕೂಟರ್‌ಗೆ ಟೆಂಪೋ ಡಿಕ್ಕಿ, ಸವಾರ ಬಲಿ
ಸ್ಕೂಟರ್‌ಗೆ ಟೆಂಪೋ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಮರಾಜನಗರ ತಾಲೂಕು ಸಂತೇಮರಹಳ್ಳಿಯಲ್ಲಿ ಘಟನೆ ನಡೆದಿದ್ದು, ಸಿಲ್ಕಲ್‌ಪುರದ ರಾಜಣ್ಣ ಎಂಬಾತ ಮೃತಪಟ್ಟಿದ್ದಾನೆ. ಇನ್ನು ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಎಳೆನೀರು ತುಂಬಿಕೊಂಡು ಹೋಗುತ್ತಿದ್ದ ಟೆಂಪೋ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ. ಚಾಮರಾಜನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:00 am, Mon, 26 February 24