Crime News: ಅನ್ಯಕೋಮಿನ ಯುವಕನ ಜೊತೆ ಲವ್: ಮಗಳನ್ನೇ ಕತ್ತು ಸೀಳಿ ಕೊಂದ ಪೋಷಕರು..!

Crime News In Kannada: ಈ ಜೋಡಿ ಜೊತೆಯಾಗಿ ಬಾಳಬೇಕೆಂದು ನಿರ್ಧರಿಸಿದ್ದರು. ಆದರೆ ಇಬ್ಬರ ಪ್ರೀತಿಗೆ ಅಡ್ಡಿಯಾಗಿದ್ದು ಧರ್ಮ. ಇಬ್ಬರೂ ಬೇರೆ ಧರ್ಮದವರಾಗಿದ್ದ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. 

Crime News: ಅನ್ಯಕೋಮಿನ ಯುವಕನ ಜೊತೆ ಲವ್: ಮಗಳನ್ನೇ ಕತ್ತು ಸೀಳಿ ಕೊಂದ ಪೋಷಕರು..!
ಸಾಂದರ್ಭಿಕ ಚಿತ್ರ
Edited By:

Updated on: Jun 01, 2022 | 9:52 PM

ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಎನ್ನುವವರು ಒಂದೆಡೆಯಾದರೆ, ಲವ್ ಸೆಕ್ಸ್ ದೋಖಾ ಸುದ್ದಿಗಳು ಮತ್ತೊಂದೆಡೆ. ಇವೆಲ್ಲದರ ನಡುವೆ ಪ್ರೀತಿಗೆ ಕಣ್ಣಿಲ್ಲ, ನಮ್ಮ ಪ್ರೇಮ ಶಾಶ್ವತ ಎಂದೇಳಲು ಹೊರಟ ಇಬ್ಬರು ಪ್ರೇಮಿಗಳು ದೂರವಾಗಿದ್ದಾರೆ. ಹೀಗೆ ದೂರವಾಗಿದ್ದು ಶಾಶ್ವತವಾಗಿ…ಅದು ಕೂಡ ಹೆತ್ತ ತಂದೆ ತಾಯಿಗಳಿಂದ ಎಂಬುದೇ ಕಠೋರ ಸತ್ಯ. ಹೌದು, ಈ ಘಟನೆ ನಡೆದಿರುವುದು ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ನಾಗಕೊಂಡ ಎಂಬ ಊರಲ್ಲಿ. ಅದೇ ಊರಿನ ರಾಜೇಶ್ವರಿ ಹಾಗೂ ಶೇಕ್ ಅಲೀಂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೆ ಇಬ್ಬರೂ ಜೊತೆಯಾಗಿ ಬಾಳಬೇಕೆಂದು ನಿರ್ಧರಿಸಿದ್ದರು. ಆದರೆ ಇಬ್ಬರ ಪ್ರೀತಿಗೆ ಅಡ್ಡಿಯಾಗಿದ್ದು ಧರ್ಮ. ಇಬ್ಬರೂ ಬೇರೆ ಧರ್ಮದವರಾಗಿದ್ದ ಕಾರಣ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ.  ಹೀಗಾಗಿ ಈ ಜೋಡಿ ಊರು ಬಿಟ್ಟು ಓಡಿ ಹೋಗಿದ್ದರು.

ಅದರಂತೆ ಒಂದೂವರೆ ತಿಂಗಳ ಹಿಂದೆ ಮಹಾರಾಷ್ಟ್ರಕ್ಕೆ ಓಡಿ ಹೋಗಿ ಶೇಕ್ ಅಲೀಂ ಹಾಗೂ ರಾಜೇಶ್ವರಿ ಹೊಸ ಜೀವನ ಆರಂಭಿಸಿದ್ದರು. ಆದರೆ ಇತ್ತ ಆದಿಲಾಬಾದ್​ನಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ರಾಜೇಶ್ವರಿ ಪೋಷಕರು ಪೊಲೀಸರು ದೂರು ನೀಡಿದ್ದರು. ಮೊಬೈಲ್ ಫೋನ್ ನೆಟ್​ವರ್ಕ್​ ಮೂಲಕ ಈ ಜೋಡಿಯನ್ನು ಪತ್ತೆ ಹಚ್ಚಿದ ಪೊಲೀಸರು ಶೇಕ್ ಅಲೀಂರನ್ನು ಬಂಧಿಸಿ, ಮಗಳನ್ನು ಪೋಷಕರಿಗೆ ಒಪ್ಪಿಸಿದ್ದರು.

ಆದರೆ ಅಲ್ಲಿಗೆ ಈ ಪ್ರಕರಣ ಮುಗಿದಿರಲಿಲ್ಲ. ಮಗಳು ಮನೆಗೆ ಬಂದ ಬಳಿಕ ಆಕೆಯ ಮತ್ತು ಪೋಷಕರ ನಡುವೆ ದಿನನಿತ್ಯ ತೀವ್ರ ವಾಗ್ವಾದ ನಡೆಯುತ್ತಿತ್ತು. ಅಲ್ಲದೆ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದೇ ಅವಮಾನ ಎಂದು ಆಕೆಯನ್ನು ಜರಿಯುತ್ತಿದ್ದರು. ಇದರಿಂದ ದಿನ ಕಳೆದಂತೆ ಜಗಳ ತಾರಕ್ಕೇರುತ್ತಾ ಹೋಗಿದೆ. ಮಗಳ ಜಗಳ – ಹೆತ್ತವರ ಆಕ್ರೋಶ ಹೀಗೆ ಮುಂದುವರೆದಿದೆ.

ಇದನ್ನೂ ಓದಿ
Ambassador car 2022: ಹೊಸ ಲುಕ್​ನೊಂದಿಗೆ ಮತ್ತೆ ರಸ್ತೆಗಿಳಿಯಲಿದೆ ಅಂಬಾಸಿಡರ್ ಕಾರು
T20 World Cup: ಟಿ20 ವಿಶ್ವಕಪ್​ನಲ್ಲಿ 20 ತಂಡಗಳ ನಡುವೆ ಸೆಣಸಾಟ..!
Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಅಷ್ಟೇ ಅಲ್ಲದೆ ಮಗಳು ಓಡಿ ಹೋಗಿದ್ದರಿಂದ ಊರವರ ಮುಂದೆ ಅವಮಾನಿತರಾಗಿದ್ದ ಪೋಷಕರು, ಆಕೆಯನ್ನೇ ಮುಗಿಸಿ ಬಿಡಲು ನಿರ್ಧರಿಸಿದ್ದಾರೆ. ಅದರಂತೆ ಬೆಳಗಿನ ಜಾವ 4 ಗಂಟೆಗೆ ರಾಜೇಶ್ವರಿ ಪೋಷಕರು ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಈ ಮರ್ಯಾದಾ ಹತ್ಯೆಯ ವಿಚಾರ ನೆರೆಹೊರೆಯವರಿಂದ ಪೊಲೀಸರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಜೇಶ್ವರಿ ಪೋಷಕರಾದ ಸಮಿತ್ರಿ ಬಾಯಿ ಮತ್ತು ದೇವಿ ಲಾಲ್ ಅವರನ್ನು ಬಂಧಿಸಿದ್ದಾರೆ.

ಬಳಿಕ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ರಾಜೇಶ್ವರಿ ಬೇರೆ ಧರ್ಮದವರನ್ನು ಮದುವೆಯಾಗಿ ಅವಮಾನ ಅನುಭವಿಸಿದ್ದಕ್ಕೆ ಮಗಳ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಆಂಧ್ರ-ತೆಲಂಗಾಣ ಮರ್ಯಾದೆ ಹತ್ಯೆಯಿಂದ ಸುದ್ದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ ದಲಿತ ಯುವಕನನ್ನು ಹೈದಾರಾಬಾದ್​ನಲ್ಲಿ ಯುವತಿಯ ಕುಟುಂಬಸ್ಥರು ಹತ್ಯೆ ಮಾಡಿದ್ದರು. ಇದೀಗ ಮುಸ್ಲಿಂ ಯುವಕನನ್ನು ಪ್ರೀತಿಸಿದ್ದಕ್ಕೆ ಹೆತ್ತ ಪೋಷಕರೇ ಮಗಳ ಕತ್ತು ಸೀಳಿ ಕೊಂದಿರುವ ಸುದ್ದಿ ಕೇಳಿ ಇಡೀ ನಾಗಕೊಂಡ ಊರೇ ಬೆಚ್ಚಿ ಬಿದ್ದಿದೆ.ಅಪರಾಧ

 

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

 

Published On - 9:43 pm, Wed, 1 June 22