ಒಂದು ಕಾಲದಲ್ಲಿ ಭಾರತೀಯ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಾ ಮರೆದಿದ್ದ ಅಂಬಾಸಿಡರ್ ಕಾರು ಇದೀಗ ಹೊಸ ಅವತಾರದೊಂದಿಗೆ ಮತ್ತೆ ರಸ್ತೆಗಿಳಿಯಲಿ ಸಜ್ಜಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ಹಿಂದೂಸ್ಥಾನ್ ಮೋಟಾರ್ಸ್ (Hindustan Motors) ಅಂಬಾಸಿಡರ್ (Ambassador) ಕಾರನ್ನು ಮತ್ತೆ ಉತ್ಪಾದಿಸಲು ಸಿದ್ಧತೆ ಆರಂಭಿಸಿದ್ದು, ಇದಕ್ಕಾಗಿ ಫ್ರೆಂಚ್ ಮೂಲದ ಖ್ಯಾತ ಆಟೋಮೊಬೈಲ್ ಕಂಪನಿ ಪಿಯುಗಿಯೋ (Peugeot) ಜತೆ ಮಾತುಕತೆ ನಡೆಸಿದೆ.
ಈ ಬಾರಿ ಅಂಬಾಸಿಡರ್ ಕಾರನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಪರಿಚಯಿಸಲು ಹಿಂದೂಸ್ಥಾನ್ ಮೋಟಾರ್ಸ್ ಬಯಸಿದ್ದು, ಆ ಮೂಲಕ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿನ ತನ್ನ ಗತವೈಭವನ್ನು ಮರಳಿ ಪಡೆಯುವ ಇರಾದೆಯಲ್ಲಿದೆ. 1990ರ ತನಕ ಅಂಬಾಸಿಡರ್ ಭಾರತದ ನಂಬರ್ 1 ಕಾರು ಎನಿಸಿಕೊಂಡಿತ್ತು. ಆದರೆ ಆ ಬಳಿಕ ಮಾರುತಿ 800 ಆಗಮನದೊಂದಿಗೆ ಅಂಬಾಸಿಡರ್ ಬದಿಗೆ ಸರಿಯಿತು.
ಇದಾಗ್ಯೂ 2014 ರವರೆಗೆ ಉತ್ಪಾದನೆಯಲ್ಲಿದ್ದ ಕಾರಿಗೆ ಹೆಚ್ಚಿನ ಬೇಡಿಕೆಗಳಿರಲಿಲ್ಲ. ಹೀಗಾಗಿ ಹಿಂದೂಸ್ಥಾನ್ ಮೋಟಾರ್ಸ್ ಹೊಸ ಕಾರುಗಳ ಉತ್ಫಾದನೆಯನ್ನು ಸ್ಥಗಿತಗೊಳಿಸಿತ್ತು. ಇದಾಗ್ಯೂ ಇಂದಿಗೂ ಅಂಬಾಸಿಡರ್ ಕಾರುಗಳು ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿದೆ ಎಂಬುದೇ ವಿಶೇಷ. ಇದೀಗ ಮತ್ತೊಮ್ಮೆ ರಸ್ತೆ ರಾಜನಾಗಿ ಎಲೆಕ್ಟ್ರಿಕ್ ಮಾದರಿಯಲ್ಲಿ ಹೊಸ ಅಂಬಾಸಿಡರ್ ಅನ್ನು ಪರಿಚಯಿಸಲು ಹಿಂದೂಸ್ಥಾನ್ ಮೋಟಾರ್ಸ್ ಬಯಸಿದೆ.
ನಾವು ಈಗಷ್ಟೇ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸವನ್ನು ಪ್ರಾರಂಭಿಸಿದ್ದೇವೆ. ಈ ಹ್ಯಾಚ್‌ಬ್ಯಾಕ್ ಆವೃತ್ತಿಯ ಅಂಬಾಸಿಡರ್ ಎಲ್ಲಾ ರೀತಿಯ ವೈಶಿಷ್ಟ್ಯಗಳನ್ನು ಮತ್ತು ಉತ್ತಮ ಒಳಾಂಗಣವನ್ನು ಹೊಂದಿರುತ್ತದೆ. ಈ ಕಾರು ಹೊಸ-ಯುಗದ ಗ್ರಾಹಕರಿಗಾಗಿ ಪರಿಚಯಿಸಲಿದ್ದೇವೆ. ಹಾಗಾಗಿ ಹೊಸ ತಲೆಮಾರು ಇಷ್ಟಪಡುವ ಎಲ್ಲಾ ಫೀಚರ್ಗಳು ಇದರಲ್ಲಿ ಇರಲಿದೆ ಹಿಂದೂಸ್ಥಾನ್ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ್ ಬೋಸ್ ಹೇಳಿದ್ದಾರೆ.
ಸದ್ಯ ಹೊಸ ಅಂಬಾಸಿಡರ್ ಕಾರು ಉತ್ಪಾದನೆಗೆ ಯೂರೋಪಿಯನ್ ಕಂಪನಿಯೊಂದಿಗೆ ಒಟ್ಟು 600 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಉತ್ತಮ ಬೋಸ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹೊಸ ಕಾರಿನ ಸಂಪೂರ್ಣ ಮಾಹಿತಿ ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅಂಬಾಸಿಡರ್ ಎಲೆಕ್ಟ್ರಿಕ್ ಕಾರು ಬರುವುದನ್ನು ಖಚಿತಪಡಿಸಿದ್ದಾರೆ.
ಇದೀಗ ಹೊಸ ಇವಿ ಅಂಬಾಸಿಡರ್ ಕಾರಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ಲುಕ್ ಕಾರು ಪ್ರಿಯರನ್ನು ಸೆಳೆದಿದೆ. ಅದರಲ್ಲೂ ಐಷಾರಾಮಿ ಕಾರುಗಳ ವಿನ್ಯಾಸದಲ್ಲಿರುವ ಹೊಸ ಅಂಬಾಸಿಡರ್ ಕಾರು ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದರೆ ಅಚ್ಚರಿಪಡಬೇಕಿಲ್ಲ.
Published On - 6:16 pm, Wed, 1 June 22