ಮಂಗಳೂರು, (ಜನವರಿ 16): ರಾಮಮಂದಿರ ಮಂತ್ರಾಕ್ಷತೆ ವಿತರಣಾ (Ayodhya Ram Mandir Mantrakshate) ಸಂಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆದಿದೆ. ಮುಂಡೂರು ಗ್ರಾಮದಲ್ಲಿ ಅಕ್ಷತೆ ಹಂಚುವ ಹೊಣೆ ಹೊತ್ತಿದ್ದ ಸಂತೋಷ್ ಮೇಲೆ ಸ್ಥಳೀಯ ನಿವಾಸಿ ಧನಂಜಯ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದಾರೆ ಆರೋಪಿಸಲಾಗಿದೆ. ಗಲಾಟೆ ತಡೆಯಲು ಬಂದ ಸಂತೋಷ್ ತಾಯಿ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಂತೋಷ್ ಅವರು ಮನೆ ಮನೆಗೆ ಅಕ್ಷತೆ ಹಂಚುವುದಕ್ಕೆ ಒಂದು ಗುಂಪು ವಿರೋಧವ್ಯಕ್ತಪಡಿಸಿತ್ತು. ಇದೇ ದ್ವೇಷದಿಂದ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಸಂತೋಷ್ ಹಾಗೂ ಆತನ ತಾಯಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಜೀವ ಮಠಂದೂರು, ಇದೊಂದು ರಾಜಕೀಯ ಪ್ರೇರಿತ ಹಲ್ಲೆಯಾಗಿದೆ. ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು.
ಇನ್ನು ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.