Bangalore Crime: ಬೆಂಗಳೂರಿನಲ್ಲಿ ಲೆಹೆಂಗಾದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 3 ಕೆಜಿ ಡ್ರಗ್ಸ್ ವಶಕ್ಕೆ
Bengaluru Crime News: ಬೆಂಗಳೂರಿನಲ್ಲಿ ಸುಮಾರು 3 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಾಗಿದ್ದ ಡ್ರಗ್ಸ್ ಅನ್ನು ಮೂರು ಲೆಹೆಂಗಾಗಳಲ್ಲಿ ಮರೆಮಾಚಲಾಗಿತ್ತು.
ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ ದಂಧೆ ಹೆಚ್ಚುತ್ತಲೇ ಇದೆ. ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳು ತಮಗೆ ಸಿಕ್ಕ ಮಾಹಿತಿಯನ್ನು ಆಧರಿಸಿ, ಬೆಂಗಳೂರಿನಲ್ಲಿ ಸುಮಾರು 3 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಾಗಿದ್ದ ಡ್ರಗ್ಸ್ ಅನ್ನು ಮೂರು ಲೆಹೆಂಗಾಗಳಲ್ಲಿ ಮರೆಮಾಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಎನ್‌ಸಿಬಿ ಬೆಂಗಳೂರಿನ ವಲಯ ನಿರ್ದೇಶಕ ಅಮಿತ್ ಘಾವಟೆ ನೇತೃತ್ವದ ತಂಡ ಅಕ್ಟೋಬರ್ 21ರಂದು ಪಾರ್ಸೆಲ್ ಅನ್ನು ತಡೆಹಿಡಿದು ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಮಡಿಚಿಟ್ಟಿದ್ದ ಲೆಹೆಂಗಾವನ್ನು ಬಿಚ್ಚಿ ನೋಡಿದಾಗ ಅವುಗಳ ಮಡಿಕೆಗಳಲ್ಲಿ ಈ ಡ್ರಗ್ಸ್ ಅನ್ನು ಇರಿಸಲಾಗಿತ್ತು. ಬ್ಯಾಗ್ ಅನ್ನು ಸ್ಕ್ಯಾನ್ ಮಾಡಿದಾಗ ಈ ನಿಷೇಧಿತ ವಸ್ತು ಬಗ್ಗೆ ಸುಳಿವು ಸಿಕ್ಕಿತ್ತು.
ಪಾರ್ಸೆಲ್ ಅನ್ನು ಆಂಧ್ರಪ್ರದೇಶದ ನರಸಾಪುರಂನಿಂದ ಬುಕ್ ಮಾಡಲಾಗಿತ್ತು. ಆ ಪಾರ್ಸೆಲ್ ಅನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಿತ್ತು. ಆದರೆ, ಈ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಈ ಡ್ರಗ್ಸ್ ಸಾಗಿಸುತ್ತಿದ್ದವರನ್ನು ಎನ್‌ಸಿಬಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಎರಡು ದಿನಗಳ ಕಾಲ ತನಿಖೆ ನಡೆಸಿದ ಚೆನ್ನೈನಲ್ಲಿರುವ ಎನ್‌ಸಿಬಿ ತಂಡಕ್ಕೆ ಮಾಹಿತಿ ನೀಡಲಾಗಿದೆ. ಪಾರ್ಸೆಲ್ ಕಳುಹಿಸಿದವರ ನಿಜವಾದ ವಿಳಾಸವನ್ನು ಗುರುತಿಸಿ ಶುಕ್ರವಾರ ಅವನನ್ನು ಬಂಧಿಸಲಾಗಿದೆ. ಪಾರ್ಸೆಲ್ ಕಳುಹಿಸಲು ನಕಲಿ ವಿಳಾಸಗಳು ಮತ್ತು ದಾಖಲೆಗಳನ್ನು ಬಳಸಿರುವುದು ಕಂಡುಬಂದಿದೆ.
ಬೆಂಗಳೂರಿನಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಾಕಷ್ಟು ಜನರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಕಳೆದ 1 ವರ್ಷದಲ್ಲಿ ಬೆಂಗಳೂರಿನಲ್ಲಿ ಒಟ್ಟು 3255 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇವಿಷ್ಟು ಪೊಲೀಸರು ಮತ್ತು ಎನ್‌ಸಿಬಿ ಅಧಿಕಾರಿಗಳ ಕೈಗೆ ಸಿಕ್ಕ ಡ್ರಗ್ಸ್ ಆದರೆ ಇನ್ನು ಪೊಲೀಸರ ಗಮನಕ್ಕೆ ಬಾರದೆ ಎಷ್ಟು ಡ್ರಗ್ಸ್ ಹರಿದಾಡಿದೆಯೋ ಗೊತ್ತಿಲ್ಲ.
ಇದನ್ನೂ ಓದಿ: ನಿಂತಿಲ್ಲ ಡ್ರಗ್ಸ್ ಹಾವಳಿ: ಡಾರ್ಕ್ ವೆಬ್ ಮಾದಕ ಜಾಲದಿಂದ ಕೊರ್ಟ್ ದಾಖಲೆಯೆಂದು ಸ್ಪೀಡ್ ಪೋಸ್ಟ್ ಮೂಲಕ ಡ್ರಗ್ಸ್ ರವಾನೆ!