ಬೆಂಗಳೂರು, ಡಿಸೆಂಬರ್ 02: ರೈತರ ಹೆಸರಲ್ಲಿ ದಾಖಲೆ ಇಲ್ಲದೆ 460 ಬ್ಯಾಗ್ ಅಂದರೆ 11.500 ಕೆಜಿ ಅಡಿಕೆ (areca nut) ಕಳ್ಳಸಾಗಣೆ ಮಾಡಿರುವಂತಹ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳಿಂದ ಸದ್ಯ ಅಡಿಕೆಯನ್ನು ವಶಕ್ಕೆ ಪಡೆದಿದ್ದು, 24.26 ಲಕ್ಷ ರೂ. ದಂಡ ವಿಧಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ಭೇದಿಸಿದ್ದಾರೆ. ಅಸ್ಸಾಂ ಹಾಗೂ ಮಣಿಪುರದಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿಗೆ ಅಡಿಕೆ ಸಾಗಾಟ ಮಾಡಲಾಗುತಿತ್ತು. ಮಯನ್ಮಾರ್ ನಿಂದ ಅಡಿಕೆಯನ್ನ ಕಳ್ಳಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಅಸ್ಸಾಂ, ಮಣಿಪುರ ಹಾಗೂ ಮಧ್ಯಪ್ರದೇಶ ಜಿಎಸ್ಟಿ ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ಕಡಿಮೆ ಗುಣಮಟ್ಟ ಹಾಗೂ ಕಡಿಮೆ ಬೆಲೆಯ ಅಡಿಕೆ ತಂದು ಸ್ಥಳೀಯ ಅಡಿಕೆಯಲ್ಲಿ ಕಲಬೆರಕೆ ಮಾಡುವ ಸಂಚು ರೂಪಿಸಲಾಗಿದೆ.
ಹಾಸನ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ತಾಲ್ಲೂಕಿನ ಯಸಳೂರು ಆರ್‌ಎಫ್‌ಓ ಜಗದೀಶ್ ಅಮಾನತು ಆಗಿದ್ದಾರೆ. ಶಿಸ್ತು ಪ್ರಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಬ್ರಿಜೇಶ್ ಕುಮಾರ್ ದಿಕ್ಷಿತ್‌ರಿಂದ ಆದೇಶ ಹೊರಡಿಸಲಾಗಿದೆ. ಕಾಮಗಾರಿಯೊಂದರ ವೇಳೆ ವಶಕ್ಕೆ ಪಡೆದಿದ್ದ ಜೆಸಿಬಿ ಬಿಡುಗಡೆಗಾಗಿ 1.20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೆಆರ್ ಪುರಂ ಠಾಣೆ PSI ಪಿಸ್ತೂಲ್ ಕಳವು ಮಾಡಿದ್ದ 3 ಆರೋಪಿಗಳ ಬಂಧನ
ಬಾಚೀಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣ ಮಾಡುವ ವೇಳೆ ಸೀಜ್ ಮಾಡಲಾಗಿದೆ. ಜೆಸಿಬಿ ವಶಪಡಿಸಿಕೊಂಡಿದ್ದ ಜಗದೀಶ್ ಎಫ್‌ಐಆರ್ ದಾಖಲಿಸಿದ್ದರು. ಆರ್‌ಎಫ್‌ಓಯಿಂದ ಅಧಿಕಾರ ದುರ್ಬಳಕೆ ಆರೋಪದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಹಿನ್ನಲೆ ಅಧಿಕಾರಿಗಳು ವರದಿ ಆಧರಿಸಿ ಅಮಾನತು ಮಾಡಿದ್ದಾರೆ.
ಗದಗ: ಶಾರ್ಟ್ ಸರ್ಕ್ಯೂಟ್ನಿಂದ ಕಟಿಂಗ್ ಶಾಪ್ಗೆ ಬೆಂಕಿ ತಗುಲಿರುವಂತಹ ಘಟನೆ ನಗರದ ರಡ್ಡಿ ಕಾಲೇಜ್ ಕಾಂಪ್ಲೆಕ್ಸ್ನಲ್ಲಿದ್ದ ಕಟೀಂಗ್ ಶಾಪ್ನಲ್ಲಿ ನಡೆದಿದೆ. ಶ್ರೀನಿವಾಸ್ ರಾಂಪೂರ ಎಂಬವರಿಗೆ ಸೇರಿದ ಕಟೀಂಗ್ ಶಾಪ್. ಸಾವಿರಾರು ರೂ. ಮೌಲ್ಯದ ಸಾಮಗ್ರಿಗಳು ಹಾನಿ ಆಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.