Bengaluru: ದೇವಸ್ಥಾನದ ಬಳಿ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರಿಗೆ ಚಾಕು ಇರಿತ! ಮೂವರು ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಗಣಪತಿ ದೇವಸ್ಥಾನದ ಬಳಿ ಕಟ್ಟೆ ಮೇಲೆ ಕುಳಿತ ಇಬ್ಬರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿ ಗಾಯಗೊಳಿಸಿದ್ದು, ಬಿಡಿಸಲು ಬಂದವನ ಮೇಲೂ ಚಾಕುವಿನಿಂದ ಗಾಯಗೊಳಿಸಿದ್ದಾನೆ. ಮಾನಸಿಕ ಅಸ್ವಸ್ಥನ ಕ್ರೌರ್ಯಕ್ಕೆ ಆಸ್ಪತ್ರೆಗೆ ದಾಖಲಾದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ.
ಬೆಂಗಳೂರು: ತಮ್ಮಷ್ಟಕ್ಕೆ ತಾವು ಕಟ್ಟೆ ಮೇಲೆ ಕುಳಿತಿದ್ದ ಇಬ್ಬರಿಗೆ ಚಾಕುವಿನಿಂದ ಇರಿದು (Knife stabbing) ಓರ್ವನನ್ನು ಹತ್ಯೆಗೈದ ಘಟನೆ ಮೆಜೆಸ್ಟಿಕ್ನಲ್ಲಿರುವ ಗಣಪತಿ ದೇವಸ್ಥಾನದ ಬಳಿ ಇಂದು (ಮಾರ್ಚ್ 23) ನಡೆದಿದೆ. ದೇವಸ್ಥಾನದ ಬಳಿ ಇರುವ ಕಟ್ಟೆ ಮೇಲೆ ಇಬ್ಬರು ಸುಮ್ಮನೆ ಕುಳಿತಿದ್ದಾಗ ಮಾನಸಿಕ ಅಸ್ವಸ್ಥನಾಗಿರುವ ಗಣೇಶ ಎಂಬ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಬಿಡಿಸಲು ಬಂದ ವ್ಯಕ್ತಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಪ್ಪಾರಪೇಟೆ ಪೊಲೀಸ್ ಠಾಣಾ ಪೊಲೀಸರು ಮೂವರು ಗಾಯಾಳುಗಳನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಓರ್ವ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮಲ್ಲಿನಾಥ ಬಿರಾದಾರ್ ಮೃತಪಟ್ಟ ದುರ್ದೈವಿ.
ಸಂಜೆ 5.50 ರ ಸುಮಾರಿಗೆ ನಡೆದ ಈ ಚಾಕು ಇರಿತ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ಮೃತಪಟ್ಟ ವ್ಯಕ್ತಿ ಸೇರಿದಂತೆ ಉಳಿದ ಇಬ್ಬರು ಅಡುಗೆ ಕೆಲಸ ಮಾಡುವವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸಿಪಿ ಕೆ.ಸಿ.ಗಿರಿ ಮತ್ತು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉಪ್ಪಾರಪೇಟೆ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಮತ್ತೊಬ್ಬ ಯುವಕನಿಗೆ ಚಾಕು ಇರಿತ!
ಬೆಂಗಳೂರು ನಗರದಲ್ಲಿ ಮತ್ತೊಬ್ಬ ಯುವಕನಿಗೆ ಚಾಕು ಇರಿದ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ತರುಣ್ ಎಂಬಾತನ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದು, ಸ್ಥಳಕ್ಕೆ ಗೋವಿಂದರಾಜನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 pm, Thu, 23 March 23