ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದ ಬೆಂಗಳೂರು ಚಹಾ ಮಾರಾಟಗಾರ; ಅಪಹರಿಸಿ 15 ಲಕ್ಷ ರೂ. ಎಗರಿಸಿದ ಸ್ನೇಹಿತರು
Bangalore Crime News; ಮಣಿಕಂಠ ಅವರನ್ನು ಆಗಸ್ಟ್ 5 ರಂದು ಬೆಳಿಗ್ಗೆ 11 ರಿಂದ ಆಗಸ್ಟ್ 6 ರ ಬೆಳಿಗ್ಗೆ 8 ರ ನಡುವೆ ಹಲವು ಕಡೆ ನಿರ್ಜನ ಪ್ರದೇಶಗಳಿಗೆ ಕರೆದೊಯ್ದ ಆರೋಪಿಗಳು ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದರು. ಕೊನೆಯಲ್ಲಿ ನೆಲಮಂಗಲದ ರೆಸಾರ್ಟ್ಗೆ ಕರೆದೊಯ್ದು ಅಲ್ಲಿ ದಿಗ್ಬಂಧನ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಚಹಾ ಮಾರಾಟಗಾರೊಬ್ಬರು (Bengaluru tea vendor) ಗೋವಾ ಕ್ಯಾಸಿನೋದಲ್ಲಿ (Goa casino) 25 ಲಕ್ಷ ರೂ. ಗೆದ್ದು ಸಂಭ್ರಮಿಸಿದ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ತಿಲಕ್ ಎಂ ಮಣಿಕಂಠ ಎಂಬ ಚಹಾ ಮಾರಾಟಗಾರ ಆಗಸ್ಟ್ 1ರಂದು ಹಣ ಗೆದ್ದಿದ್ದರು. ಆದರೆ, ಅವರ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಸ್ನೇಹಿತರೇ ಅವರನ್ನು ಅಪಹರಿಸಿ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ರೂ. ಎಗರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂದ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಅಪಹರಣ, ಸುಲಿಗೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಸೆಕ್ಷನ್ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಜುಲೈ 30 ರಂದು ಮಣಿಕಂಠ ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ಹೋಗಿದ್ದರು. ಆಗ 4 ಲಕ್ಷ ರೂ. ಜತೆಗೆ ಇಟ್ಟುಕೊಂಡಿದ್ದರು. ಆಗಸ್ಟ್ 1 ರಂದು ಪಣಜಿಯ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೊದಲ್ಲಿ ಮಣಿಕಂಠ 25 ಲಕ್ಷ ರೂ. ಗೆದ್ದಿದ್ದರು. ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಆದರೆ, ಈ ವಿಷಯವನ್ನು ಅವರು ಸ್ನೇಹಿತರಿಗೆ ತಿಳಿಸಿರಲಿಲ್ಲ ಎಂದು ಎಂದು ಪೊಲೀಸರು ಹೇಳಿದ್ದಾರೆ.
ನನ್ನ ಸ್ನೇಹಿತರಿಗೆಹಣ ಗೆದ್ದ ವಿಚಾರ ತಿಳಿಸಿರಲಿಲ್ಲ. ರಹಸ್ಯ ಕಾಪಾಡಿಕೊಂಡಿದ್ದೆ ಎಂದು ಮಣಿಕಂಠ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಣಿಕಂಠ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಪ್ರಕಾರ, ಅವರು ಬೆಂಗಳೂರಿಗೆ ಹಿಂದಿರುಗಿದ ಒಂದು ದಿನದ ನಂತರ ಆಗಸ್ಟ್ 5 ರಂದು ಅಂಗಡಿಯೊಂದರ ಬಳಿ ನಿಂತು ಧೂಮಪಾನ ಮಾಡುತ್ತಿದ್ದರು. ಆಗ ಅವರ ಸ್ನೇಹಿತರಾದ ಕಾರ್ತಿಕ್, ಪಾಂಡು, ಈಶ್ವರ್, ನಿಶ್ಚಲ್ ಮತ್ತು ಇತರರು ಬಳಿಗೆ ಬಂದು ತಮ್ಮ ಜತೆ ಬರುವಂತೆ ಹೇಳಿದರು. ಸ್ವಲ್ಪ ಹೊತ್ತು ಕಳೆದ ನಂತರ ಬರುತ್ತೇನೆ ಎಂದರೂ ಕೇಳದೆ, ಬಲವಂತವಾಗಿ ಕಾರಿನಲ್ಲಿ ಹತ್ತಿಸಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೊಬೈಲ್ ಬ್ಯಾಂಕಿಂಗ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ಮಣಿಕಂಠ ಅವರನ್ನು ಆಗಸ್ಟ್ 5 ರಂದು ಬೆಳಿಗ್ಗೆ 11 ರಿಂದ ಆಗಸ್ಟ್ 6 ರ ಬೆಳಿಗ್ಗೆ 8 ರ ನಡುವೆ ಹಲವು ಕಡೆ ನಿರ್ಜನ ಪ್ರದೇಶಗಳಿಗೆ ಕರೆದೊಯ್ದ ಆರೋಪಿಗಳು ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದರು. ಕೊನೆಯಲ್ಲಿ ನೆಲಮಂಗಲದ ರೆಸಾರ್ಟ್ಗೆ ಕರೆದೊಯ್ದು ಅಲ್ಲಿ ದಿಗ್ಬಂಧನ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿದೇಶಿ ಉಡುಗೊರೆ ಹಗರಣ: ಫೇಸ್ ಬುಕ್ ಸ್ನೇಹಿತರಿಂದ ಬೆಂಗಳೂರಿನ ವ್ಯಕ್ತಿಗೆ 5 ಲಕ್ಷ ರೂ ವಂಚನೆ
ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ಮಣಿಕಂಠ, ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 365 (ಅಪಹರಣ), 384 (ಸುಲಿಗೆ), 347 (ಆಸ್ತಿಯನ್ನು ಸುಲಿಗೆ ಮಾಡಲು ಅಪಹರಿಸುವುದು), 324 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಗಾಯಗೊಳಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಹನುಮತನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Thu, 10 August 23