Hit and Run: ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಸ್ಥಳದಲ್ಲೇ ಸಾವು: ಮತ್ತಿಬ್ಬರಿಗೆ ಗಾಯ
ಹಿಟ್ ಅಂಡ್ ರನ್ಗೆ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಸಿಲಿಕಾನ್ ಸಿಟಿಯ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ.
ಬೆಂಗಳೂರು: ಹಿಟ್ ಅಂಡ್ ರನ್ಗೆ (Hit and Run) ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಸಿಲಿಕಾನ್ ಸಿಟಿಯ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ನಡೆದಿದೆ. ಮೃತ ವ್ಯಕ್ತಯನ್ನು ಮಾಜಿದ್ ಖಾನ್ (39) ಎಂದು ಗುರುತಿಸಲಾಗಿದೆ. ಅತೀ ವೇಗವಾಗಿ ಬಂದ ಕಾರ್ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ದ್ವಿಚಕ್ರ ವಾಹನ ಸವಾರನ ತಲೆ ಮೇಲೆ ಕಾರು ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಪರಿಶೀಲನೆ ಮಾಡಿದರು. ಘಟನೆಯಿಂದ ಕೆಲಕಾಲ ನೃಪತುಂಗ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಡೆತ್ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಚಿತ್ರದುರ್ಗ: ಡೆತ್ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಣೇಶ್ ನಾಯ್ಕ್(21) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಗಣೇಶ್ ನಾಯ್ಕ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇವರಿಬ್ಬರ ಪ್ರೀತಿಗೆ ಮನು ಎಂಬುವನು ಅಡ್ಡಿ ಆಗಿದ್ದಾನೆ. ನನ್ನ ಮೇಲೆ ಅನೇಕ ಬಾರಿ ಹಲ್ಲೆಗೈದು ಮನು ದೌರ್ಜನ್ಯ ನಡೆಸಿದ್ದಾನೆ. ಬಳಿಕ ಪ್ರೀತಿಸುತ್ತಿದ್ದ ಯುವತಿಯೂ ಕಾಲ್, ಮೆಸೇಜ್ ನಿಲ್ಲಿಸಿದಳು. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗ್ತಿದ್ದೇನೆಂದು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ನನ್ನ ಸಾವಿಗೆ ಮನು ಕಾರಣ ಎಂದು ಮೃತ ಗಣೇಶ್ ಆರೋಪಿಸಿದ್ದಾನೆ. ಆರೋಪಿ ಬಂಧನಕ್ಕೆ ಆಗ್ರಹಿಸಿ ಮೃತನ ಸಂಬಂಧಿಕರಿಂದ ಜಿಲ್ಲೆಯ ಹಿರಿಯೂರು ಪೊಲೀಸ್ ಠಾಣೆ ಮುಂದೆ ಧರಣಿ ಮಾಡಲಾಗುತ್ತಿದೆ.
ಇದನ್ನೂ ಓದಿ: ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್
ನೀರು ತರಲು ಹೋಗಿ ಹೊಂಡದಲ್ಲಿ ಬಿದ್ದು ಸಹೋದರರು ಸಾವು
ವಿಜಯನಗರ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವಂತಹ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ನಡೆದಿದೆ. ಬನ್ನಿಕಲ್ಲು ಗ್ರಾಮದ ಅಭಿ (15), ಜಿತೇಂದ್ರ (8) ಮೃತರು. ಭಾನುವಾರ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಪಾಲಕರ ಜೊತೆ ಮಕ್ಕಳು ಮುಸುಕಿನ ಜೋಳದ ಸೊಪ್ಪೆ ಕೊಯ್ಯಲು ತೆರಳಿದ್ದರು. ಈ ವೇಳೆ ಊಟಕ್ಕೆ ನೀರು ತರಲು ತಮ್ಮ ಹೊಲದ ಪಕ್ಕದ ನಾಗರಾಜ ಎನ್ನುವವರ ಕೃಷಿ ಹೊಂಡಕ್ಕೆ ಜಿತೇಂದ್ರ ತೆರಳಿದ್ದು, ಕಾಲುಜಾರಿ ಹೊಂಡದಲ್ಲಿ ಬಿದ್ದಿದ್ದಾನೆ.
ಈತನನ್ನು ರಕ್ಷಿಸಲು ಹೋದ ಅಭಿ ಸಹ ನೀರು ಪಾಲಾಗಿದ್ದಾನೆ. ಬಹು ಹೊತ್ತಿನವರೆಗೂ ಮಕ್ಕಳು ಬಾರದಿದ್ದಾಗ ಸಂಶಯಗೊಂಡ ಪಾಲಕರು ಹೊಂಡದ ಬಳಿ ತೆರಳಿ ನೋಡಿದಾಗ ಮಕ್ಕಳು ಹೊಂಡದ ಪಾಲಾಗಿರುವುದು ಪತ್ತೆಯಾಗಿದೆ. ಒಂದೇ ಕುಟುಂಬದ ಅಣ್ಣತಮ್ಮಂದಿರು ಸಾವಿಗೀಡಾದ ಹಿನ್ನೆಲೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು. ಈ ಕುರಿತು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ನೇಣಿಗೆ ಶರಣು
ರಸ್ತೆ ಅಪಘಾತದಲ್ಲಿ ಆರ್ಟಿಒ ಸಿಬ್ಬಂದಿ ಸಾವು
ರಾಯಚೂರು: ಸ್ಕಾರ್ಪಿಯೋ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಆರ್ಟಿಒ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಆರ್ಟಿಒ ಸರ್ಕಲ್ ಸಮೀಪ ನಡೆದಿದೆ. ಆರ್ಟಿಒ ಕಂಪ್ಯೂಟರ್ ಆಪರೇಟರ್ ಚಂದ್ರಕಾಂತ್(34) ಮೃತ ದುರ್ದೈವಿ. ಬೈಕ್ನ ಹಿಂಬದಿ ಸವಾರ ನಿಲೇಶ್ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕಾರ್ಪಿಯೋ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Mon, 6 February 23