Kanakapura: ಕನಕಪುರದ ಬಾಲಕ ನಾಪತ್ತೆಯಾಗಿ 6 ತಿಂಗಳಾಯ್ತು! ಇಬ್ಬರು ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್: ಸಲಿಂಗಕಾಮ ಕಾರಣವಾಯ್ತಾ?
Boy missing: ಒಬ್ಬ ಆರೋಪಿ ವೃತ್ತಿಯಲ್ಲಿ ವಕೀಲನಾಗಿದ್ದರಿಂದ ಯಾವುದೇ ಸುಳಿವು ಸಿಗಬಾರದು ಎಂದು ಸಾಕಷ್ಟು ಪ್ಲಾನ್ ಮಾಡಿ ಕೊಲೆ ಮಾಡಿ ಎಸೆಯಲಾಗಿದೆ. ಇದುವರೆಗೂ ಕೊಲೆ ರಹಸ್ಯ ಬಾಯಿ ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಬ್ರೈನ್ ಮ್ಯಾಪಿಂಗ್ ಟೆಸ್ಟ್ ಗೆ ಮುಂದಾಗಿದ್ದು, ಪಾಲಿಗ್ರಾಫಿ ಹಾಗೂ ಬ್ರೈನ್ ಮ್ಯಾಪಿಂಗ್ ಟೆಸ್ಟ್ ಮಾಡಲಾಗಿದೆ.
ಆ ಮಹಿಳೆಗೆ ಆತ ಒಬ್ಬನೇ ಮಗ. ಆದರೆ ಕಳೆದ ಆರು ತಿಂಗಳಿಂದ ಆ ಬಾಲಕನ ಸುಳಿವು ಇಲ್ಲ. ಬಾಲಕ ನಾಪತ್ತೆ (Boy missing) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ನಡೆಸಿ, ನಂತರ ಇಬ್ಬರನ್ನೂ ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದರೆ ಇದುವರೆಗೂ ಬಾಲಕನ ಸುಳಿವು ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಬಾಲಕನ ಪತ್ತೆಗಾಗಿ ಇಬ್ಬರು ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್ ಮಾಡಲಾಗಿದೆ. ಹೌದು ಕಳೆದ ಆರು ತಿಂಗಳಿಂದ ನಾಪತ್ತೆಯಾಗಿರೋ ಬಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪ್ರಕರಣ ಸಂಬಂಧ ಬಂಧನವಾಗಿರೋ ಇಬ್ಬರು ಆರೋಪಿಗಳ ಬ್ರೈನ್ ಮ್ಯಾಪಿಂಗ್ (Brain mapping) ಗೆ ಪೊಲೀಸರು ಮುಂದಾಗಿದ್ದಾರೆ. ರಾಮನಗರ (Ramanagara) ಜಿಲ್ಲೆ ಕನಕಪುರ (Kanakapura) ತಾಲೂಕಿನ ಎಂ ಜಿ ರಸ್ತೆಯ ನಿವಾಸಿ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಆಶಾ ಎಂಬ ಮಹಿಳೆಯ 17 ವರ್ಷದ ಮಗ ಮೇ 19 ರ ರಾತ್ರಿಯಿಂದ ನಾಪತ್ತೆಯಾಗಿದ್ದ.
ಎರಡು ಮೂರು ದಿನ ಹುಡುಕಾಟ ನಡೆಸಿದ್ರು ಮಗನ ಸುಳಿವು ಪತ್ತೆಯಾಗಲಿಲ್ಲ. ಹೀಗಾಗಿ ಆಶಾ ಕನಕಪುರ ಪುರ ಠಾಣೆಯಲ್ಲಿ ಮೇ 24ರಂದು ದೂರು ನೀಡಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕನಕಪುರ ತಾಲೂಕಿನ ಹಳೇಗಬ್ಬಾಡಿ ಗ್ರಾಮದ ವಕೀಲ ಶಂಕರೇಗೌಡ ಹಾಗೂ ಮೈಸೂರು ಮೂಲದ ಅರುಣ್ ಎಂಬಾತನನ್ನ ವಶಕ್ಕೆ ಪಡೆದು ಸಾಕಷ್ಟು ವಿಚಾರಣೆ ನಡೆಸಿದ್ರು. ಆದರೆ ಇಬ್ಬರಿಂದಲೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಆನಂತರ ಇಬ್ಬರನ್ನ ಜೈಲಿಗೂ ಸಹ ಕಳುಹಿಸಿಲಾಗಿದೆ.
ಸದ್ಯ ಇಬ್ಬರೂ ಆರೋಪಿಗಳು ರಾಮನಗರ ಜೈಲಿನಲ್ಲಿ ಇದ್ದಾರೆ. ಬೇರೆ ಬೇರೆ ಆಯಾಮಗಳಲ್ಲೂ ಕೂಡ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಇದುವರೆಗೂ ಬಾಲಕನ ಸುಳಿವು ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಜೈಲಿನಲ್ಲಿ ಇರೋ ಇಬ್ಬರು ಆರೋಪಿಗಳಿಗೆ ಕೋರ್ಟ್ ನಿಂದ ಅನುಮತಿ ಪಡೆದು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲದಲ್ಲಿ ಬ್ರೈನ್ ಮ್ಯಾಪಿಂಗ್ ಮಾಡಿಸಲಾಗಿದೆ ಎಂದು ರಾಮನಗರ ಎಸ್ ಪಿ ಸಂತೋಷ್ ಬಾಬು ಕೆ ತಿಳಿಸಿದ್ದಾರೆ.
ಬಾಲಕನ ಹತ್ಯೆ ಮಾಡಿ ನದಿಗೆ ಎಸೆಯಲಾಯ್ತಾ? ಆರೋಪಿಗಳಿಗೆ ಪಾಲಿಗ್ರಾಫಿ-ಬಿಇಓಎಸ್ ಟೆಸ್ಟ್:
ಅಂದಹಾಗೆ ವೃತ್ತಿಯಲ್ಲಿ ವಕೀಲನಾಗಿದ್ದ ಶಂಕರೇಗೌಡ, ಈಗಾಗಲೇ ಮದುವೆಯಾಗಿ ಮಕ್ಕಳು ಇದ್ದರು ಸಹಾ ಸಲಿಂಗಕಾಮದ ಚಟಕ್ಕೆ (homosexual suspect) ಬಿದ್ದಿದ್ದ ಎನ್ನಲಾಗಿದೆ. ಇದೇ ರೀತಿ ಮೈಸೂರು ಮೂಲದ ಅರುಣ್ ಜೊತೆ ಸಲಿಂಗಕಾಮ ನಡೆಸುತ್ತಿದ್ದ. ಇನ್ನು ತನ್ನ ಕಚೇರಿಯಲ್ಲಿ ಕೆಲಸವಿದೆ ಎಂದು ಬಾಲಕನನ್ನ ಕರೆಸಿಕೊಂಡು, ಬಾಲಕನಿಗೆ ಸಲಿಂಗಕಾಮಕ್ಕೆ ಒತ್ತಾಯ ಮಾಡಿ, ಅದಕ್ಕೆ ಬಾಲಕ ಒಪ್ಪದೇ ಇದ್ದಾಗ ಆತನನ್ನ ಇಬ್ಬರೂ ಸೇರಿ ಹತ್ಯೆ ಮಾಡಿ ನದಿಯೊಂದಕ್ಕೆ ಎಸೆಯಲಾಗಿದೆ ಎಂಬ ಅನುಮಾನ ಪೊಲೀಸರದ್ದು.
ವೃತ್ತಿಯಲ್ಲಿ ವಕೀಲನಾಗಿದ್ದರಿಂದ ಯಾವುದೇ ಸುಳಿವು ಸಿಗಬಾರದು ಎಂದು ಸಾಕಷ್ಟು ಪ್ಲಾನ್ ಮಾಡಿ ಕೊಲೆ ಮಾಡಿ ಎಸೆಯಲಾಗಿದೆ. ಇನ್ನು ಕೊಲೆ ರಹಸ್ಯ ಬಾಯಿ ಬಿಟ್ಟರೆ ತೊಂದರೆ ಆಗುತ್ತದೆ ಎಂದು ಯಾವುದೇ ರಹಸ್ಯವನ್ನ ಇದುವರೆಗೂ ಬಾಯಿ ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಬ್ರೈನ್ ಮ್ಯಾಪಿಂಗ್ ಟೆಸ್ಟ್ ಗೆ ಮುಂದಾಗಿದ್ದು, ಪಾಲಿಗ್ರಾಫಿ ಹಾಗೂ ಬಿಇಓಎಸ್( ಬ್ರೈನ್ ಎಲೆಕ್ಟ್ರಿಕಲ್ ಆಸಿಲೇಷನ್ ಸಿಗ್ನೇಚರ್ ಫ್ರೋಪೆಲಿಂಗ್) ಟೆಸ್ಟ್ ಮಾಡಲಾಗಿದೆ.
ಇನ್ನು ಬಿಇಓಎಸ್ ಟೆಸ್ಟ್ ಆರೋಪಿಗಳಿಗೆ ಏನೂ ಇಂಜೆಕ್ಟ್ ಮಾಡದೇ, ಪ್ರಶ್ನೆ ಹಾಗೂ ಚಿತ್ರಗಳ ಆಧಾರದ ಮೇಲೆ ಬ್ರೈನ್ ಯಾವ ರೀತಿ ರಿಯಾಕ್ಟ್ ಮಾಡುತ್ತದೆ. ಮಾನಸಿಕ ಸ್ಥಿತಿ ಯಾವ ರೀತಿ ಮಾಡುತ್ತದೆ. ಕ್ರೈಂ ನಲ್ಲಿ ಯಾವ ರೀತಿ ಭಾಗಿಯಾಗಿದ್ದಾನೆ. ಯಾವ ರೀತಿ ಕ್ರೈಂ ಮಾಡಿರಬಹುದು ಎಂಬುದನ್ನ ತಿಳಿಯಲು ಸಹಾಯವಾಗಲಿದೆ ಎನ್ನುತ್ತಾರೆ ಸಂತೋಷ್ ಬಾಬು ಕೆ, ರಾಮನಗರ ಎಸ್ ಪಿ.
ಒಟ್ಟಾರೆ ಬಾಲಕನ ಪತ್ತೆಗಾಗಿ ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್ ಮಾಡಿಸಲಾಗಿದ್ದು, ಇನ್ನೇನೆ ಕೆಲವೇ ದಿನಗಳಲ್ಲಿ ಬ್ರೈನ್ ಮ್ಯಾಪಿಂಗ್ ವರದಿ ಪೊಲೀಸರ ಕೈಗೆ ಸೇರಲಿದ್ದು, ಬಾಲಕನ ನಾಪತ್ತೆ ರಹಸ್ಯ ಹೊರಬೀಳಲಿದೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Fri, 23 December 22