ಇಂಜಿನಿಯರ್ ಗಂಡನಿಗೆ ಅಂಟಿಕೊಂಡಿತ್ತು ಐಪಿಎಲ್ ಬೆಟ್ಟಿಂಗ್ ಭೂತ: 54 ಲಕ್ಷ ರೂ ಸಾಲ, ನೊಂದ ಹೆಂಡತಿ ನೇಣಿಗೆ ಶರಣು
ಮದುವೆಯಾಗಿ 2 ವರ್ಷ ಸಂಸಾರ ಉತ್ತಮವಾಗಿಯೇ ನಡೆದಿತ್ತು. ಪುಟ್ಟ ಮಗುವೂ ಜತೆಯಾಗಿತ್ತು. ಅಷ್ಟರಲ್ಲೇ ಸಣ್ಣ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಗಂಡ ದರ್ಶನ್ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದು 12 ಜನರಿಗೆ ಖಾಲಿ ಚೆಕ್ ನೀಡಿ ಸುಮಾರು 54 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ. ಈ ಮಧ್ಯೆ ಸಾಲಗಾರರ ಕಿರುಕುಳ ಹೆಚ್ಚಾಗಿದೆ. ಇದರಿಂದ ನೊಂದ ದರ್ಶನನ ಹೆಂಡತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಕೋಟೆನಾಡು ದುರ್ಗದಲ್ಲಿ ನಡೆದಿದೆ.
ಖುದ್ದು ಇಂಜಿನಿಯರ್ ಆಗಲು ಬಯಸಿದ್ದವಳು ಪೋಷಕರ ಆಸೆಯಂತೆ ಇಂಜಿನಿಯರ್ ವರನನ್ನೇ (husband) ಕೈಹಿಡಿದಿದ್ದಳು. ಆದ್ರೆ, ಮದುವೆಯಾಗಿ ಮೂರೇ ವರ್ಷಕ್ಕೆ ಪತಿರಾಯ ಐಪಿಎಲ್ ಬೆಟ್ಟಿಂಗ್ ಗೆ ಬಲಿ ಆಗಿದ್ದು ಬಯಲಾಗಿದೆ. ಅಲ್ಲದೆ ಸಾಲಗಾರರ ಕಿರುಕುಳದಿಂದ ನೊಂದ ಅವಳು ಕೊನೆಗೆ ನೇಣಿಗೆ ಶರಣಾದ ದಾರುಣ ಘಟನೆ ಕೋಟೆನಾಡಿನಲ್ಲಿ (Chitradurga) ನಡೆದಿದೆ. ಸಣ್ಣ ನೀರಾವರಿ ಇಲಾಖೆ ಎಇ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಕ್ರಿಕೆಟ್ ಬೆಟ್ಟಿಂಗ್ ದಂಧೆ ( IPL betting), ಸಾಲಗಾರರ ಕಿರುಕುಳದಿಂದ (Debt, Loan) ಬೇಸತ್ತು ನೇಣಿಗೆ ಶರಣಾದ ಪತ್ನಿ. ಕಂಗಾಲಾಗಿ ಕುಳಿತ ಕುಟುಂಬಸ್ಥರು. ಹೌದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ನಗರದ ಬಸವ ಲೇಔಟ್ ನ ನಿವಾಸಿ ದರ್ಶನ್ ಹೊಸದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಇ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ, ಇಂಜಿನಿಯರಿಂಗ್ ಮೊದಲ ವರ್ಷದಲ್ಲಿದ್ದ ರಂಜಿತಾಳನ್ನು ಪೋಷಕರು ಈ ದರ್ಶನ್ ಗೆ ಕೊಟ್ಟು ಮದುವೆ ಮಾಡಿದ್ದರು (Wife).
ಮದುವೆಯಾಗಿ ಎರಡು ವರ್ಷ ಉತ್ತಮ ಸಂಸಾರವೇ ನಡೆದಿತ್ತು ಪುಟ್ಟ ಮಗುವೂ ಜತೆಯಾಗಿತ್ತು. ಅಷ್ಟರಲ್ಲೇ ದರ್ಶನ್ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು ಬಯಲಾಗಿತ್ತು. ಬೆಟ್ಟಿಂಗ್ ದಂಧೆಕೋರರೇ ಸಾಲ ನೀಡಿ ಖಾಲಿ ಚೆಕ್ ಪಡೆದಿದ್ದು ಸಹ ಕುಟುಂಬಸ್ಥರಿಗೆ ತಿಳಿದಿತ್ತು.
ಕುಟುಂಬದ ಹಿರಿಯರು ಸೇರಿ ನ್ಯಾಯ ಪಂಚಾಯತಿ ನಡೆಸಿ ಹಣ ಹಿಂದಿರಿಗಿಸುವುದಾಗಿ ಹೇಳಿ ಸಮಯ ಪಡೆದಿದ್ದಾರೆ. ಆದ್ರೂ. ದಂಧೆಕೋರರು ಮಾತ್ರ ಬೆನ್ನು ಬಿಡದ ಭೂತದಂತೆ ಬೆನ್ನು ಬಿದ್ದಿದ್ದಾರೆ. ಮನೆ ಬಳಿಗೆ ಬಂದು ಗಲಾಟೆ ಶುರು ಮಾಡಿದ್ದಾರೆ. ಅಲ್ಲದೆ ಫೋನ್ ಮಾಡಿ ಹಣ ವಾಪಸ್ ಕೊಡುವಂತೆ ಪೀಡಿಸುತ್ತಿದ್ದರು. ಹೀಗಾಗಿ, ನೊಂದ ರಂಜಿತಾ ತನ್ನ ಕೊಠಡಿಯೊಳಗೆ ನೇಣಿಗೆ ಶರಣಾಗಿದ್ದಾಳೆ. ಹೀಗಾಗಿ, ರಂಜಿತಾಳ ತಂದೆ ವೆಂಕಟೇಶ್ ಈ ಬಗ್ಗೆ ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆ.
Also Read: ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಬಾಳು ಕೊಟ್ಟಿದ್ದ! ಇದೀಗ ದೋಖಾ, ಬೀದಿಗೆ ಬಂದ ಮಹಿಳೆಯಿಂದ ತಮಟೆ ಹೊಡೆದು ಧರಣಿ
ಹೊಳಲ್ಕೆರೆಯ ಶಿವು, ಗಿರೀಶ್, ರಾಘು, ಚಿತ್ರದುರ್ಗದ ಸುದೀಪ್, ತಿಪ್ಪೇಸ್ವಾಮಿ, ವೆಂಕಟೇಶ್, ಗುರು, ವಾಗೀಶ್, ರಾಕೇಶ್, ಪಾವಗಡದ ಪೋತರೆಡ್ಡಿ, ಅಜ್ಜಂಪುರದ ಹೊನ್ನಪ್ಪ, ಹಿರಿಯೂರಿನ ಮಹಾಂತೇಶ್, ಜಗನ್ನಾಥ ಸೇರಿ ಹಲವರು ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಆದ್ರೆ, ಮೃತಳ ಸಂಬಂಧಿಕರು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಹೊಳಲ್ಕೆರೆ ಮಾತ್ರವಲ್ಲದೆ ಇಡೀ ಚಿತ್ರದುರ್ಗದಲ್ಲಿ ಈ ಪ್ರಕರಣದಿಂದಾಗಿ ಭೀತಿ ಸೃಷ್ಠಿ ಆಗಿದೆ. ಹೀಗಾಗಿ, ಅನೇಕರ ಬಲಿ ಪಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ತಡೆಯಬೇಕು. ಕಿಂಗ್ ಪಿನ್ ಗಳಿಗೆ ಮೊದಲು ಹೆಡೆಮುರಿ ಕಟ್ಟಬೇಕೆಂಬುದು ಇವ್ರ ಆಗ್ರಹ.
ಇನ್ನು ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂತೆಯೇ ಪೊಲೀಸ್ರು ಪ್ರಕರಣದ ಬಗ್ಗೆ ಈಗಾಗಲೇ ಡಿವೈಎಸ್ಪಿ ದಿನಕರ್, ಪಿಎಸ್ ಐ ಸುರೇಶ್ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದಾರೆ. 12 ಜನರ ಬಳಿ ಖಾಲಿ ಚೆಕ್ ನೀಡಿ ಸುಮಾರು 54 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ.
2021ರಿಂದ 23 ರವರೆಗೆ ಸಾಲ ಮಾಡಿದ್ದಾಗಿ ತಿಳಿದು ಬಂದಿದೆ. ಸಾಲದ ಹಣಕ್ಕಾಗಿ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದ ಆರೋಪಿಗಳಾದ ಶಿವು ಮತ್ತು ಗಿರೀಶ್ ಅವ್ರನ್ನು ಬಂಧಿಸಿದ್ದೇವೆ. ಮೀಟರ್ ಬಡ್ಡಿ ದಂಧೆ ಎಂಬುದು ಸಹ ತನಿಖೆ ವೇಳೆ ತಿಳಿದು ಬರುತ್ತಿದೆ. ಮುಂದಿನ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ ಪೊಲೀಸರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಮತ್ತು ಸಾಲಬಾಧೆಗೆ ಗೃಹಿಣಿ ಬಲಿ ಆಗಿದ್ದಾಳೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮತ್ತು ಮೀಟರ್ ಬಡ್ಡಿ ದಂಧೆಕೋರರಿಗೆ ಹೆಡೆಮುರಿ ಕಟ್ಟಿ ಅಮಾಯಕರ ಪ್ರಾಣ ಉಳಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ