ಲಾರಿ ಚಾಲಕನ ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ದಂಪತಿ ಅರೆಸ್ಟ್, ಹೇಗೆ?

| Updated By: ಸಾಧು ಶ್ರೀನಾಥ್​

Updated on: Feb 08, 2024 | 4:23 PM

ಕೊಲೆಯಾಗಿದ್ದ ಶ್ರೀನಿವಾಸನ ಮೊಬೈಲ್ ಸಿ.ಡಿ.ಆರ್. ಆಧಾರದ ಮೇಲೆ ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಮಾದನಾಯಕನಹಳ್ಳಿ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ. ಹತ್ಯೆ ರಾತ್ರಿ ಆತನೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ ರುಬಿಯಾ ಎಂಬ ಮಹಿಳೆಯನ್ನು ಅರೆಸ್ಟ್​ ಮಾಡಲಾಗಿದೆ. ಬಳಿಕ ವಿಚಾರಣೆ ನಡೆಸಿದಾಗ ಎ 1 ಆರೋಪಿ ನಾಗೇಂದ್ರ ಕುಮಾರ್ ಮತ್ತು ಮೃತ ಶ್ರೀನಿವಾಸ ಇಬ್ಬರೂ ಮಂಜುಳ ಎಂಬ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು.

ಲಾರಿ ಚಾಲಕನ ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ ದಂಪತಿ ಅರೆಸ್ಟ್, ಹೇಗೆ?
ಆರೋಪಿಗಳಾದ ನಾಗೇಂದ್ರ ಕುಮಾರ್-ಮಂಜುಳ, ಖೈಸರ್ ಪಾಷ-ರುಬಿಯಾ
Follow us on

ಕಳೆದ ಶುಕ್ರವಾರ (ಫೆಬ್ರವರಿ 2) ಬೆಳಗಿನ ಜಾವ 2.00 ರಿಂದ 4.00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎಸ್. ದೇವಗಾನಹಳ್ಳಿ ಗ್ರಾಮದ ವಾಸಿ ಕೆಎ-43-ಎ-2678 ಟಿಪ್ಪರ್ ಲಾರಿ ಚಾಲಕ (lorry driver) ಶ್ರೀನಿವಾಸ್ (30 ವರ್ಷ) ರವರನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದು, ದಾಸನಪುರ ಎ.ಪಿ.ಎಂ.ಸಿ ತರಕಾರಿ ಮಾರ್ಕೇಟ್ ಮುಂಭಾಗದ ರಸ್ತೆಯಲ್ಲಿ ಕೊಲೆ ನಡೆದಿತ್ತು. ಹತ್ಯೆ ಮಾಡುವ ಉದ್ದೇಶದಿಂದ ಚಾಲಕ ಶ್ರೀನಿವಾಸ್ ನನ್ನು ಆಟೋದಲ್ಲಿ ಎಳೆದುಕೊಂಡು ಹೋಗಿ ಹುಸ್ಕೂರು ಗ್ರಾಮದ ಸರ್ವೇ ನಂ. 139 ರ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ತಲೆ, ಮುಖ, ಮತ್ತು ಕುತ್ತಿಗೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಕೊಲೆಯ ಸಂಬಂಧ ಲಾರಿ ಮಾಲೀಕ ಲಾರಿಯ ಜಿ.ಪಿ.ಎಸ್ ಲೋಕೇಷನ್ ಆಧಾರದ ಮೇರೆಗೆ ಪತ್ತೆ ಮಾಡಿಕೊಂಡು ಸ್ಥಳಕ್ಕೆ ಬಂದಿದ್ದರು. ಬಂದು ಶವವನ್ನು ಗುರುತಿಸಿ ಕೊಲೆ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದರು. ಅದರ ಮೇರೆಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ (Madanayakanahalli Police ) ಮೊ. ನಂ. 99/2024 ಕಲಂ 302 ಐಪಿಸಿ ರೀತ್ಯಾ ಪ್ರಕರಣದ ತನಿಖೆ (police investigation) ನಡೆದಿತ್ತು.

ಆರೋಪಿಗಳ ಪತ್ತೆ ಬಗ್ಗೆ ಪ್ರಕರಣದಲ್ಲಿ ಕೊಲೆಯಾಗಿರುವ ಶ್ರೀನಿವಾಸ ಉಪಯೋಗಿಸುತ್ತಿದ್ದ ಮೊಬೈಲ್ ನಂಬರ್ ಸಿ.ಡಿ.ಆರ್. ಆಧಾರದ ಮೇಲೆ ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಕೊಲೆ ಪ್ರಕರಣ ಭೇದಿಸಲಾಗಿದೆ. ಹತ್ಯೆ ರಾತ್ರಿ ಆತನೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ ಮೃತ ಶ್ರೀನಿವಾಸನ ಮೊಬೈಲ್ ನಂಬರ್ ಗೆ ಹೆಚ್ಚು ಕರೆ ಮಾಡಿದ ರುಬಿಯಾ ಎಂಬ ಮಹಿಳೆಯನ್ನು ಪತ್ತೆ ಮಾಡಲಾಯಿತು. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಆಕೆ ನೀಡಿದ ಮಾಹಿತಿಯ ಮೇರೆಗೆ ಎ 1 ಆರೋಪಿ ನಾಗೇಂದ್ರ ಕುಮಾರ್ ಮತ್ತು ಮೃತ ಶ್ರೀನಿವಾಸ್ ಕೆ.ಟಿ ಅವರು ಮಂಜುಳ ಎನ್ನುವ ಹೆಂಗಸಿನೊಂದಿಗೆ ಅಕ್ರಮ ಸಂಬಂಧವವನ್ನು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಶ್ರೀನಿವಾಸನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ನಾಗೇಂದ್ರ ಎ2 ಖೈಸರ್ ಪಾಷ ಮತ್ತು ಎ3 ರುಬಿಯಾ ಜೊತೆ ಸೇರಿ ಸಂಚು ರೂಪಿಸಿದ್ದಾರೆ.

ಎ2 ಆರೋಪಿಯು ಹತ್ಯೆಗೀಡಾದ ಶ್ರೀನಿವಾಸನನ್ನು ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆಯ ಬಳಿಗೆ ಕರೆದಿಕೊಂಡು ಬಂದಿರುತ್ತಾನೆ. ದಿನಾಂಕ 28.01.2024 ರಂದು ರಾತ್ರಿ ಬೆಂಗಳೂರು ಹೈಗೌಂಡ್ಸ್ ಪೊಲೀಸ್ ಠಾಣೆ ಸರಹದ್ದು ಕಳ್ಳತನ ಮಾಡಿದ್ದ ಆಟೋವನ್ನು ಈ ಕೃತ್ಯಕ್ಕೆ ಬಳಸಲಾಗಿದೆ. ಆ ಆಟೋದಲ್ಲಿ ಶ್ರೀನಿವಾಸನನ್ನು ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ.

ಆರೋಪಿಗಳಾದ ಎ. ನಾಗೇಂದ್ರ ಕುಮಾರ್ @ ನಾಗ. ಬಿನ್ ಆಂಜಿನಪ್ಪ, 27ವರ್ಷ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ನಗರಗೆರೆ ನಿವಾಸಿ. ಎ 2 – ಖೈಸರ್ ಪಾಷ 30 ವರ್ಷ, ಬೆಂಗಳೂರು ನೀಲಸಂದ್ರದ ನಿವಾಸಿ. ಮತ್ತು ಎ3 ರುಬಿಯಾ 26 ವರ್ಷ ಬೆಂಗಳೂರು ನೀಲಸಂದ್ರ ನಿವಾಸಿ – ಇವರನ್ನೆಲ್ಲಾ ಈಗ ಬಂಧಿಸಿ ಪ್ರಕರಣವನ್ನು ಭೇದಿಸಲಾಗಿದೆ.


ಘಟನಾ ಸ್ಥಳಕ್ಕೆ ಬೆಂಗಳೂರು ಜಿಲ್ಲಾ ಪೊಲೀಸ್ ಆಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ಎಂ.ಎಲ್. ಪುರುಷೋತ್ತಮ್ ಮತ್ತು ನೆಲಮಂಗಲ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ಎಸ್. ಜಗದೀಶ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣದ ಆರೋಪಿಗಳ ಪತ್ತೆಗೆ ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ರವಿಕಾಂತೇ ಗೌಡ ಅವರ ಮಾರ್ಗದರ್ಶನದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಕೆ. ಮುರುಳೀಧರ, ಪಿ.ಎಸ್.ಐ ಗಳಾದ ಸೋಮಶೇಖರ್, ಪ್ರಶಾಂತ್, ಎ.ಎಸ್.ಐ. ಮೊಲ್ಲಗುಂಡಿ, ಸಿಬ್ಬಂದಿಗಳಾದ ನರೇಶ್‌ಕುಮಾರ್, ಫೈರೋಜ್, ಹಾಜಿಮಲಾಂಗ ಮತ್ತು ರವಿ ಶಾಖಾಪುರ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ