545 PSI Recruitment Scam: ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ ಐವರ ಜಾಮೀನು ಅರ್ಜಿ ತಿರಸ್ಕೃತ
545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಸಿಲುಕಿ ಅರೆಸ್ಟ್ ಆಗಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿದಂತೆ ಐವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿ ಮೂರನೇ ಜೆಎಂಎಫ್ಸಿ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದೆ.
ಬೆಂಗಳೂರು: ರಾಜ್ಯದಲ್ಲಿ ನಡೆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆ ಭರ್ತಿ ನೇಮಕಾತಿಯಲ್ಲಿ ನಡೆದ ಭಾರಿ ಅಕ್ರಮ(scam) ನಡೆದಿದ್ದು, ಈವರೆಗೆ ಬಂಧಿತರಾಗಿರುವ ಪ್ರಮುಖರು ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪೈಕಿ ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ ಐದು ಮಂದಿ ಸಲ್ಲಿಸಿದ ಜಾಮೀನು (bail) ಅರ್ಜಿ ಇಂದು ತಿರಸ್ಕೃತಗೊಂಡಿದೆ.
545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಸಿಲುಕಿ ಅರೆಸ್ಟ್ ಆಗಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಜೋತಿ ಪಾಟೀಲ್, ಅರ್ಚನಾ, ಸುನಿತಾ, ಶ್ರೀಧರ್ ಅವರು ಜಾಮೀನು ಕೋರಿ ಕಲಬುರಗಿ ಮೂರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಮಲ್ಲಿಕಾರ್ಜುನ ಸೇರಿ ಐವರ ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ. ಜಾಮೀನು ತಿರಸ್ಕೃತಗೊಂಡ ಹಿನ್ನೆಲೆ ಅವರಿಗೆ ಇನ್ನೂ ಕೆಲವು ದಿನಗಳ ಕಾಲ ಕಲಬುರಗಿ ಜೈಲು ಊಟವೇ ಗತಿಯಾಗಿದೆ.
ಇದನ್ನೂ ಓದಿ: 545 ಪಿಎಸ್ಐ ಅಕ್ರಮ
ರಾಜ್ಯದ 545 ಪಿಎಸ್ಐ ನೇಮಕಾತಿ ಸಂಬಂಧ ಜ.19ರಂದು ಲಿಖಿತ ಪರೀಕ್ಷೆಯ ಅಯ್ಕೆ ಪಟ್ಟಿ ಬಿಡುಗಡೆಯಾಗಿತ್ತು. ತಮ್ಮ ಹೆಸರು ಇದರಲ್ಲಿ ಇರಬಹುದು ಎಂದು ಯೋಚಿಸುತ್ತಿದ್ದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಯ್ಕೆ ಪಟ್ಟಿ ನೋಡಿ ನಿರಾಸೆಯಾಗಿದ್ದಲ್ಲದೆ, ಅಕ್ರಮದ ಆರೋಪವನ್ನು ಮಾಡಿದರು. ಅಲ್ಲದೆ, 40-80 ಲಕ್ಷದ ವರೆಗೆ ಡೀಲ್ಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದವು. ಈ ನಿಟ್ಟಿನಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ಒಪ್ಪಿಸಿತು. ತನಿಖೆ ಆರಂಭದ ನಂತರ ಆರೋಪಗಳಿಗೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳು ಹೊರಬಿದ್ದವು. ಅಲ್ಲದೆ, ಹಗರಣ ಸಂಬಂಧ ಈವರೆಗೆ 32 ಜನರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ಯಾರಿಗೂ ಜಾಮೀನು ಮಂಜೂರು ಆಗಿಲ್ಲ.
ಅಕ್ರಮ ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರ, ಆಯ್ಕೆ ಪಟ್ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಮರುಪರೀಕ್ಷೆಗೆ ತೀರ್ಮಾನ ಕೈಗೊಂಡಿದ್ದು, ಇದರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ. ಸರ್ಕಾರದ ಈ ನಡೆಗೆ ಈಗಾಗಲೇ ಕಷ್ಟಪಟ್ಟು ಓದಿ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳು ಅಸಮಧಾನ ಹೊರಹಾಕುತ್ತಿದ್ದು, ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ, ಆಯ್ಕೆ ಪಟ್ಟಿಗೆ ಸೇರಲು ಸಾಧ್ಯವಾಗದ ಅಭ್ಯರ್ಥಿಗಳು ಮರುಪರೀಕ್ಷೆ ಬರೆಯುವ ಸಂತಸದಲ್ಲಿ ಇದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ