ಗ್ವಾಲಿಯರ್: ಪೊಲೀಸ್ ವಶದಲ್ಲಿದ್ದಾಗಲೇ ಬುಕ್ಕಿ (ಬೆಟ್ಟಿಂಗ್ ದಂಧೆ ನಡೆಸುವಾತ) ಸಾವನ್ನಪ್ಪಿರುವುದರಿಂದ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಅಮಿತ್ ಸಂಘಿ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮೃತಪಟ್ಟ ಬುಕ್ಕಿಯ ಕುಟುಂಬಸ್ಥರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದು, ಪೊಲೀಸ್ ಸ್ಟೇಷನ್ನಲ್ಲಿ ಪೊಲೀಸರ ಕಿರುಕುಳದಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಈ ಘಟನೆ ತೀವ್ರ ವಿವಾದಕ್ಕೀಡಾಗಿ, ಆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಿ ಎಸ್ಪಿ ಸಂಘಿ ಆದೇಶ ಹೊರಡಿಸಿದ್ದಾರೆ.
ಇಂದರ್ಗಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟೌನ್ ಇನ್ಸ್ಪೆಕ್ಟರ್ ರಾಜೇಂದ್ರ ಪರಿಹಾರ್, ಅಡಿಷನಲ್ ಸಬ್ ಇನ್ಸ್ಪೆಕ್ಟರ್ ಬ್ರಿಜ್ಲಾಲ್, ಕಾನ್ಸ್ಟೆಬಲ್ಗಳಾದ ನರೇಶ್, ಮುಖೇಶ್, ಶ್ಯಾಮ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಲಾಗಿದೆ. ಸೋನು ಬನ್ಸಾಲ್ ಅವರಿಗೆ ಕಿರುಕುಳ ನೀಡಿ ಕೊಲ್ಲಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆದರೆ, ಈ ಬಗ್ಗೆ ಸತ್ಯಾಂಶ ಹೊರಬರಲಿ ಎಂಬ ಕಾರಣಕ್ಕೆ ತನಿಖೆಗೆ ಆದೇಶಿಸಲಾಗಿದೆ ಎಂದು ಎಸ್ಪಿ ಸಂಘಿ ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆಹಾಕಿ ಆ ದಿನ ಏನು ನಡೆದಿದೆ ಎಂವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬುಕ್ಕಿ ಸೋನು ಬನ್ಸಾಲ್ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ತೀವ್ರ ಸುಸ್ತಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಸಾವನ್ನಪ್ಪಿರುವ ವಿಷಯವನ್ನು ವೈದ್ಯರು ಘೋಷಿಸಿದ್ದರು. ಇದು ಪೊಲೀಸರೇ ಹಿಂಸೆ ನೀಡಿ ಮಾಡಿರುವ ಕೊಲೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದರು.
ಸೋಮವಾರ ರಾತ್ರಿ 8 ಗಂಟೆಗೆ ನಮ್ಮ ಮನೆಗೆ ಬಂದ ಪೊಲೀಸರು ನನ್ನ ಗಂಡನನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳಿದರು. ಸ್ಟೇಷನ್ಗೆ ಹೋಗಿ 10 ನಿಮಿಷದಲ್ಲಿ ವಾಪಾಸ್ ಬರುತ್ತೇನೆ ಎಂದು ಹೇಳಿಹೋದ ನನ್ನ ಗಂಡ ಬಂದಿದ್ದು ಹೆಣವಾಗಿ. ರಾತ್ರಿ 2 ಗಂಟೆಗೆ ಬಂದ ಪೊಲೀಸ್ ಕಾನ್ಸ್ಟೆಬಲ್ ನನ್ನ ಗಂಡ ಸಾವನ್ನಪ್ಪಿರುವ ವಿಷಯ ತಿಳಿಸಿದರು. ನನ್ನ ಗಂಡನ ದೇಹದ ಮೇಲೆ ಹಲ್ಲೆ ಮಾಡಿರುವ ಗಾಯದ ಗುರುತುಗಳಿತ್ತು. ಪೊಲೀಸರೇ ಅವರನ್ನು ಕೊಂದಿದ್ದಾರೆ ಎಂದು ಸೋನು ಬನ್ಸಾಲ್ ಅವರ ಪತ್ನಿ ಆರೋಪಿಸಿದ್ದಾರೆ.
ಇದನ್ನೂ ಓದಿ: Crime News: ಆನ್ಲೈನ್ ಗೇಮ್ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ
(Crime News: Bookie died in police custody in Madhya Pradesh Gwalior five Police suspended)