ಕ್ಲಾಸ್ರೂಂನಲ್ಲಿ ರಕ್ತದೋಕುಳಿ; ಟೀಚರ್ಗೆ ಚಾಕುವಿನಿಂದ ಚುಚ್ಚಿ ಕೊಂದ ವಿದ್ಯಾರ್ಥಿ
ಅಸ್ಸಾಂನ ಶಿವಸಾಗರ್‌ನಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನಿಗೆ ಕ್ಲಾಸ್ ರೂಂನಲ್ಲೇ ಇರಿದು ಕೊಂದಿರುವ ಭಯಾನಕ ಘಟನೆ ನಡೆದಿದೆ. ಇಂದು ತರಗತಿ ನಡೆದ ಬಳಿಕ ಈ ಕೊಲೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ತನ್ನನ್ನು ಬೈದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಕ್ಲಾಸ್ ರೂಂನಲ್ಲೇ ತನ್ನ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ. ಕೊಲೆ ಮಾಡಿದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯನ್ನು ಶಿವಸಾಗರದ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸರ ಪ್ರಕಾರ, ಕೊಲೆಗೀಡಾದ ಶಿಕ್ಷಕ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಹಿಂದಿನ ದಿನ ಯಾವುದೋ ವಿಷಯಕ್ಕೆ ಗದರಿಸಿದ್ದರು.
ಇದೇ ಕಾರಣಕ್ಕೆ ಆ ಶಿಕ್ಷಕನನ್ನು ವಿದ್ಯಾರ್ಥಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಚಾಕು ಇರಿತದ ಘಟನೆಯ ಮಾಹಿತಿ ಪಡೆದ ನಾವು ಕೋಚಿಂಗ್ ಸೆಂಟರ್ ತಲುಪಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರಿಗೆ ಚಾಕುವಿನಿಂದ ಇರಿದಿದ್ದಾನೆ. ತರಗತಿಯಲ್ಲಿ ರಕ್ತ ತುಂಬಿತ್ತು. ಅಲ್ಲಿ ಚಾಕು ಕೂಡ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ
ಚಾಕು ಇರಿತದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಿಕ್ಷಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಘಟನೆ ದಿನದ ಕೊನೆಯ ಪಿರಿಯಡ್ನಲ್ಲಿ ಸಂಭವಿಸಿದೆ ಎಂದು ಅಧಿಕಾರಿ ಹೇಳಿದರು. ಅಷ್ಟರಲ್ಲಾಗಲೇ ಇತರ ಶಿಕ್ಷಕರು ಮನೆಗೆ ತೆರಳಿದ್ದರು.
ನಾವು ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದೇವೆ. ಈ ಘಟನೆಗೆ ಕಾರಣವೇನು ಎಂಬುದು ನಮಗೆ ಇನ್ನೂ ತಿಳಿದಿಲ್ಲ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಹಿಂದಿನ ದಿನ ಯಾವುದೋ ವಿಷಯಕ್ಕೆ ಶಿಕ್ಷಕರು ಆತನಿಗೆ ಗದರಿಸಿದ್ದರು ಎಂದು ಆರೋಪಿಯ ಸಹಪಾಠಿಯೊಬ್ಬರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ