ಬೆಂಗಳೂರು: ರಸ್ತೆಯಲ್ಲಿ ನಿಂತು ಮದ್ಯ ಸೇವನೆ ಮಾಡುತ್ತಿದ್ದವರಿಗೆ ಬಾಗಲಗುಂಟೆ ಪೊಲೀಸ್ ಠಾಣೆಯ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಾರ್ ಒಳಗೆ ಜಾಗ ಇದ್ದರೂ ಒಂದಿಷ್ಟು ಜನರು ರಾತ್ರಿ 11 ಗಂಟೆಯ ನಂತರ ಬಾರ್ನಿಂದ ಹೊರಬಂದು ರಸ್ತೆ ಬದಿಯಲ್ಲಿ ಮದ್ಯ ಸೇವನೆ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡಲೂ ಭಯಪಡುವಂತಾಗಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದರು. ಕುಡಕರ ವರ್ತನೆಯಿಂದ ಬೇಸತ್ತ ಸ್ಥಳೀಯರು ಬಾರ್ ಪಕ್ಕದ ರಸ್ತೆಗಳಲ್ಲಿ ಕುಳಿತು ಮದ್ಯ ಸೇವಿಸುವರ ಗುಂಪುಗಳನ್ನು ತಪ್ಪಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ರಸ್ತೆಗೆ ಇಳಿದ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಲೋಕೇಶ್, ಕುಡುಕರಿಗೆ ಮತ್ತು ಬಾರ್ ಮಾಲೀಕರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಹೆಸರಘಟ್ಟ ರಸ್ತೆ, ತುಮಕೂರು ರಸ್ತೆ, ಪೈಪ್ ಲೈನ್ ರಸ್ತೆ ಬಾರ್ಗಳಿಗೆ ಭೇಟಿ ನೀಡಿ ಕ್ಯಾಷಿಯರ್ಗಳಿಗೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: Crime News: ತಂದೆಯನ್ನೇ ಕೊಂದು ತಿಂದ, ಪೊಲೀಸರನ್ನು ನೋಡಿ ಸಿಕ್ಕಿ ಬಿದ್ದ..!
ಲೈಟರ್ ವಿಚಾರಕ್ಕೆ ಅಂಗಡಿಗೆ ನುಗ್ಗಿ ಹಲ್ಲೆ
ಮೈಸೂರು: ಲೈಟರ್ ಖರೀದಿ ವಿಚಾರದಲ್ಲಿ ಪುಂಡರ ಗುಂಪೊಂದು ಅಂಗಡಿಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ವಸ್ತುಗಳನ್ನು ನಾಶ ಮಾಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪುಂಡರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ರಮೇಶ್ ಮತ್ತು ಶೋಭಾ ದಂಪತಿ ನಡೆಸುತ್ತಿದ್ದ ಚಹಾ ಮತ್ತು ಜ್ಯೂಸ್ ಅಂಗಡಿಗೆ ಎರಡು ದಿನಗಳ ಹಿಂದೆ ಇಬ್ಬರು ಯುವಕರು ಲೈಟರ್ ಖರೀದಿಸಲು ಬಂದಿದ್ದರು. ಈ ವೇಳೆ ಯುವಕರು ಲೈಟರ್ಗೆ 20 ರೂಪಾಯಿ ಏಕೆ? ನಿಮ್ಮ ಅಂಗಡಿಯಲ್ಲಿ ಲೈಟರ್ ರೇಟ್ ಜಾಸ್ತಿ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಈ ವೇಳೆ ರಮೇಶ್, ಬೇಕಾದರೆ ತೆಗೆದುಕೊಳ್ಳಿ ಇಲ್ಲಾ ಬೇರೆ ಅಂಗಡಿಗೆ ಹೋಗಿ ಎಂದಿದ್ದಾರೆ. ಇದರಿಂದ ಆಕ್ರೊಶಗೊಂಡ ಯುವಕರು, ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕೂಡಲೇ ಶೋಭಾ ಅವರು ಯುವಕರಿಗೆ ಹೊಡೆದು ಓಡಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿ ಪ್ರಕರಣ: ಬಂಧನಕ್ಕೊಳಗಾಗಿದ್ದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಿಡುಗಡೆ
ಅಷ್ಟಕ್ಕೇ ಸುಮ್ಮನಾಗದ ಯುವಕರು, ನಿನ್ನೆ ಬೆಳಗ್ಗೆ ಮತ್ತೆ ಕೆಲವರೊಂದಿಗೆ ಸೇರಿ ಅಂಗಡಿ ಬಳಿ ದಾಂಧಲೆ ನಡೆಸಿದ್ದಾರೆ. ಏಕಾಏಕಿ ಅಂಗಡಿಗೆ ನುಗ್ಗಿ ರಮೇಶ್ ಮತ್ತು ಶೋಭಾ ಅವರ ಮೇಲೆ ಹಲ್ಲೆ ನಡೆಸಿದ್ದು, ಅಂಗಡಿಯ ವಸ್ತುಗಳನ್ನು ಕಬ್ಬಿಣದ ರಾಡ್ ಮೂಲಕ ಪುಡಿಗೈದಿದ್ದಾರೆ. ಘಟನೆಯಲ್ಲಿ ದಂಪತಿ ಗಾಯಗೊಂಡಿದ್ದು, ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸಿಸಿ ಟಿವಿ ಪರಿಶೀಲನೆ ನಡೆಸಿದ್ದು, ಘಟನೆಯ ದೃಶ್ಯಾವಳಿಗಳು ಸೆರೆಯಾಗಿದೆ. ಇದನ್ನು ಆಧರಿಸಿ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸ್ನೇಹಿತನ ಹತ್ಯೆಗೆ ಯತ್ನ, ಆರೋಪಿಗಳು ಅರೆಸ್ಟ್
ಮೈಸೂರು: ಕೊಟ್ಟ ಹಣ ವಾಪಸ್ ನೀಡದಿದ್ದಕ್ಕೆ ಸ್ನೇಹಿತನ ಹತ್ಯೆಗೆ ಯತ್ನ ನಡೆಸಿದ ಇಬ್ಬರು ಆರೋಪಿಗಳನ್ನು ಹುಲ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ (24), ಮಲ್ಲಿಕಾರ್ಜುನ್ (21) ಬಂಧಿತ ಆರೋಪಿಗಳು. ಸ್ನೇಹಿತ ಅಭಿಗೆ ಆರೋಪಿ ಮನೋಜ್, 1.50 ಲಕ್ಷ ಸಾಲ ನೀಡಿದ್ದ. ಈ ಹಣ ವಾಪಸ್ ನೀಡದಿದ್ದಕ್ಕೆ ಆಕ್ರೋಶಗೊಂಡ ಮನೋಜ್, ಮಲ್ಲಿಕಾರ್ಜುನ ಜೊತೆ ಸೇರಿಕೊಂಡು ಅಭಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕತ್ತು ಕೊಯ್ದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಅಭಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ