ಅನ್ಯಕೋಮಿನ ಜೋಡಿಯ ಲವ್ವಿ ಡೌವ್ವಿ: ಯುವಕನಿಗೆ ಥಳಿತ, ಎಫ್ಐಆರ್ ದಾಖಲು
ಅನ್ಯಕೋಮಿನ ಯುವಕ-ಯುವತಿ ಮೇಲೆ ಎರಗಿದ ವಿದ್ಯಾರ್ಥಿಗಳ ಗುಂಪೊಂದು ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮುಂದುವರಿದಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಅನ್ಯಕೋಮಿನ ಜೋಡಿಯ ಮೇಲೆ ಎರಗಿದ ವಿದ್ಯಾರ್ಥಿಗಳ ಗುಂಪೊಂದು ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಎಂಟು ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿರುವ ಮುಸ್ಲಿಂ ಯುವಕ ಸನೀಫ್ ಸುಳ್ಯ ಮತ್ತು ಅದೇ ಕಾಲೇಜಿನ ಯುವರ್ತಿಯೋರ್ವಳು ಪರಸ್ಪರ ಪ್ರೀತಿಸುತ್ತಿದ್ದರು. ಅದರಂತೆ ಜೋಡಿ ನಿರಂತರ ಮಾತುಕತೆಯಲ್ಲಿ ತೊಡಗಿದ್ದರು. ಇದರಿಂದ ಕೆರಳಿದ ವಿದ್ಯಾರ್ಥಿಗಳ ಗುಂಪೊಂದು ಮಂಗಳವಾರ ಕಾಲೇಜು ಮೈದಾನಕ್ಕೆ ಯುವಕನನ್ನು ಕರೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.
ಸನೀಫ್ನ ಕಾಲರ್ ಪಟ್ಟಿ ಹಿಡಿದು ಯುವತಿಯೊಂದಿಗೆ ಯಾಕೆ ಮಾತನಾಡುತ್ತೀಯಾ? ಇನ್ನು ಮುಂದೆ ಯುವತಿಯೊಂದಿಗೆ ಮಾತನಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಸನೀಫ್ನ ಬೆನ್ನಿಗೆ ಬಾಸುಂಡೆಗಳು ಬರುವಂತೆ ಥಳಿಸಿದ್ದಾರೆ. ಪ್ರಕರಣ ಸಂಬಂಧ ಸನೀಫ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ಪೊಲೀಸರು ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 31 August 22