Mangalore: ಮತ್ತೊಬ್ಬ ಶಂಕಿತ ಉಗ್ರ ಪೊಲೀಸರ ವಶಕ್ಕೆ, ಭೂಗತ ಶಂಕಿತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ
ಬಂಧಿತ ಶಂಕಿತ ಉಗ್ರರ ಜೊತೆ ನಂಟು ಹೊಂದಿದ್ದ ವ್ಯಕ್ತಿಯನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅನ್ಸರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು: ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತ ಉಗ್ರರನ್ನು ಶಿವಮೊಗ್ಗದಲ್ಲಿ ಬಂಧಿಸಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಮಂಗಳೂರು ಮೂಲದ ಮಾಜ್ ಮುನೀರ್ ಅಹ್ಮದ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಮೊಹಮ್ಮದ್ ಶರೀಕ್ ಜೊತೆ ನಂಟು ಹೊಂದಿದ್ದ ಮಂಗಳೂರಿನ ಅನ್ಸರ್ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಅಜ್ಞಾತ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬಂಧಿತರ ಶಂಕಿತರ ಸಂಖ್ಯೆ ಮೂರಕ್ಕೇರಿದ್ದು, ತಲೆಮರೆಸಿಕೊಂಡಿರುವ ಶಿವಮೊಗ್ಗ ಮೂಲದ ಮತ್ತೋರ್ವನ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಐಸಿಸ್ ಉಗ್ರ ಸಂಘಟನೆಯ ಸಂಪರ್ಕಿದಲ್ಲಿದ್ದುಕೊಂಡು ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ನಡೆಯಲು ಭಾರಿ ಸಂಚು ರೂಪಿಸಿದ್ದ ಇಬ್ಬರು ಶಂಕಿತರನ್ನು ಶಿವಮೊಗ್ಗದಲ್ಲಿ ಪೊಲೀಸರು ಬಂಧಿಸಿದ್ದರು. ಇವರನ್ನು 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಶಿವಮೊಗ್ಗದ 3ನೇ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರಿಕ್‌ಗಾಗಿ ತೀವ್ರ ಶೋಧ ಮುಂದುವರಿದಿದೆ.
ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರೀಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಆಗಿರುವ ಸೈಯ್ಯದ್ ಯಾಸಿನ್ ಅಲಿಯಾಸ್ ಯಾಸೀನ್ ಅಲಿಯಾಸ್ ಬೈಲು ನನ್ನು ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸ್ರು ಕರ್ನಾಟಕದಲ್ಲಿ ಉಗ್ರ ಚಟುವಟಿಕೆ ನಡೆಯಲು ವ್ಯವಸ್ಥಿತ ಪಿತೂರಿ ರೂಪಿಸಿದ್ದರು ಎಂದು ಶಿವಮೊಗ್ಗ ಎಸ್ಪಿ ಬಿ ಎಂ ಲಕ್ಷ್ಮಿ ಪ್ರಸಾದ್ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಬಾಂಬ್ ತಯಾರಿಸಿದ ಬಂಧಿತರು, ಭೂಗತ ಉಗ್ರನ ಸುಳಿವು ನೀಡಿದರೆ 10 ಲಕ್ಷ ಬಹುಮಾನ
ಬಂಧಿತರ ಇಬ್ಬರ ಮೊಬೈಲ್ನಲ್ಲಿ ಬಾಂಬ್ ತಯಾರಿಕೆ ಮತ್ತು ವಿಧ್ವಂಸಕ ಕೃತ್ಯದ ವಿಡಿಯೋ ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಪತ್ತೆಯಾಗಿದೆ. ಇವರು ಸಣ್ಣ ಪ್ರಮಾಣದ ಬಾಂಬ್ ತಯಾರಿಕೆ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು.
ತೀರ್ಥಹಳ್ಳಿಯ ಭೂಗತ ಶಂಕಿತರ ಉಗ್ರ ಮತೀನ್ ತಲೆಮರೆಸಿಕೊಂಡು ಎರಡು ವರ್ಷಗಳು ಕಳೆದಿವೆ. ಈತನ ಸುಳಿವು ಇನ್ನೂ ಸಿಕ್ಕಿಲ್ಲ. ಈ ವ್ಯಕ್ತಿ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಪತ್ತೆ ಆಗಿತ್ತು, ಸದ್ಯ ಈ ವ್ಯಕ್ತಿಯ ಬಂಧನಕ್ಕೆ ಎನ್ಐ ಮುಂದಾಗಿದೆ. ಅದರಂತೆ ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಮತೀನ್ ತಮಿಳುನಾಡಿನ ಹಿಂದೂ ಕಾರ್ಯಕರ್ತನ ಹತ್ಯೆಯ ಆರೋಪಿ ಆಗಿದ್ದಾನೆ.
ಚಾಕು ಇರಿತ ಪ್ರಕರಣದ ತನಿಖೆಯಿಂದ ಮಾಹಿತಿ ಬಹಿರಂಗ
ಶಿವಮೊಗ್ಗದಲ್ಲಿ ನಡೆದಿದ್ದ ಪ್ರೇಮ ಸಿಂಗ್ ಚಾಕು ಇರಿತ ಪ್ರಕರಣದ ತನಿಖೆಯಿಂದ ಶಂಕಿತ ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಹೊರಬಿದ್ದಿದೆ. ಬಂಧಿತ ಉಗ್ರ ಮೊಬೈಲ್ನಲ್ಲಿ ವಿಧ್ವಂಸಕ ಕೃತ್ಯ ಎಲ್ಲ ಮಾಹಿತಿಗಳು ಪತ್ತೆಯಾಗಿದೆ.
ಶಿವಮೊಗ್ಗ ಪೊಲೀಸರಿಂದ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ಚಿಕ್ಕಲ್ ಭಾಗದ ತುಂಗಾ ನದಿ ತೀರಕ್ಕೆ ಕೊಂಡೊಯ್ದು ಸ್ಥಳ ಮಹಜರು ಮಾಡಲಾಗಿದೆ. ಬಂಧಿತ ಶಂಕಿತ ಉಗ್ರ ಯಾಸೀನ್‌ನನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದ್ದು, ಎಸ್‌ಪಿ ಲಕ್ಷ್ಮೀ ಪ್ರಸಾದ್, ಪ್ರಕರನದ ತನಿಖಾ ಅಧಿಕಾರಿಗಳು ಇದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 20 September 22